- ನೀರಿನ ಅಭಾವ ಉಂಟಾಗಿ ಊರುಗಳಿಗೆ ತೆರಳಲು ಮುಂದಾದ ವಿದ್ಯಾರ್ಥಿಗಳು
- ನೀರಿನ ಅಭಾವ ಇದ್ದರೂ ಮೂರನೇ ವರ್ಷದ ಯುಜಿ ಪರೀಕ್ಷೆ ಮುಂದುವರಿಕೆ
ನೀರಿನ ಅಭಾವ ಉಂಟಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಅಂತಿಮ ವರ್ಷದ ಯುಜಿ (ಬಿ.ಟೆಕ್) ಮತ್ತು ಪ್ರಥಮ ವರ್ಷದ ಪಿಜಿ ತರಗತಿಗಳು ಹಾಗೂ ಪರೀಕ್ಷೆಗಳನ್ನು ಕನಿಷ್ಠ ಎರಡು ವಾರಗಳವರೆಗೆ ಮುಂದೂಡಲು ನಿರ್ಧರಿಸಿದೆ.
ಎನ್ಐಟಿಕೆಯಲ್ಲಿ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಪ್ರತಿದಿನ ಒಟ್ಟು 10 ಲಕ್ಷ ಲೀಟರ್ ನೀರು ಬಳಕೆಯಾಗುತ್ತಿದೆ. ಆದರೆ, ಕಳೆದ ಮೂರು ವಾರಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಸರಬರಾಜು ಮಾಡುವ ನೀರಿನ ಮಟ್ಟ ದಿನಕ್ಕೆ 3.5 ಲಕ್ಷ ಲೀಟರ್‌ಗೆ ಇಳಿದಿದೆ.
ಪಾಲಿಕೆಯಿಂದ ನೀರು ಸರಬರಾಜು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಈಗ ಆಂತರಿಕ ನೀರಿನ ವ್ಯವಸ್ಥೆ ಮತ್ತು ಟ್ಯಾಂಕರ್ ನೀರನ್ನು ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ.
“ಪ್ರಸ್ತುತ ಬೇಸಿಗೆಯಲ್ಲಿ ತೀವ್ರ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಅಂತಿಮ ವರ್ಷದ ಬಿ.ಟೆಕ್ ಮತ್ತು ಮೊದಲ ವರ್ಷದ ಪಿಜಿ ಕೋರ್ಸ್‌ಗಳ ತರಗತಿಗಳು ಹಾಗೂ ಪರೀಕ್ಷೆಗಳನ್ನು ಮುಂದೂಡಲು ಸಂಸ್ಥೆ ನಿರ್ಧರಿಸಿದೆ” ಎಂದು ಡೀನ್ ವಿದ್ಯಾ ಶೆಟ್ಟಿ ಕೆ ತಿಳಿಸಿದ್ದಾರೆ.
ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಸುಮಾರು 2,000 ವಿದ್ಯಾರ್ಥಿಗಳಿದ್ದಾರೆ. ನೀರಿನ ಕೊರತೆ ಉಂಟಾಗಿರುವುದರಿಂದ ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದಾರೆ. ಹಾಗಾಗಿ ಪರೀಕ್ಷೆಗಳನ್ನು ಮುನ್ನಡೆಸುವ ಸಲುವಾಗಿ, ನಾವು ಈಗ ಶನಿವಾರ ಮತ್ತು ಭಾನುವಾರ ವಿದ್ಯಾರ್ಥಿಗಳಿಗೆ ಪೂರ್ಣ ದಿನದ ತರಗತಿಗಳನ್ನು ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | 47,000 ಮಂದಿ ಹಿರಿಯ ಮತದಾರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ
“ಶೈಕ್ಷಣಿಕ ವರ್ಷದ ವೇಳಾಪಟ್ಟಿಯಂತೆ ಈ ಕೋರ್ಸ್‌ಗಳ ತರಗತಿಗಳು ಏಪ್ರಿಲ್ 21ರಂದು ಕೊನೆಗೊಂಡು, ತಕ್ಷಣವೇ ಮೇ ಮೊದಲ ವಾರದಲ್ಲಿ ಪರೀಕ್ಷೆಗಳು ಕೊನೆಗೊಳ್ಳಬೇಕಿತ್ತು. ಈಗ ತರಗತಿಗಳು ಏಪ್ರಿಲ್ 12ರಂದು ಕೊನೆಗೊಂಡು ಏಪ್ರಿಲ್ 24ರೊಳಗೆ ಪರೀಕ್ಷೆಗಳು ಮುಕ್ತಾಯವಾಗುತ್ತವೆ.
“ಸಾಂಕ್ರಾಮಿಕ ರೋಗದಿಂದಾಗಿ ತಡವಾಗಿ ಪ್ರಾರಂಭವಾದ ಇತರ ಯುಜಿ ಮತ್ತು ಪಿಜಿ ಕೋರ್ಸ್‌ಗಳ ತರಗತಿಗಳನ್ನು ನಾವು ಮುನ್ನಡೆಸಲು ಸಾಧ್ಯವಿಲ್ಲ. ನಾವು ಮೂರನೇ ವರ್ಷದ ಯುಜಿ ಪರೀಕ್ಷೆಯನ್ನು ಮುಂದುವರಿಸಲು ಯೋಜಿಸಿದ್ದೇವೆ. ಆದರೆ, ಅದನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ” ಎಂದು ಹೇಳಿದರು.