ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಕೇರಳ ಮೂಲದ ಬಾಲಕನೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿ, ಆಕೆಯನ್ನು ತನ್ನ ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಗೆ ಹೆರಿಗೆಯಾಗಿ ಮಗು ಹುಟ್ಟಿದ ನಂತರವೇ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ಬಾಲಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಘಟನೆ 2025ರ ಡಿಸೆಂಬರ್ 21ರಂದು ನಡೆದಿದ್ದು, ಸುಮಾರು ಒಂಬತ್ತು ತಿಂಗಳ ನಂತರ 2026ರ ಸೆಪ್ಟೆಂಬರ್ 8ರಂದು ಬಾಲಕಿಯ ಆರೋಗ್ಯ ಹದಗೆಟ್ಟಿದ್ದರಿಂದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಮರುದಿನ ಸೆಪ್ಟೆಂಬರ್ 9ರಂದು ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಶೂನ್ಯ ಎಫ್‌ಐಆರ್ (ಅ.ಕ್ರ. 01/2026) ದಾಖಲಾಗಿದೆ. ಪ್ರಕರಣವನ್ನು ಪೋಕ್ಸೋ ಕಾಯ್ದೆಯ ಕಲಂ 4, 5(J)(ii), 5(L), 6 ಮತ್ತು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 64(2)(m) ಅಡಿ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳವನ್ನು ಆಧರಿಸಿ ಪ್ರಕರಣವನ್ನು ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳವು ಕೇರಳ ವ್ಯಾಪ್ತಿಗೆ ಬರುವುದರಿಂದ, ಕೇರಳ ಪೊಲೀಸರಿಗೆ ಪ್ರಕರಣ ವರ್ಗಾಯಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆ ಮುಂದುವರಿದಿದೆ.
This video cannot be played in your browser. Open the video directly






