ಕರ್ನಾಟಕದ ಕರಾವಳಿ ಭಾಗದ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇ 14ರಿಂದ 17ರವರೆಗೆ ಗುಡುಗು ಸಹಿತ ಮಳೆಯಾಗಲಿದ್ದು, 50-60 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಣಾ ಪ್ರಾಧಿಕಾರ(ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮೇ 13 ರಿಂದ 17ರವರೆಗೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಮೇ 13ರಂದು ಕರಾವಳಿಯಲ್ಲಿ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ನಂತರದ ದಿನಗಳಲ್ಲಿ ಮಿಂಚು ಮತ್ತು ಗುಡುಗು ಹೆಚ್ಚಾಗಿರುವುದಾಗಿ ಕೆಎಸ್‌ಎನ್‌ಡಿಎಂಸಿ ಸೂಚನೆ ನೀಡಿದೆ.
ಮೇ 14 ಮತ್ತು 15ರಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಮೇ 14 ಮತ್ತು 15ರಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ಗಂಟೆಗೆ 50 ರಿಂದ 60 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಜನತೆ ಜಾಗರೂಕರಾಗಿರಲು ಹವಾಮಾನ ಇಲಾಖೆ ಸೂಚಿಸಿದೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಮೇ 13, 16 ಮತ್ತು 17ರಂದು ರಾಜ್ಯದ ಉತ್ತರ ಒಳನಾಡಿನಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮೇ 13 ರಿಂದ 16ರವರೆಗೆ ದಕ್ಷಿಣ ಒಳನಾಡಿನಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ಮೇ 15 ಮತ್ತು 16ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೇ 15ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯ ಮುನ್ಸೂಚನೆಯನ್ನೂ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೇ 14 ಮತ್ತು 15ರಂದು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಮೇ 17ರಂದು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಸಮಾಜ ಕಲ್ಯಾಣ ಇಲಾಖೆ ಜೆಡಿ ಶ್ರೀನಿವಾಸನ್ ನಿಯೋಜನೆ ರದ್ದುಗೊಳಿಸಲು ದಲಿತ ಸಂಘಟನೆಗಳಿಂದ ಎಂಎಲ್ಸಿಗೆ ಮನವಿ
ಬಿರುಗಾಳಿ ಮತ್ತು ಗುಡುಗು ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸಿ. ಮರಗಳು, ಬ್ಯಾನರ್‌ಗಳು, ತಾತ್ಕಾಲಿಕ ರಚನೆಗಳ ಬಗ್ಗೆ ಎಚ್ಚರಿಕೆ ವಹಿಸಿ. ರೈತರು ಮತ್ತು ಮೀನುಗಾರರು ಎಚ್ಚರಿಕೆಯಿಂದಿರಿ. ಮೊಬೈಲ್, ಪವರ್‌ಬ್ಯಾಂಕ್ ಚಾರ್ಜ್ ಮಾಡಿಟ್ಟುಕೊಳ್ಳಿ ಎಂದು ಹವಾಮಾನ ಇಲಾಖೆ ಸಲಹೆಗಳನ್ನು ನೀಡಿದೆ.





