‘ಮಂಜು ಮಾತಾ’ (IFB Manju Matha) ಎಂಬ ಭಾರತೀಯ ಮೀನುಗಾರಿಕಾ ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರು ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಸಮುದ್ರದ ಪ್ರಕ್ಷುಬ್ಧತೆಯ ನಡುವೆಯೂ ಮೀನುಗಾರರನ್ನು ರಕ್ಷಿಸುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯು(ಐಸಿಜಿ) ಯಶಸ್ವಿಯಾಗಿದೆ.
ಸುರತ್ಕಲ್ ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲಿ ದೂರದಲ್ಲಿದ್ದ ಮೀನುಗಾರಿಕಾ ದೋಣಿಯಿಂದ ಬಂದ ವಿಹೆಚ್ಎಫ್ ಆರ್ಟಿ (VHF RT) ತುರ್ತು ಕರೆಯನ್ನು ಭಾರತೀಯ ಕರಾವಳಿ ಕಾವಲು ಪಡೆಯ ‘ಸಚೇತ್’ (ICGS Sachet) ಹಡಗು ಸ್ವೀಕರಿಸಿತು. ಸಮುದ್ರದ ಭೀಕರ ಪರಿಸ್ಥಿತಿಯಿಂದಾಗಿ ದೋಣಿಯೊಳಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗುತ್ತಿದ್ದು, ಹಲ್(ದೋಣಿಯ ತಳಭಾಗ) ಹಾನಿಗೊಳಗಾಗಿತ್ತು. ಇದು ದೋಣಿಯಲ್ಲಿದ್ದ ಆರು ಮಂದಿ ಸಿಬ್ಬಂದಿಯ ಜೀವಕ್ಕೆ ತಕ್ಷಣದ ಅಪಾಯವನ್ನು ತಂದೊಡ್ಡಿತ್ತು. ಈ ಹಿನ್ನೆಯಲ್ಲಿ ಸೋಮವಾರ ಸಂಜೆ ತುರ್ತು ಕರೆ ಮಾಡಿದಾಗ ಯಾವುದೇ ರೀತಿಯ ವಿಳಂಬ ಮಾಡದೆ ಕೂಡಲೇ ಕರೆಗೆ ಸ್ಪಂದಿಸಿದ ಐಸಿಜಿ, ನೆರವು ನೀಡಲು ತನ್ನ ಹಡಗನ್ನು ಆ ಕಡೆಗೆ ತಿರುಗಿಸಿದ್ದು, ಕೇವಲ 90 ನಿಮಿಷಗಳ ಒಳಗೆ ಸಂಕಷ್ಟದಲ್ಲಿದ್ದ ದೋಣಿಯ ಬಳಿಗೆ ತಲುಪಿದ ಭಾರತೀಯ ಕರಾವಳಿ ಕಾವಲು ಪಡೆಯು(ಐಸಿಜಿ) ಮಂಗಳೂರು ಕರಾವಳಿಯಲ್ಲಿ ನಡೆಸಿದ ಸವಾಲಿನ ಸಮುದ್ರ ಶೋಧ ಮತ್ತು ರಕ್ಷಣಾ(SAR) ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ.
ಈ ರಕ್ಷಣಾ ಕಾರ್ಯಾಚರಣೆಯನ್ನು ಅತ್ಯಂತ ತೀವ್ರವಾದ ಹವಾಮಾನ ಪರಿಸ್ಥಿತಿಯಲ್ಲಿ ನಡೆಸಲಾಗಿದ್ದು, ಪ್ರಕ್ಷುಬ್ಧ ಸಮುದ್ರ, ಬಲವಾದ ಗಾಳಿ, ಕಡಿಮೆ ದೃಷ್ಟಿಗೋಚರತೆ(visibility) ಮತ್ತು ಆವರಿಸುತ್ತಿದ್ದ ಕತ್ತಲೆಯಲ್ಲಿ ಕಾರ್ಯಾಚರಣೆ ಸಂಕೀರ್ಣವಾಗಿತ್ತು. ಹಾಗಾಗಿ ರಕ್ಷಣಾ ತಂಡದಿಂದ ಅಸಾಧಾರಣ ನಾವಿಕ ಕೌಶಲ್ಯ, ನಿಖರತೆ ಮತ್ತು ಸಮನ್ವಯತೆ ಬೇಕಾಗಿತ್ತು. ಈ ಕಠಿಣ ಸವಾಲುಗಳ ಹೊರತಾಗಿಯೂ, ಐಸಿಜಿಎಸ್ ಸಚೇತ್ ಹಡಗಿನ ಸಿಬ್ಬಂದಿ ಗಮನಾರ್ಹ ದಕ್ಷತೆಯೊಂದಿಗೆ ಕಾರ್ಯಾಚರಣೆ ಕೈಗೊಂಡರೆಂದು ಇಂಡಿಯಾ ಕೋಸ್ಟ್ ಗಾರ್ಡ್ ತಿಳಿಸಿದೆ.
ಅಚಲವಾದ ದೃಢಸಂಕಲ್ಪ ಮತ್ತು ಸುಧಾರಿತ ರಕ್ಷಣಾ ತಂತ್ರಜ್ಞಾನದ ಬೆಂಬಲದೊಂದಿಗೆ, ರಕ್ಷಣಾ ತಂಡವು ಪ್ರತಿಕೂಲ ಸಮುದ್ರ ಪರಿಸ್ಥಿತಿಗಳಲ್ಲಿ ಬಳಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ‘ರಿಮೋಟ್-ಆಪರೇಟೆಡ್ ಲೈಫ್ಬಾಯ್ಸ್’ (ದೂರದಿಂದ ನಿಯಂತ್ರಿಸಬಹುದಾದ ಜೀವರಕ್ಷಕ ಸಾಧನಗಳು) ಅನ್ನು ನಿಯೋಜಿಸಿ, ಸಿಲುಕಿಕೊಂಡಿದ್ದ ಮೀನುಗಾರರ ಬಳಿ ಸುರಕ್ಷಿತವಾಗಿ ತಲುಪಿ ರಕ್ಷಿಸಿತು. ಸಂಜೆ 6 ಗಂಟೆಗೆ ಉನ್ನತ ಕೌಶಲ್ಯ ಹೊಂದಿದ ಸಿಬ್ಬಂದಿಯ ನಿರಂತರ ಸಮನ್ವಯತೆಯಿಂದಾಗಿ ಎಲ್ಲ ಆರು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ರಾತ್ರಿ 11:30 ಕ್ಕೆ ಕಾರ್ಯಾಚರಣೆ ಮುಕ್ತಾಯವಾಯಿತು.
ಈ ಕಾರ್ಯಾಚರಣೆಯು ಸಮುದ್ರದಲ್ಲಿ ಜೀವಗಳನ್ನು ರಕ್ಷಿಸುವ ಭಾರತೀಯ ಕರಾವಳಿ ಕಾವಲು ಪಡೆಯ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಇದು ಅತ್ಯಂತ ಕಠಿಣವಾದ ಸಮುದ್ರ ತುರ್ತು ಪರಿಸ್ಥಿತಿಗಳನ್ನು ಜಯಿಸುವಲ್ಲಿ ಕರಾವಳಿ ಕಾವಲು ಪಡೆಯ ಸಿಬ್ಬಂದಿಯ ಧೈರ್ಯ, ತರಬೇತಿ ಮತ್ತು ವೃತ್ತಿಪರತೆಯೊಂದಿಗೆ ಆಧುನಿಕ ತಂತ್ರಜ್ಞಾನದ ಪರಿಣಾಮಕಾರಿ ಸಂಯೋಜನೆಯನ್ನು ಎತ್ತಿತೋರಿಸುತ್ತದೆ. ಭಾರತೀಯ ಕರಾವಳಿ ಕಾವಲು ಪಡೆಯು ತನ್ನ ಧ್ಯೇಯವಾಕ್ಯವಾದ ʼವಯಂ ರಕ್ಷಾಮಃʼ(ನಾವು ರಕ್ಷಿಸುತ್ತೇವೆ) ಎಂಬುದಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಕರಾವಳಿ ಪ್ರದೇಶದ ಮೇಲೆ ನಿರಂತರ ನಿಗಾ ಇರಿಸಿದೆ ಮತ್ತು ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕುವವರಿಗೆ ಸಕಾಲಿಕ ಸಹಾಯವನ್ನು ಖಚಿತಪಡಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿದ್ದೀರಾ? ಕೊಡಗು | ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಜುಲೈ 31ರವರೆಗೆ ನೋಂದಣಿ: ರೈತರಿಗೆ ಮನವಿ
ಹವಾಮಾನ ಪರಿಸ್ಥಿತಿಗಳಲ್ಲಿ ಇದೇ ರೀತಿಯ ಕಾರ್ಯಾಚರಣೆಗಳಿಗಾಗಿ, ಐಸಿಜಿ ತಮ್ಮ ಹಡಗುಗಳಿಂದ ಡ್ರೋನ್ಗಳನ್ನು ಸಮುದ್ರದಲ್ಲಿ ತೊಂದರೆಗೀಡಾದ ಜನರಿಗೆ ನೈಸರ್ಗಿಕವಾಗಿ ತೇಲುವ ಸಾಧನಗಳು ಅಥವಾ ಲೈಫ್ಬಾಯ್ಗಳನ್ನು ಸಾಗಿಸಲು ನಿಯೋಜಿಸುತ್ತದೆ. ನಂತರ ಅವರನ್ನು ರಕ್ಷಿಸಿ ಹಡಗಿಗೆ ತರಲಾಗುತ್ತದೆ.
ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ ತೊಂದರೆಗೊಳಗಾದ ಹಡಗಿನ ಎಲ್ಲ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಮೀನುಗಾರರು ಚೇತರಿಸಿಕೊಂಡ ನಂತರ, ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಲು ಮತ್ತು ಮುಂದಿನ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಐಸಿಜಿಎಸ್ ಸಚೇತ್ ಪ್ರಸ್ತುತ ನವಮಂಗಳೂರು ಪ್ರವೇಶಿಸಿದೆ.






