ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆಹಾನಿ ಸಂಭವಿಸಿದೆ.
ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಪ್ರದೇಶದಲ್ಲಿ ಜಯ ಸಪಲ್ಯ ಅವರ ಮನೆಯ ಚಾವಣಿ ಕುಸಿದು ಬಿದ್ದಿದ್ದು, ಮನೆಗೆ ಹಾನಿಯಾಗಿದೆ. ರಾಯಿ ಗ್ರಾಮದ ದಡ್ಡು ಎಂಬಲ್ಲಿ ಸೀತಾವತಿ ಕೋಂ ವಿಶ್ವನಾಥ ಪೂಜಾರಿ ಅವರ ಮನೆಯ ಪಕ್ಕಕ್ಕೆ ತೆಂಗಿನ ಮರ ಬಿದ್ದ ಪರಿಣಾಮ ಮನೆಯ ಭಾಗಕ್ಕೆ ಹಾನಿಯಾಗಿದೆ.
ಇದೇ ವೇಳೆ, ನರಿಕೊಂಬು ಗ್ರಾಮದ ಮೊಗರ್ನಾಡು ಪ್ರದೇಶದಲ್ಲಿ ಪ್ರಶಾಂತ್ ಬಿನ್ ವಾಸು ಸಪಲ್ಯ ಅವರ ವಾಸದ ಮನೆಗೂ ಮಳೆಯಿಂದ ಹಾನಿಯಾಗಿದೆ. ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಆಡಳಿತ ಮನವಿ ಮಾಡಿದೆ.





