ಖರೀದಿ ಕೇಂದ್ರಗಳ ಮೂಲಕ ಖರೀದಿಸಿರುವ ಜೋಳದ ಬಾಕಿ ಹಣವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ರೈತಪರ ಸಂಘಟನೆಗಳ ಒಕ್ಕೂಟ ಹಾಗೂ ಜೋಳ ಬೆಳೆಗಾರರ ಒಕ್ಕೂಟಗಳ ನೇತೃತ್ವದಲ್ಲಿ ರೈತರು ಮಂಗಳವಾರ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು.
2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳ ಮೂಲಕ ರೈತರಿಂದ ಜೋಳದ ಬೆಳೆ ಖರೀದಿ ಮಾಡಿ ಸುಮಾರು ಐದಾರು ತಿಂಗಳು ಗತಿಸಿದ್ದರೂ ಜೋಳದ ಬಾಕಿ ಹಣವನ್ನು ಪಾವತಿಸುವಲ್ಲಿ ವಿಫಲವಾಗಿದೆ. ಪ್ರಸ್ತುತ ಸಾಲಿನಲ್ಲಿ ಮಳೆಯಿಲ್ಲದೆ, ಬೆಳೆಗಳಿಲ್ಲದೆ ರೈತರು ತುಂಬಾ ಸಂಕಷ್ಟದ್ದಾರೆ. ಆದರೂ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ಪ್ರತಿಭಟನಕಾರರು ದೂರಿದರು.
‘ಈಗ ಮುಂಗಾರ ಮುಗಿದು ಹಿಂಗಾರು ಶುರುವಾಗಿದ್ದು, ಸತತವಾಗಿ ಮಳೆಯಿಲ್ಲದೆ ಇದುವರೆಗೂ ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಾಕಿ ಶುಲ್ಕಗಳ ಪಾವತಿ, ಕೃಷಿ ಬ್ಯಾಂಕ್ ಸಾಲ ಪಾವತಿ ಹಾಗೂ ಕೃಷಿ ಚಟುವಟಿಕೆಗಳಿಗೆ ಸಾಮಗ್ರಿಗಳನ್ನು ಖರೀದಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಜೋಳದ ಬಾಕಿ ಹಣ ಪಾವತಿ ಕುರಿತು ಈ ಹಿಂದೆ ಹಲವು ಬಾರಿ ಹೋರಾಟ ನಡೆಸಿ ಸಚಿವರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಪತ್ರ ನೀಡಿ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ದೊರೆತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೋತ್ನಾಳ, ಸುತ್ತಮತ್ತಲಿನ ಸುಮಾರು ಮೂವತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಕೂಡಲೇ ಪೋತ್ನಾಳ ಹಳ್ಳಕ್ಕೆ ಕುಡಿಯುವ ನೀರನ್ನು ಬಿಡುಗಡೆ ಮಾಡಬೇಕು. ಪೋತ್ನಾಳ ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು ಪೂರೈಸಬೇಕು. ರಾಜ್ಯ ಹೆದ್ದಾರಿಯಲ್ಲಿ ಸುಮಾರು ಎರಡು ತಾಸು ಕುಳಿತು ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನನಿರತ ಮುಖಂಡರು ಹಾಗೂ ರೈತರ ಜತೆಗೆ ಚರ್ಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಆಲಿಸುವವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸುವುದಾಗಿ ರೈತ ಮುಖಂಡರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಶಕಗಳಿಂದ ಬಸ್ ಸಂಪರ್ಕ ಕಾಣದ ಕೋಳೂರು: 4 ಕಿಮೀ ನಡದೇ ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು
ರೈತ ಮುಖಂಡರಾದ ಅಮೀನ್ ಪಾಷ ದಿದ್ದಿಗಿ, ದುರುಗಪ್ಪ ತಡಕಲ್, ನಾಗನಗೌಡ ಖರಾಬದಿನ್ನಿ, ವೈದ್ಯ ಡಾ.ಬಿ.ಬಸವರಾಜಪ್ಪ, ರಾಜಾ ರಾಮಚಂದ್ರ ನಾಯಕ, ಕೆ.ಎಸ್.ಕುಮಾರಸ್ವಾಮಿ, ಎಚ್.ಶರ್ಪುದ್ದೀನ್ ಪೋತ್ನಾಳ, ಮಲ್ಲೇಶಪ್ಪ ದೇವರಮನಿ, ಯಲ್ಲಪ್ಪ ಪೋತ್ನಾಳ, ರಾಮನಗೌಡ ಖರಾಬದಿನ್ನಿ,ಚನ್ನನಗೌಡ ಬನ್ನಿಗನೂರು, ಬಸವಂತ್ರಾಯಗೌಡ ಮುದ್ದಮಗುಡ್ಡಿ, ಬಸವರಾಜ ಗೋಡಿಹಾಳ, ಬಸವರಾಜ ಹಂಚಿನಾಳ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು




