ಇರಾನ್ ವಿರುದ್ಧ ಮತ್ತೆ ಭಾರೀ ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಅವರನ್ನು ಈ ಬಾರಿ ಅತ್ಯಂತ ಬಲವಾಗಿ ಹೊಡೆಯಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಈ ವಾರಾಂತ್ಯದಲ್ಲೇ ಅಮೆರಿಕ ಸೇನೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಇರಾನ್ ಶರಣಾಗುವಂತೆ ಒತ್ತಡ ಹೇರಲು ಹೊಸ ಸೇನಾ ಕಾರ್ಯಾಚರಣೆ ನಡೆಸುವಂತೆ ಟ್ರಂಪ್ ಅಮೆರಿಕ ಸೇನೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮೆರಿಲ್ಯಾಂಡ್‌ನ ಕ್ಯಾಂಪ್ ಡೇವಿಡ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಟ್ರಂಪ್, “ನಾವು ಅವರನ್ನು ಅತ್ಯಂತ ಕಠಿಣವಾಗಿ ಹೊಡೆಯಲಿದ್ದೇವೆ. ಒಂದು ಹಂತದಲ್ಲಿ ಅವರು ‘ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳುವ ಪರಿಸ್ಥಿತಿ ಬರುತ್ತದೆ. ನಮಗೆ ಬೇಕಿರುವುದು ಗೆಲುವು ಮಾತ್ರ” ಎಂದು ಹೇಳಿದ್ದಾರೆ.
ಇರಾನ್ ಮೇಲೆ ತಮಗೆ ವಿಶ್ವಾಸ ಕಡಿಮೆಯಾಗುತ್ತಿದೆ ಎಂದು ಹೇಳಿದ ಟ್ರಂಪ್, “ಅವರು ಸುಳ್ಳು ಹೇಳುತ್ತಾರೆ ಮತ್ತು ವಾಸ್ತವಗಳನ್ನು ತಿರುಚಿ ಹೇಳುತ್ತಾರೆ” ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್‌ನ ಇಂಧನ ಮೂಲಸೌಕರ್ಯಗಳು ಹಾಗೂ ತೈಲ ಸಂಸ್ಕರಣಾ ಘಟಕಗಳ ಮೇಲೆ ಇದುವರೆಗಿನ ಅತ್ಯಂತ ತೀವ್ರ ಬಾಂಬ್ ದಾಳಿಗಳಲ್ಲಿ ಒಂದನ್ನು ನಡೆಸುವ ಕುರಿತು ಚರ್ಚೆ ನಡೆಸುತ್ತಿವೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಈ ದಾಳಿ ನಡೆದರೆ, ಅಮೆರಿಕ-ಇರಾನ್ ಕದನ ವಿರಾಮದ ಬಳಿಕ ಇಸ್ರೇಲ್ ಮತ್ತೆ ನೇರ ಸೇನಾ ಕಾರ್ಯಾಚರಣೆಗೆ ಮರಳಿದಂತಾಗಲಿದೆ.
ಜಾಗತಿಕ ಮಾರುಕಟ್ಟೆಗಳ ಮೇಲಿನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಸೋಮವಾರ ಹಣಕಾಸು ಮಾರುಕಟ್ಟೆಗಳು ಆರಂಭವಾಗುವ ಮುನ್ನವೇ ಕಾರ್ಯಾಚರಣೆ ಪೂರ್ಣಗೊಳಿಸುವ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಲಾಗಿಲ್ಲ. ಇಸ್ರೇಲ್‌ಗೆ ಈ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲಾಗಿದ್ದು, ಅಮೆರಿಕದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎನ್ನಲಾಗಿದೆ. ಆದರೆ ದಾಳಿಗೆ ಅಂತಿಮ ಅನುಮೋದನೆ ನೀಡುವ ಆದೇಶವನ್ನು ಟ್ರಂಪ್ ಇನ್ನೂ ಹೊರಡಿಸಿಲ್ಲ.
ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್, “ಅಧ್ಯಕ್ಷ ಟ್ರಂಪ್ ಅಧಿಕಾರದಲ್ಲಿರುವವರೆಗೆ ಇರಾನ್‌ಗೆ ಅಣ್ವಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ. ಈ ಹೋರಾಟದಲ್ಲಿ ಅಮೆರಿಕವೇ ಗೆಲ್ಲಲಿದೆ” ಎಂದು ಹೇಳಿದ್ದಾರೆ. ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯ ವಕ್ತಾರ ಸೀನ್ ಪಾರ್ನೆಲ್ ಕೂಡ ಸೇನೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಾತ್ಯತೀತ ನೇಪಾಳದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಹಿಂದೆ ಆರೆಸ್ಸೆಸ್ ಕೈವಾಡದ ಶಂಕೆ?
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯೊಂದಿಗೆ ಆರಂಭವಾದ ಸಂಘರ್ಷ ಕಳೆದ ತಿಂಗಳು ಕದನ ವಿರಾಮದ ಹಂತ ತಲುಪಿದ್ದರೂ, ಅಮೆರಿಕ ಮಾತ್ರ ತನ್ನ ಉಪಟಳ ಮುಂದುವರೆಸಿತ್ತು. ಪ್ರತಿಯಾಗಿ ಇರಾನ್ ಕೂಡ ದಾಳಿ ಮುಂದುವರಿಸಿತ್ತು. ಅಮೆರಿಕದ ನಾಯಕತ್ವ ದಾಹ, ಇರಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಬೇಕೆನ್ನುವ ಹಪಾಹಪಿಯಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಇದಾದ ಬಳಿಕ ಇರಾನ್, ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದು, ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ರಸಗೊಬ್ಬರ ಸಾಗಣೆಗೆ ಅಡ್ಡಿಯಾಗಿದೆ. ಅಲ್ಲದೆ, ಪರ್ಷಿಯನ್ ಕೊಲ್ಲಿ ರಾಷ್ಟ್ರಗಳು ಹಾಗೂ ಈಜಿಪ್ಟ್‌ನ ಡಮಿಯೆಟ್ಟಾ ಬಂದರಿನ ಸಮೀಪ ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಿಸುತ್ತಿದ್ದ ಹಡಗುಗಳ ಮೇಲೂ ಡ್ರೋನ್ ದಾಳಿಗಳು ನಡೆದಿರುವುದಾಗಿ ವರದಿಯಾಗಿದೆ.




