ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹವಾಮಾನ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆಗಸ್ಟ್ 3ರಂದು ಜಿಲ್ಲೆಯ ವಿವಿಧ ತಾಲೂಕುಗಳ ಶಾಲೆ, ಅಂಗನವಾಡಿ ಹಾಗೂ ಕೆಲವು ಕಾಲೇಜುಗಳಿಗೆ ರಜೆ ಘೋಷಿಸಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ–2005ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಎಲ್ಲಿ ರಜೆ?
ಮಂಗಳೂರು ಉಪವಿಭಾಗ ವ್ಯಾಪ್ತಿಯ ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ ಹಾಗೂ ಉಳ್ಳಾಲ ತಾಲೂಕುಗಳಲ್ಲಿ:
- ಎಲ್ಲಾ ಅಂಗನವಾಡಿ ಕೇಂದ್ರಗಳು
- ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು
- 10ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ (ವಸತಿ ಶಾಲೆಗಳು ಸೇರಿ) ರಜೆ.
ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ:
- ಎಲ್ಲಾ ಅಂಗನವಾಡಿ ಕೇಂದ್ರಗಳು
- ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು
- ಪದವಿ ಪೂರ್ವ ಕಾಲೇಜುಗಳು
- ಎಲ್ಲಾ ಐಟಿಐ ಹಾಗೂ ಡಿಪ್ಲೊಮಾ ಕಾಲೇಜುಗಳು
- 12ನೇ ತರಗತಿಯವರೆಗೆ (ವಸತಿ ಶಾಲೆ ಹಾಗೂ ಕಾಲೇಜುಗಳು ಸೇರಿ) ರಜೆ ಘೋಷಿಸಲಾಗಿದೆ.
ಜಿಲ್ಲಾಡಳಿತದ ಮುನ್ನೆಚ್ಚರಿಕೆ ಸೂಚನೆಗಳು
- ಮಕ್ಕಳು ನೀರು ತುಂಬಿರುವ ತಗ್ಗು ಪ್ರದೇಶಗಳು, ಕೆರೆ, ನದಿ ಹಾಗೂ ಸಮುದ್ರ ತೀರಗಳಿಗೆ ಹೋಗದಂತೆ ಪಾಲಕರು ವಿಶೇಷ ಎಚ್ಚರಿಕೆ ವಹಿಸಬೇಕು.
- ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಲಾಗಿದೆ.
- ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿತೀರ ಮತ್ತು ಸಮುದ್ರತೀರ ಪ್ರದೇಶಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ.
- ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಳ್ಳಬೇಕು ಹಾಗೂ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು.
- ಪ್ರತಿ ತಾಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಸಂಬಂಧಿತ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯವಿಲ್ಲದ ಪ್ರಯಾಣವನ್ನು ತಪ್ಪಿಸಿ, ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.






