ಮಂಗಳೂರಿನಿಂದ ಮೂಡುಬಿದಿರೆ-ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿ ಅವೈಜ್ಞಾನಿಕವಾಗಿ ನಡೆದ ಪರಿಣಾಮ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ತಲೆದೋರುತ್ತಿವೆ. ಕುಡುಪು, ಕೆತ್ತಿಕಲ್ ಹಾಗೂ ಎಡಪದವು ಪ್ರದೇಶಗಳಲ್ಲಿ ಗುಡ್ಡಗಳನ್ನು ಅಪಾಯಕಾರಿಯಾಗಿ ಕೊರೆದು ರಸ್ತೆ ನಿರ್ಮಿಸಿರುವ ಪರಿಣಾಮ ಇದೀಗ ಗುಡ್ಡ ಜರಿತ, ರಸ್ತೆ ಬಿರುಕು ಹಾಗೂ ಭೂ ಕುಸಿತದಂತಹ ಘಟನೆಗಳು ಸಂಭವಿಸುತ್ತಿವೆ.
ಕಳೆದ ಒಂದು ವಾರದಿಂದ ಸುರಿದ ನಿರಂತರ ಮಳೆಯಿಂದ ಎಡಪದವು ಪ್ರದೇಶದಲ್ಲಿ ಹೆದ್ದಾರಿಯ ಒಂದು ಪಾರ್ಶ್ವ ಸಂಪೂರ್ಣ ಜರಿದು ಹೋಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಸುಮಾರು 15 ಅಡಿ ಎತ್ತರಕ್ಕೆ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಲಾಗಿದ್ದರೂ, ಅದರ ಎರಡೂ ಬದಿಗಳಲ್ಲಿ ಯಾವುದೇ ತಡೆಗೋಡೆ ಅಥವಾ ರಕ್ಷಣಾ ವ್ಯವಸ್ಥೆ ನಿರ್ಮಿಸದಿರುವುದು ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳ ನಿರ್ಲಕ್ಷ್ಯವನ್ನು ಬಯಲಿಗೆಳೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆಯಿಂದ ರಸ್ತೆಯ ಎರಡೂ ಬದಿಗಳಲ್ಲಿ ನೀರು ನಿಂತು ನದಿಯಂತಾಗಿದ್ದು, ಸುತ್ತಮುತ್ತಲಿನ ಕೃಷಿಭೂಮಿಗಳಿಗೆ ಭಾರೀ ಹಾನಿಯಾಗಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಅಡಿಕೆ ಹಾಗೂ ತೆಂಗಿನ ಮರಗಳು ಹಾನಿಗೊಳಗಾಗಿದ್ದು, ತೋಟದ ಬಾವಿಗಳು ಮಣ್ಣಿನಿಂದ ತುಂಬಿ ಬಳಕೆಗೆ ಅಸಾಧ್ಯವಾಗಿವೆ.
ಇಂತಹ ಅಪಾಯಕಾರಿಯಾದ ರಸ್ತೆ ನಿರ್ಮಾಣದಿಂದ ವಾಹನ ಸಂಚಾರಕ್ಕೂ ಭೀತಿ ಎದುರಾಗಿದ್ದು, ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ ಮತ್ತಷ್ಟು ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದ್ದು, ತಕ್ಷಣವೇ ಶಾಶ್ವತ ರಕ್ಷಣಾ ಕಾಮಗಾರಿ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಮುನೀರ್ ಪದ್ರೆಂಗಿ, ರಾಷ್ಟ್ರೀಯ ಹೆದ್ದಾರಿ 169 ರ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಂಪೂರ್ಣ ರಸ್ತೆಯೇ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕುಡುಪು, ಕೆತ್ತಿಕಲ್, ಎಡಪದವು, ತೋಡಾರು, ಹಂಡೇಲು ಪ್ರದೇಶದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆ ನಿರ್ಮಾಣ ಮಾಡಿಲಾಗಿದೆ. ಮಂಗಳೂರಿನಲ್ಲಿ ಶಿರೂರು ರೀತಿಯ ದುರಂತ ಸಂಭವಿಸುವುದಕ್ಕಿಂತ ಮುಂಚೆ ಸಂಸದರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಳ್ಳಬೇಕು. ಈಗಾಗಲೇ ಕುಸಿದಿರುವ ಎಡಪದವು ರಸ್ತೆಯಲ್ಲಿ ಯಾವುದೇ ಹೆಚ್ಚಿನ ಅಪಾಯ ಆಗದ ಹಾಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ರಸ್ತೆ ಕುಸಿದು ಹಾನಿಗೀಡಾದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಯಾವುದೇ ಅಪಾಯ ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ನೇರ ಹೊಣೆಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.






