ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಲಾದ 2025ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ‘ಪಿರ್ಸ ಪ್ಪಾಡ್’ ಬ್ಯಾರಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಉಳ್ಳಾಲದ ಕಲ್ಲಾಪು ಸಮೀಪದ ಯೂನಿಟಿ ಹಾಲ್‌ನಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಫರೀದ್ ಅವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಿದರು. ಬ್ಯಾರಿ ಭಾಷಾ ಕ್ಷೇತ್ರದಲ್ಲಿ ಅತ್ತೂರು ಚೆಯ್ಯಬ್ಬ, ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಆಯಿಷಾ ಯು.ಕೆ. ಹಾಗೂ ಬ್ಯಾರಿ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅಬ್ದುಲ್ ಸಮದ್ ಕಾಟಿಪಳ್ಳ ಅವರು 2025ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾದರು.
ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಅಭಿನಂದನಾ ಭಾಷಣ ಮಾಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಹರೇಕಳ ಹಾಜಬ್ಬ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಚಿಕ್ಕಮಗಳೂರು ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಎಚ್.ಯು. ಫಾರೂಕ್ ತರೀಕೆರೆ, ಬ್ಯಾರಿ ಕಲಾರಂಗದ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಡಾ. ಇ.ಕೆ.ಎ. ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು.
ಅಲ್ಲದೆ, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ‘ಮೇಲ್ತೇನೆ’ ಅಧ್ಯಕ್ಷ ಮಂಗಳೂರ ರಿಯಾಝ್, ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಝ್ ಕಲಾಯಿ ಹಾಗೂ ಮುಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಸಾರ್ ಅಹ್ಮದ್ ಮುಲ್ಕಿ ಸೇರಿದಂತೆ ಹಲವು ಬ್ಯಾರಿ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.
ದಫ್ ತಂಡಗಳಿಗೆ ಪ್ರೋತ್ಸಾಹ, ಸಾಂಸ್ಕೃತಿಕ ಕಲರವ
ಬ್ಯಾರಿ ಕಲಾ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಆಯ್ದ ದಫ್ ಕಲಾ ತಂಡಗಳಿಗೆ ದಫ್ ವಿತರಿಸಲಾಯಿತು. ಈ ಮೂಲಕ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ವಿಶೇಷ ಆಸಕ್ತಿ ವಹಿಸಿತು.
ಸಮಾರಂಭದ ಅಂಗವಾಗಿ ವಿವಿಧ ಕಲಾ ತಂಡಗಳಿಂದ ದಫ್ ಕುಣಿತ, ಒಪ್ಪನೆ ಹಾಡು, ಕೋಲಾಟ ಹಾಗೂ ಬ್ಯಾರಿ ಹಾಡುಗಳ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಕಲಾವಿದರ ಮನಮೋಹಕ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು.
ಗೌರವ ಪ್ರಶಸ್ತಿ ಪ್ರದಾನ, ಕುಟುಂಬ ಸಮ್ಮಿಲನ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬ್ಯಾರಿ ಭಾಷೆ, ಸಾಹಿತ್ಯ ಮತ್ತು ಕಲಾ ಪರಂಪರೆಯ ಮಹತ್ವವನ್ನು ಸಾರಿದ ಈ ಕಾರ್ಯಕ್ರಮವು ಸಮುದಾಯದ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಅಭಿಮಾನಕ್ಕೆ ಸಾಕ್ಷಿಯಾಯಿತು.





