ಕರ್ನಾಟಕ ಸರ್ಕಾರದ ‘ಬಿಯಾಂಡ್ ಬೆಂಗಳೂರು ಮಿಷನ್’ ಹಾಗೂ ‘ಲೀಪ್’ ಉಪಕ್ರಮದಡಿ ಸ್ಟಾರ್ಟ್‌ಅಪ್‌ಗಳಿಗೆ ವೇಗ ನೀಡುವ ಉದ್ದೇಶದಿಂದ ಆರಂಭಿಸಿರುವ ಕೆ-ಕಾಂಬಿನೇಟರ್ ಕಾರ್ಯಕ್ರಮವನ್ನು ಮುನ್ನಡೆಸಲು ಟೈ ಮಂಗಳೂರು ಆಯ್ಕೆಯಾಗಿದೆ. ಈ ಮೂಲಕ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಭರವಸೆಯ ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟೈ ಮಂಗಳೂರು ಅಧ್ಯಕ್ಷ ಶ್ಯಾಂ ಪ್ರಸಾದ್ ಹೆಬ್ಬಾರ್, ಉದ್ಯಮ ನೇತೃತ್ವದ ರಚನಾತ್ಮಕ ಸ್ಟಾರ್ಟ್‌ಅಪ್‌ಗಳಿಗೆ ವೇಗ ನೀಡುವ ಕಾರ್ಯಕ್ರಮವೇ ಕೆ-ಕಾಂಬಿನೇಟರ್. ಟೈ ಮಂಗಳೂರು ಮೂಲಕ ಮಂಗಳೂರು, ಉಡುಪಿ ಹಾಗೂ ಕರಾವಳಿ ಪ್ರದೇಶದ ಸ್ಟಾರ್ಟ್‌ಅಪ್‌ಗಳಿಗೆ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ಒದಗಿಸಲಾಗುವುದು ಎಂದರು.

ಕೆ-ಕಾಂಬಿನೇಟರ್ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಾರ್ಗದರ್ಶಕ ಜಾಲದ ಜತೆಗೆ ಉದ್ಯಮ, ಹೂಡಿಕೆದಾರರು ಹಾಗೂ ಉದ್ಯಮಶೀಲತಾ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕ ಕಲ್ಪಿಸಲಾಗುವುದು. ತಜ್ಞರ ಮಾರ್ಗದರ್ಶನ, ಮಾರುಕಟ್ಟೆ ಪ್ರವೇಶ ಹಾಗೂ ಸ್ಥಳೀಯವಾಗಿ ವ್ಯವಹಾರ ವಿಸ್ತರಣೆಗೆ ಅಗತ್ಯ ನೆರವು ನೀಡುವ ಮೂಲಕ ಕರಾವಳಿಯ ಉದ್ಯಮಗಳು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಕರಿಸಲಾಗುವುದು ಎಂದು ಅವರು ಹೇಳಿದರು.

ಟೈ ಮಂಗಳೂರು ಸ್ಥಾಪಕ ಅಧ್ಯಕ್ಷ ರೋಹಿತ್ ಭಟ್ ಮಾತನಾಡಿ, ಕಾರ್ಯಕ್ರಮದಡಿ ಆಯ್ಕೆಯಾಗುವ ಅರ್ಹ ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರದಿಂದ ತಲಾ ₹10 ಲಕ್ಷದವರೆಗೆ ಅನುದಾನ ದೊರೆಯಲಿದೆ ಎಂದು ತಿಳಿಸಿದರು. ಕೆ-ಕಾಂಬಿನೇಟರ್ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಐದು ವರ್ಷಗಳ ಅವಧಿಗೆ ಸರ್ಕಾರದಿಂದ ಒಟ್ಟು ₹9.26 ಕೋಟಿ ಅನುದಾನ ಮಂಜೂರಾಗಿದೆ. ಈ ಪೈಕಿ ಮೊದಲ ಕಂತಿನ ₹1.89 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಇದರೊಂದಿಗೆ ಸ್ಟಾರ್ಟ್‌ಅಪ್‌ಗಳ ಆಯ್ಕೆ ಹಾಗೂ ಕಾರ್ಯಕ್ರಮದ ಅನುಷ್ಠಾನ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟೈ ಮಂಗಳೂರು ಉಪಾಧ್ಯಕ್ಷ ಸುಯೋಗ್ ಶೆಟ್ಟಿ ಹಾಗೂ ಅತುಲ್ ಉಪಸ್ಥಿತರಿದ್ದರು.
ಈ ಕುರಿತು ‘ಈದಿನ.ಕಾಮ್’ ಜೊತೆ ಮಾತನಾಡಿದ ಟೈ ಮಂಗಳೂರು ಅಧ್ಯಕ್ಷ ಶ್ಯಾಂ ಪ್ರಸಾದ್ ಹೆಬ್ಬಾರ್, ಐದು ವರ್ಷಗಳಲ್ಲಿ ಒಟ್ಟು ₹9.26 ಕೋಟಿ ಅನುಮೋದಿತ ಅನುದಾನ ಹಂಚಿಕೆಯಾಗಿದ್ದು, ಮೊದಲ ಕಂತಿನ ₹1.89 ಕೋಟಿ ಬಿಡುಗಡೆಯಾಗಿದೆ. ಮೊದಲ ಕೋಹಾರ್ಟ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ ಎಂದು ಹೇಳಿದರು.
ಕೆ-ಕಾಂಬಿನೇಟರ್ ಮೂಲಕ ಆಯ್ಕೆಯಾಗುವ ಸಂಸ್ಥಾಪಕರಿಗೆ ಟೈ ಜಾಗತಿಕ ಮಾರ್ಗದರ್ಶಕ ಜಾಲದೊಂದಿಗೆ ಸಂಪರ್ಕ ಕಲ್ಪಿಸುವುದರ ಜತೆಗೆ ಉದ್ಯಮಿಗಳು, ಹೂಡಿಕೆದಾರರು ಮತ್ತು ಉದ್ಯಮಶೀಲತಾ ಪರಿಸರ ವ್ಯವಸ್ಥೆಯ ಪ್ರವೇಶವೂ ದೊರೆಯಲಿದೆ. ಇದರಿಂದ ಪ್ರಾದೇಶಿಕ ಸ್ಟಾರ್ಟ್‌ಅಪ್‌ಗಳಿಗೆ ತಜ್ಞರ ಮಾರ್ಗದರ್ಶನ ಪಡೆಯಲು, ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು, ಸ್ಥಳೀಯವಾಗಿ ವಿಸ್ತರಣಾಶೀಲ ವ್ಯವಹಾರಗಳನ್ನು ನಿರ್ಮಿಸಲು ಹಾಗೂ ಜಾಗತಿಕವಾಗಿ ಬೆಳೆಯಲು ಅವಕಾಶ ಸಿಗಲಿದೆ ಎಂದರು.





