ಆಂಧ್ರಪ್ರದೇಶದಲ್ಲಿ ಚಂಡಮಾರುತ ಹಾಗೂ ಭಾರೀ ಮಳೆಯಿಂದ ಉಂಟಾದ ಪ್ರವಾಹಕ್ಕೆ ವಿದ್ಯುತ್ ವ್ಯವಸ್ಥೆ ಹಾನಿಗೊಳಗಾದ ಸಂದರ್ಭದಲ್ಲಿ, ದುರಸ್ತಿ ಕಾರ್ಯಕ್ಕೆ ಕೈಜೋಡಿಸಿದ ಕರ್ನಾಟಕದ ಹೆಸ್ಕಾಂ ಸಿಬ್ಬಂದಿಗಳು ಗಮನ ಸೆಳೆದಿದ್ದಾರೆ.
ದಾಂಡೇಲಿಯ ಹೆಸ್ಕಾಂ ಸಿಬ್ಬಂದಿಗಳಾದ ಬಾಳೇಶ್ ರುದ್ರಾಪುರ ಹಾಗೂ ರೇವಣಸಿದ್ದಪ್ಪ ಡಂಬಳ ಅವರು ಆಂಧ್ರಪ್ರದೇಶಕ್ಕೆ ತೆರಳಿ ಸತತ ಎಂಟು ದಿನಗಳ ಕಾಲ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೀಪಾವಳಿ ಸಂಭ್ರಮದ ನಡುವೆ ಅಂದರ್-ಬಾಹರ್ ಜೂಜಾಟ: ಹೊನ್ನಾವರ, ಹಳಿಯಾಳದಲ್ಲಿ 10 ಮಂದಿ ವಶಕ್ಕೆ
ಚಂಡಮಾರುತದ ಪರಿಣಾಮ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದು, ತಂತಿಗಳು ತುಂಡಾಗಿದ್ದವು. ಸುಮಾರು 30 ಸಾವಿರ ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದರಿಂದ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಹೀಗಾಗಿ ವಿದ್ಯುತ್ ವ್ಯವಸ್ಥೆಯನ್ನು ಪುನಃ ಸರಿಪಡಿಸುವುದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು.
ಈ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನ ಮತ್ತು ಪ್ರವಾಹದ ನಡುವೆಯೂ ದಾಂಡೇಲಿಯ ಈ ಇಬ್ಬರು ಸಿಬ್ಬಂದಿಗಳು ದುರಸ್ತಿ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ. ತಮ್ಮ ಊರಿನಿಂದ ದೂರವಿದ್ದು, ಹಗಲು-ರಾತ್ರಿ ಎನ್ನದೆ ಎಂಟು ದಿನಗಳ ಕಾಲ ಕಾರ್ಯನಿರ್ವಹಿಸುವ ಮೂಲಕ ಅಲ್ಲಿನ ಜನರಿಗೆ ವಿದ್ಯುತ್ ಸೌಲಭ್ಯ ಮರಳಿ ಕಲ್ಪಿಸುವ ಪ್ರಯತ್ನದಲ್ಲಿ ಕೈಜೋಡಿಸಿದ್ದಾರೆ.
ತಮ್ಮ ಕರ್ತವ್ಯದ ವ್ಯಾಪ್ತಿಯನ್ನು ಮೀರಿ ಮತ್ತೊಂದು ರಾಜ್ಯದ ಜನರ ನೆರವಿಗೆ ಧಾವಿಸಿ ಸೇವೆ ಸಲ್ಲಿಸಿದ ಬಾಳೇಶ್ ರುದ್ರಾಪುರ ಹಾಗೂ ರೇವಣಸಿದ್ದಪ್ಪ ಡಂಬಳ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.




