ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ ಕಾಳಜಿಯೂ ಆ ಹಳ್ಳಿಯ ನಿಜವಾದ ಐಡೆಂಟಿಟಿಯಾಗಬಹುದು. ಒಡಿಶಾದ ಬಾಬೆಜೋಡಾ (Babeijoda) ಗ್ರಾಮ ಇದೀಗ ಇದೇ ಕಾರಣಕ್ಕೆ ದೇಶದ ಗಮನ ಸೆಳೆಯುತ್ತಿದೆ. ಕಳೆದ 15 ವರ್ಷಗಳಿಂದ ಗ್ರಾಮವನ್ನು ಕಸಮುಕ್ತ, ಸ್ವಚ್ಛ ಮತ್ತು ಪ್ಲಾಸ್ಟಿಕ್ ಮುಕ್ತವಾಗಿಟ್ಟುಕೊಂಡಿರುವ ಇಲ್ಲಿನ ಜನರ ಪ್ರಯತ್ನವನ್ನು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಪ್ರತಿ ಗ್ರಾಮ, ಪ್ರತಿ ನಗರದಲ್ಲೂ ಇದನ್ನು ಒಂದು ಅಭಿಯಾನವನ್ನಾಗಿ ಏಕೆ ಮಾಡಬಾರದು?” ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಬಾಬೆಜೋಡಾದ ಯಶಸ್ಸಿನ ಹಿಂದೆ ಅಲ್ಲಿನ ಬಲವಾದ ಸಮುದಾಯ ಪ್ರಜ್ಞೆಯಿದೆ. ಅಲ್ಲಿನ ಮಹಿಳೆಯರು ದಿನಕ್ಕೆ ಮೂರು ಬಾರಿ ರಸ್ತೆಗಳನ್ನು ಗುಡಿಸಿ ಸ್ವಚ್ಛಗೊಳಿಸುತ್ತಾರೆ, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಗ್ರಾಮಕ್ಕೆ ಬರುವ ಪ್ರವಾಸಿಗರೂ ಸಹ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಲೇಬೇಕು. ಇದನ್ನು ಸ್ಥಳೀಯರ ಸ್ವಯಂ-ಮಾಲೀಕತ್ವದ ಮನೋಭಾವದಿಂದ ಸಾಧಿಸಿ ತೋರಿಸಿದ್ದಾರೆ. ದೊಡ್ಡ ನಗರಗಳಲ್ಲಿ ಈ ಚಿಂತನೆ ಯಾಕೆ ಮೂಡುವುದಿಲ್ಲ ಅಂದರೆ, ನಮ್ಮಲ್ಲಿನ ಬಹುತೇಕರು ಸಂಕುಚಿತ ಮನೋಭಾವದವರಾಗಿದ್ದೇವೆ. ನಮ್ಮ ಮನೆಯಂಗಳ ಸ್ವಚ್ಛವಾಗಿದ್ದರೆ ಸಾಕು, ಹೊರಗೇನು ಹೋದರೂ ಪರವಾಗಿಲ್ಲ ಎಂಬ ಅಸಡ್ಡೆಯನ್ನ ಮೈಗೂಡಿಸಿಕೊಂಡಿದ್ದೇವೆ.
ಸಮಸ್ಯೆ ಜನರ ಮನಸ್ಥಿತಿ ಎಂದೂ ಹೇಳಲಾಗುವುದಿಲ್ಲ. ಕಸ ಉತ್ಪಾದನೆಯ ಪ್ರಮಾಣ, ಜನ ಸಾಂದ್ರತೆ, ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯ, ಕಸ ಸಂಗ್ರಹ ವ್ಯವಸ್ಥೆ, ತ್ಯಾಜ್ಯ ವಿಂಗಡಣೆ, ಮರುಬಳಕೆ ಘಟಕಗಳು ಮತ್ತು ನಿಯಮ ಜಾರ… ಇವೆಲ್ಲವೂ ಒಟ್ಟಾಗಿ ಕೆಲಸ ಮಾಡಬೇಕು. ಒಂದು ನಗರದಲ್ಲಿ ಸಾವಿರಾರು ಟನ್ ಕಸ ಉತ್ಪತ್ತಿಯಾಗುವಾಗ, “ಜನರು ಕಸ ಹಾಕಬಾರದು” ಎನ್ನುವುದೊಂದೇ ಪರಿಹಾರವಾಗುವುದಿಲ್ಲ. ಕಸ ಹಾಕದ ಸಂಸ್ಕೃತಿಯ ಜೊತೆಗೆ ಕಸ ಸಂಗ್ರಹಿಸುವ, ವಿಂಗಡಿಸುವ, ಸಂಸ್ಕರಿಸುವ ಮತ್ತು ಮರುಬಳಕೆ ಮಾಡುವ ವ್ಯವಸ್ಥೆಯೂ ಇರಬೇಕು.
ಹಾಗೆ ನೋಡಿದರೆ, ಭಾರತದಲ್ಲಿ ಈ ರೀತಿ ಸ್ವಾವಲಂಬನೆ ಮತ್ತು ಪರಿಸರ ಪ್ರೀತಿಯಿಂದ ಮಾದರಿಯಾಗಿರುವ ಊರುಗಳಿಗೆ ಕೊರತೆಯಿಲ್ಲ. ದೇಶದ ಇತರ ಭಾಗಗಳಲ್ಲಿ ಇಂತಹ ಪ್ರಯತ್ನಗಳು ನಡೆದಿವೆ, ಯಶಸ್ವಿಯಾಗಿವೆ. ಸಿಕ್ಕಿಂನ ಯುಕ್ಸೋಮ್ (Yuksom) ಗ್ರಾಮ 1996ರಲ್ಲೇ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿತ್ತು. ಸ್ಥಳೀಯ ಸಮುದಾಯವು ಪ್ರವಾಸೋದ್ಯಮ ಹಾಗೂ ಪರಿಸರದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದ ಪರಿಣಾಮವನ್ನು ಗಮನಿಸಿ ಕ್ರಮ ಕೈಗೊಂಡಿತ್ತು. ನಂತರ ತ್ಯಾಜ್ಯ ವಿಂಗಡಣೆ, ಸಂಗ್ರಹಣೆ ಮತ್ತು ಪ್ರವಾಸಿಗರು ತಮ್ಮೊಂದಿಗೆ ತಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರಳಿ ಕೊಂಡೊಯ್ಯುವ ವ್ಯವಸ್ಥೆಯನ್ನೂ ರೂಪಿಸಲಾಯಿತು. ಕೇರಳದಲ್ಲೂ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಮೂಲಕ ವ್ಯವಸ್ಥಿತಗೊಳಿಸುವ ಪ್ರಯತ್ನ ನಡೆದಿದೆ. ʼಸುಚಿತ್ವ ಮಿಷನ್ʼ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ಹಾಗೂ ನಿರ್ವಹಣಾ ನೆರವು ನೀಡುತ್ತಿದೆ. ಮನೆಮಟ್ಟದಲ್ಲೇ ಜೈವಿಕ ತ್ಯಾಜ್ಯ ಸಂಸ್ಕರಣೆ, ಮನೆಮನೆಗೆ ಮರುಬಳಕೆ ಮಾಡಬಹುದಾದ ತ್ಯಾಜ್ಯ ಸಂಗ್ರಹಣೆ, ಪ್ಲಾಸ್ಟಿಕ್ ಸಂಸ್ಕರಣಾ ಘಟಕಗಳು ಮತ್ತು ವಸ್ತು ಸಂಗ್ರಹಣಾ ಕೇಂದ್ರಗಳಂತಹ ವ್ಯವಸ್ಥೆಗಳನ್ನು ರೂಪಿಸುವುದು ಇದರ ಭಾಗವಾಗಿದೆ. ಮೇಘಾಲಯದ ‘ಮಾವ್ಲಿನ್ನೊಂಗ್’ (Mawlynnong) ಗ್ರಾಮವು ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂದು ಜಾಗತಿಕ ಖ್ಯಾತಿ ಪಡೆದಿದೆ. ಅಲ್ಲಿಯೂ ಸಹ ಕಸದ ಬುಟ್ಟಿಗಳು ಪ್ರತಿಯೊಂದು ಮೂಲೆಯಲ್ಲೂ ಇದ್ದು, ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲ್ಪಟ್ಟಿದೆ. ಮಹಾರಾಷ್ಟ್ರದ ‘ಹಿವಾಟೆ ಬಜಾರ್’ ಗ್ರಾಮವು ಮಳೆನೀರು ಸಂಗ್ರಹಣೆ ಮತ್ತು ಕಟ್ಟುನಿಟ್ಟಿನ ನಿಯಮಗಳಿಂದ ಇಂದು ಇಡೀ ದೇಶಕ್ಕೆ ಮಾದರಿಯಾಗಿದೆ.
ಪ್ಲಾಸ್ಟಿಕ್ ಮುಕ್ತ ಗ್ರಾಮ ಎನ್ನುವುದು ಅಸಾಧ್ಯವಾದ ಕನಸೇನೂ ಅಲ್ಲ. ಸರಿಯಾದ ವ್ಯವಸ್ಥೆ ಮತ್ತು ಜನರ ಸಹಭಾಗಿತ್ವ ಇದ್ದರೆ ಸಾಧಿಸಬಹುದಾದ ಗುರಿ. ಕೇಂದ್ರದ ಸ್ವಚ್ಛ ಭಾರತ್ ಮಿಷನ್‌ನಡಿ ದೇಶಾದ್ಯಂತ ತ್ಯಾಜ್ಯ ನಿರ್ವಹಣೆ ಮತ್ತು ದೃಶ್ಯ ಸ್ವಚ್ಛತೆಯತ್ತ ಕೆಲಸಗಳಾಗುತ್ತಿವೆ. 2026ರ ಡೇಟಾ ಪ್ರಕಾರ, 5.66 ಲಕ್ಷಕ್ಕೂ ಹೆಚ್ಚು ODF Plus ಗ್ರಾಮಗಳು ದಾಖಲಾಗಿದ್ದು, ಅವುಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಗ್ರಾಮಗಳನ್ನು ODF Plus Model ಎಂದು ಗುರುತಿಸಲಾಗಿದೆ. ODF Plus Model ಮಾನದಂಡಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಕಸ, ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಇಲ್ಲದಿರುವುದು ಮತ್ತು ಘನ-ದ್ರವ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯೂ ಸೇರಿವೆ.
ಹಾಗಾದರೆ ಸಾಮಾನ್ಯ ಜನರಿಗೇನೂ ಕೆಲಸವಿಲ್ಲವೇ? ಖಂಡಿತ ಇದೆ. ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಬಾರದು ಎಂಬ ಚಿಕ್ಕ ಹೆಜ್ಜೆ ಸಾಕು ಬದಲಾವಣೆಗೆ. ಮನೆಯಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುವ ತಾಳ್ಮೆ, ಸಾಧ್ಯವಾದಷ್ಟು ಏಕಬಳಕೆಯ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಚೀಲ, ಸ್ಟೀಲ್ ಬಾಟಲಿ, ಮರುಬಳಕೆ ಮಾಡಬಹುದಾದ ಪಾತ್ರೆಗಳನ್ನು ಬಳಸುವುದ ರೂಢಿಸಿಕೊಳ್ಳಬೇಕು. ಮದುವೆ, ಜಾತ್ರೆ, ರಾಜಕೀಯ ಕಾರ್ಯಕ್ರಮ, ಶಾಲಾ ಸಮಾರಂಭ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ʼನನ್ನ ಮನೆ ಸ್ವಚ್ಛವಾಗಿದ್ದರೆ ಸಾಕುʼ ಎನ್ನುವ ಮನೋಭಾವದಿಂದ ಹೊರಬಂದು ನನ್ನ ಬೀದಿ, ನನ್ನ ವಾರ್ಡ್, ನನ್ನ ಗ್ರಾಮವೂ ಸ್ವಚ್ಛವಾಗಿರಬೇಕು ಎಂಬ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆದರೆ ಎಲ್ಲ ಹೊಣೆಯನ್ನೂ ಜನರ ಮೇಲೆಯೇ ಹಾಕಲು ಸಾಧ್ಯವಿಲ್ಲ. ಸರ್ಕಾರವೂ ತನ್ನ ಪಾಲಿನ ಜವಾಬ್ದಾರಿ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ನಿಯಮಿತ ಕಸ ಸಂಗ್ರಹಣಾ ವಾಹನ, ತ್ಯಾಜ್ಯ ವಿಂಗಡಣಾ ಕೇಂದ್ರ, ಕಾಂಪೋಸ್ಟಿಂಗ್ ಘಟಕ, ಪ್ಲಾಸ್ಟಿಕ್ ಮರುಬಳಕೆ ಘಟಕ, ಸಿಬ್ಬಂದಿ ಮತ್ತು ನಿರಂತರ ಜಾಗೃತಿ ಕಾರ್ಯಕ್ರಮಗಳಿಗೆ ಹಣ ನೀಡಬೇಕು. ನಗರಗಳಲ್ಲೂ ಇದೇ ರೀತಿ ವಾರ್ಡ್‌ಮಟ್ಟದಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಬಲಪಡಿಸಬೇಕಿದೆ. ಕಾನೂನು ಇದ್ದು ಜಾರಿ ಇಲ್ಲದಿದ್ದರೆ ಪ್ಲಾಸ್ಟಿಕ್ ನಿಷೇಧ ಕಾಗದದಲ್ಲೇ ಉಳಿಯುತ್ತದೆ.
ಇದನ್ನೂ ಓದಿ: ತನ್ನ ಕಾದಂಬರಿಗಳ ಪಾತ್ರಗಳಂತೆಯೇ ಜೀವಿಸಿದ್ದ ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್!
ಅಭಿವೃದ್ಧಿ ಎಂದರೆ ಕಾಂಕ್ರೀಟ್ ರಸ್ತೆಗಳು, ಸೇತುವೆಗಳು, ಫ್ಲೈಓವರ್‌ಗಳು ಮತ್ತು ದೊಡ್ಡ ಕಟ್ಟಡಗಳನ್ನೇ ಪರಿಗಣಿಸಬೇಕೇ? ಸಾರ್ವಜನಿಕ ಮೂಲಸೌಕರ್ಯ ಅತ್ಯಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಉದ್ಘಾಟನೆಗೂ ಮುನ್ನವೇ ಬಿರುಕು ಬಿಟ್ಟು ಕುಸಿದು ಬೀಳುವ ಬ್ರಿಡ್ಜ್‌ಗಳು, ಕಳಪೆ ಕಾಮಗಾರಿಯ ಮೇಲ್ಸೇತುವೆಗಳು, ಅನ್ಯಾಯದ ಯೋಜನೆಗಳ ಹೆಸರಿನಲ್ಲಿ ರಾಜಕಾರಣಿಗಳು ಹಾಗೂ ಗುತ್ತಿಗೆದಾರರು ನೂರಾರು-ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಸುಳಿಯಲ್ಲಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣ ನೀರಿನಂತೆ ಪೋಲಾಗುತ್ತಿರುವುದನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಈ ಬೃಹತ್ ಮೊತ್ತದ ಕಾಲು ಭಾಗದಷ್ಟಾದರೂ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಗ್ರಾಮ ಹಾಗೂ ನಗರದಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆ, ಹಸಿರು ವಲಯಗಳ ಅಭಿವೃದ್ಧಿ ಮತ್ತು ಪರಿಸರ ಜಾಗೃತಿಗಾಗಿ ಮೀಸಲಿಟ್ಟರೆ ದೇಶದ ಪರಿಸರ ಚಿತ್ರಣವೇ ಬದಲಾಗಬಹುದಲ್ಲವೇ? ಇತ್ತೀಚಿನ CAG ವರದಿಗಳಲ್ಲಿಯೂ ಅಪೂರ್ಣ ಮೂಲಸೌಕರ್ಯ ಯೋಜನೆಗಳಲ್ಲಿ ದೊಡ್ಡ ಮೊತ್ತದ ಬಂಡವಾಳ ಸಿಲುಕಿರುವ ಉದಾಹರಣೆಗಳು ಮತ್ತು ಯೋಜನೆ-ಅನುಷ್ಠಾನ-ಮೇಲ್ವಿಚಾರಣೆಯಲ್ಲಿ ಸಮಸ್ಯೆಗಳಿರುವುದು ಉಲ್ಲೇಖವಾಗಿರುವುದನ್ನು ಇಲ್ಲಿ ಗಮನಿಸಬೇಕು.
ಒಡಿಶಾದ ಆ ಪುಟ್ಟ ಗ್ರಾಮ ನಮಗೆ ಕಲಿಸುವ ಪಾಠ ಇದೇ. ಸರ್ಕಾರದ ಬಜೆಟ್‌ಗಾಗಿ ಕಾಯದೆ, ಜನರ ಕೈಲಾದ ಮಟ್ಟಿಗೆ ಬದಲಾವಣೆ ತರಬಹುದು ಎಂಬುದಕ್ಕೆ ಅದೇ ಸಾಕ್ಷಿ. ದೊಡ್ಡ ಯೋಜನೆಗಳ ಘೋಷಣೆಗಳಿಂದ ದೇಶ ಸ್ವಚ್ಛವಾಗುವುದಿಲ್ಲ. ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿ ಬದಲಾವಣೆಯ ಬೀಜ ಬಿತ್ತಲ್ಪಟ್ಟಾಗ ಹಾಗೂ ವ್ಯವಸ್ಥೆಯ ಬದ್ಧತೆ ಎರಡೂ ಕೈಜೋಡಿಸಿದಾಗ ಮಾತ್ರ ಪ್ರತಿ ಗ್ರಾಮವೂ, ನಗರವೂ ಸುಂದರವಾಗಿ ರೂಪುಗೊಳ್ಳಲು ಸಾಧ್ಯ.




