ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವ ಅ.11ರಿಂದ ಅ.21ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಉಡುಪಿ-ಉಚ್ಚಿಲ ದಸರಾ ರೂವಾರಿ ಜಿ. ಶಂಕರ್ ತಿಳಿಸಿದರು.
ಉಚ್ಚಿಲ ಮೊಗವೀರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ಆಕರ್ಷಕ ಮಂಟಪ ನಿರ್ಮಿಸಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. 11 ದಿನಗಳ ಕಾಲ ಶಾಸ್ತ್ರೋಕ್ತವಾಗಿ ವಿವಿಧ ಪೂಜಾ ಪುರಸ್ಕಾರ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ ಎಂದರು.
ದಸರಾ ಪ್ರಯುಕ್ತ ಪಡುಬಿದ್ರಿಯಿಂದ ಕಾಪು ಸಮುದ್ರತೀರದವರೆಗೆ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಉಚ್ಚಿಲ ದೇವಳದ ಸುತ್ತಮುತ್ತಲೂ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಅ.10ರಂದು ಸಂಜೆ 6.30ಕ್ಕೆ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ನಡೆಯಲಿದೆ.

ಅ.11ರಂದು ಬೆಳಗ್ಗೆ 9ಕ್ಕೆ ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಮುಜರಾಯಿ, ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ದಸರಾ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಸಚಿವರಾದ ಯು.ಟಿ. ಖಾದರ್ ಹಾಗೂ ರುದ್ರಪ್ಪ ಎಂ. ಲಮಾಣಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಸ್ತುಪ್ರದರ್ಶನ, ಮಾಹಿತಿ ಶಿಬಿರ, ಮನೋರಂಜನಾ ಹಾಗೂ ಜಾತ್ರಾ ಮೈದಾನದ ಉದ್ಘಾಟನೆಯೂ ನಡೆಯಲಿದೆ.
This video cannot be played in your browser. Open the video directly
ಅ.12ರಂದು ಮಹಿಳಾ ದಸರಾ
ಅ.12ರಂದು ಮಧ್ಯಾಹ್ನ 3ಕ್ಕೆ ಮಹಿಳಾ ದಸರಾ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತುಳು ಭಾಷೆಗೆ ಕರ್ನಾಟಕದ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ದೊರಕಿಸಿಕೊಟ್ಟ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
ಶರನ್ನವರಾತ್ರಿ ಪ್ರಯುಕ್ತ ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಚಂಡಿಕಾಹೋಮ, ಮಧ್ಯಾಹ್ನ 12ರಿಂದ 3ರವರೆಗೆ ಅನ್ನಸಂತರ್ಪಣೆ, ಸಂಜೆ 6.30ರಿಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5.30ರಿಂದ 6.15ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಬೆಳಗ್ಗೆ 9ರಿಂದ ಭಜನಾ ಕಾರ್ಯಕ್ರಮ ಹಾಗೂ ಸಂಜೆ 5ರಿಂದ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 8.30ರಿಂದ ಕಲ್ಪೋಕ್ತ ಪೂಜೆ ನೆರವೇರಲಿದೆ. ವಿಜಯದಶಮಿಯಂದು ಸಾಮೂಹಿಕ ಮಹಾಚಂಡಿಕಾಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದೆ.
ಉಚ್ಚಿಲ ದಸರಾ ಅಂಗವಾಗಿ ರಾಜ್ಯಮಟ್ಟದ ಆಹ್ವಾನಿತ ತಂಡಗಳಿಂದ ನೃತ್ಯೋತ್ಸವ ಹಾಗೂ ನೃತ್ಯ ಸ್ಪರ್ಧೆ, ಮುದ್ದುಮಕ್ಕಳಿಗಾಗಿ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಹಿಳೆಯರ ಹಾಗೂ ಪುರುಷರ ಹುಲಿಕುಣಿತ ಸ್ಪರ್ಧೆ, ಮಕ್ಕಳ ಕಿನ್ನಿ ಪಿಲಿ ನಲಿಕೆ ಸ್ಪರ್ಧೆ, ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆಗಳು ನಡೆಯಲಿವೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ ಮತ್ತು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯೂ ಆಯೋಜಿಸಲಾಗಿದೆ. ಪ್ರತಿವರ್ಷದಂತೆ ಸಾಮೂಹಿಕ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯದ ಜೊತೆಗೆ ಈ ಬಾರಿ ವಿಶೇಷವಾಗಿ ದಸರಾ ಕವಿಗೋಷ್ಠಿಯನ್ನೂ ಆಯೋಜಿಸಲಾಗಿದೆ.

ಅ.21ರಂದು ಭವ್ಯ ಶೋಭಾಯಾತ್ರೆ
ಅ.21ರಂದು ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದ್ದು, ಬಳಿಕ ಉಚ್ಚಿಲ ಶ್ರೀ ಕ್ಷೇತ್ರದಿಂದ ಭವ್ಯ ಶೋಭಾಯಾತ್ರೆ ಆರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಎರ್ಮಾಳ್–ಉಚ್ಚಿಲ–ಮೂಳೂರು ಮಾರ್ಗವಾಗಿ ಕಾಪು ಬೀಚ್ನ ದೀಪಸ್ತಂಭದ ಬಳಿ ಶೋಭಾಯಾತ್ರೆ ತಲುಪಲಿದೆ.
ಕಾಪು ದೀಪಸ್ತಂಭದ ಸಮೀಪ ಸಮುದ್ರದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಬೋಟುಗಳ ಮೂಲಕ ಸಮುದ್ರ ಮಧ್ಯೆ ಭವ್ಯ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ ಹಾಗೂ ಕಾಶಿಯ ಪಂಡಿತರಿಂದ ನವದುರ್ಗೆಯರು, ಶ್ರೀ ಶಾರದಾ ಮಾತೆ ಮತ್ತು ಸಮುದ್ರರಾಜನಿಗೆ ವಿಶೇಷ ಗಂಗಾರತಿ ನಡೆಯಲಿದೆ. ಡ್ರೋನ್ ಮೂಲಕ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡಲಾಗುವುದು ಎಂದು ಜಿ. ಶಂಕರ್ ತಿಳಿಸಿದರು.
ವಸ್ತುಪ್ರದರ್ಶನ ಪ್ರಮುಖ ಆಕರ್ಷಣೆ
ಉಚ್ಚಿಲ ದಸರಾ ಮಹೋತ್ಸವದ ವಸ್ತುಪ್ರದರ್ಶನದಲ್ಲಿ ಮತ್ಸ್ಯದ್ವಾರ, ದವಸ-ಧಾನ್ಯಗಳಿಂದ ನಿರ್ಮಿಸಲಾದ ಮಹಾಮಾತೆಯರ ಕಲಾಕೃತಿಗಳು, ಜನಜಾಗೃತಿ ಕಲಾಕೃತಿಗಳು, ಕಲ್ಪವೃಕ್ಷ ಉತ್ಪನ್ನಗಳಿಂದ ವಿವಿಧ ಕಲಾಕೃತಿಗಳು, ವಿಶೇಷ ಚೇತನರಿಂದ ತಯಾರಿಸಲಾದ ಕಲಾಕೃತಿಗಳು, ಪುಷ್ಪ ಹಾಗೂ ಪಕ್ಷಿಗಳ ಪ್ರದರ್ಶನ, ಕೃಷಿಕರ ಪ್ರಾಚೀನ ಮನೆಯ ಮಾದರಿ ಪ್ರಮುಖ ಆಕರ್ಷಣೆಯಾಗಲಿದೆ.
ಇದರೊಂದಿಗೆ ಚರ್ಮವಾದ್ಯ ಪರಿಕರಗಳ ತಯಾರಿ, ಅಲಂಕಾರಿಕ ಕಲಾಕೃತಿಗಳು, ಯಕ್ಷಗಾನ ಕಲಾಕೃತಿಗಳು, ಎತ್ತಿನ ಗಾಣ, ಸಮುದ್ರ ಹಾಗೂ ಹೊಳೆ ಮೀನುಗಳ ಪ್ರದರ್ಶನ, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಚನ್ನಪಟ್ಟಣ ಬೊಂಬೆ ತಯಾರಿಕೆಯ ಪ್ರಾತ್ಯಕ್ಷಿಕೆ ಸೇರಿದಂತೆ ವಿವಿಧ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಡುಪಿ-ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೇಂಗ್ರೆ, ಗಿರಿಧರ ಸುವರ್ಣ, ಕವಿತಾ ಶರತ್, ಸುಗುಣ ಕರ್ಕೇರ, ಮಜೋಜ್ ಕಾಂಚನ್, ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ, ಸಂಧ್ಯಾದೀಪ ಸನಿಲ್, ರತ್ನಾಕರ ಸಾಲ್ಯಾನ್ ಮಲ್ಪೆ ಹಾಗೂ ಮನೋಜ್ ಕಾಂಚನ್ ಉಪಸ್ಥಿತರಿದ್ದರು.






