ಅಕ್ರಮ ಮರಳು ಸಾಗಾಟ ಹಾಗೂ ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ. ಆದರೆ “ತಡೆಯದಿದ್ದರೆ ನಾನೇ ಟಿಪ್ಪರ್‌ಗಳಿಗೆ ಬೆಂಕಿ ಹಚ್ಚಿ ಸುಡುತ್ತೇನೆ” ಎಂಬ ಶಾಸಕ ಶರಣಗೌಡ ಕಂದಕೂರ ಅವರ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಂಜುನಾಥ ಮೇತ್ರಿ ಮಲ್ಹಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೆ ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಮೇಲೆ ಕ್ರಮಕ್ಕೆ ಒತ್ತಡ ಹೇರುವ ಮೂಲಕ ಸಮಸ್ಯೆ ಪರಿಹರಿಸಬೇಕು. ಆದರೆ ವಾಹನಗಳಿಗೆ ಬೆಂಕಿ ಹಚ್ಚುವ ಎಚ್ಚರಿಕೆ ನೀಡುವುದು ಜನಪ್ರತಿನಿಧಿಯ ಭಾಷೆಯಾಗಬಾರದು ಎಂದು ಅವರು ತಿಳಿಸಿದ್ದಾರೆ.
ಶಾಸಕರು ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದರ ಜತೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬಹುದು. ಯಾವುದೇ ವ್ಯಕ್ತಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ ಎಂದು ಮಂಜುನಾಥ ಮೇತ್ರಿ ಹೇಳಿದ್ದಾರೆ.
ಗುರುಮಠಕಲ್ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ, ನಕಲಿ ರಾಯಲ್ಟಿ, ಓವರ್‌ಲೋಡ್ ಟಿಪ್ಪರ್‌ಗಳ ಸಂಚಾರ ಹಾಗೂ ಕೈಗಾರಿಕಾ ಮಾಲಿನ್ಯದ ಕುರಿತು ಸೂಕ್ತ ತನಿಖೆ ನಡೆಸಬೇಕು. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಪಕ್ಷಾತೀತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಬೆಳೆಸಲು ಅ.17ರಿಂದ ತರಬೇತಿ ಶಿಬಿರ
“ಜನರ ಸಮಸ್ಯೆಗಳಿಗಾಗಿ ಹೋರಾಟ ನಡೆಸಲಿ. ಆದರೆ ‘ಬೆಂಕಿ ಹಚ್ಚುತ್ತೇನೆ’ ಎಂಬಂತಹ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಟ ನಡೆಯಬೇಕು. ಜನಪ್ರತಿನಿಧಿಗಳು ಕಾನೂನಿಗೆ ಗೌರವ ನೀಡುವ ಮಾದರಿಯಾಗಬೇಕು” ಎಂದು ಮಂಜುನಾಥ ಮೇತ್ರಿ ಮಲ್ಹಾರ್ ಹೇಳಿದ್ದಾರೆ.




