ತೀವ್ರ ಬರಗಾಲವಿರುವ ಕಾರಣ ವಿಬಿ ಜಿ ರಾಮ್‌ಜಿ ಯೋಜನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯವಾಗಿ ಜನರಿಗೆ ಕೆಲಸ ಕೊಟ್ಟು ಒಂದು ವಾರದೊಳಗೆ ಕೂಲಿ ಹಣ ಪಾವತಿಸಬೇಕು, ವಿಳಂಬವಾದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು, ನಾನೇ ಇದರ ಮೇಲೆ ನಿಗಾ ವಹಿಸುವೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.
ಇಲ್ಲಿ ಗುರುವಾರ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಬರಗಾಲ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಅವರು ‘ಮಾನವ ದಿನಗಳು ಸೃಜನೆಯಾದ ಬಳಿಕ ಕೂಲಿ ಬಾಕಿ ಉಳಿಸಿಕೊಳ್ಳಬೇಡಿ. ಇಲ್ಲವಾದರೆ ಹಿರಿಯರನ್ನು ಮನೆಯಲ್ಲಿ ಬಿಟ್ಟು ಯುವಕರು ಗುಳೆ ಹೋಗುತ್ತಾರೆ. ಯಾರನ್ನೂ ಗುಳೆ ಹೋಗಲು ಬಿಡಬೇಡಿ’ ಎಂದರು.
‘ಹಣಕ್ಕಾಗಿ ತ್ವರಿತವಾಗಿ ಪ್ರಸ್ತಾವ ಕಳಿಸಿದರೆ ವಿಳಂಬ ಮಾಡದೇ ಹಣ ಬಿಡುಗಡೆ ಮಾಡಲಾಗುವುದು. ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ತಲಾ ₹1 ಕೋಟಿ ಕೊಡಲಾಗಿದ್ದು ಈಗ ಮತ್ತೆ ₹1 ಕೋಟಿ ನೀಡಲಾಗುವುದು. ಕುಡಿಯುವ ನೀರು, ಮೇವಿನ ಸೌಲಭ್ಯ, ಗುಳೆ ಹೋಗುವುದು ತಡೆಯುವುದು ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಅಧಿಕಾರಿಗಳ ಆದ್ಯತೆಯಾಗಬೇಕು’ ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಪಂ, ತಾಪಂ ಸ್ಥಾನಗಳಿಗೆ ಮೀಸಲಾತಿ ನಿಗದಿ
‘ವಿಶ್ವದ ಬಲಿಷ್ಠ ಪ್ರಧಾನಿ ಎನಿಸಿಕೊಂಡ ನರೇಂದ್ರ ಮೋದಿ ಗರಿಷ್ಠ ಪ್ರಮಾಣದಲ್ಲಿ ರಾಜ್ಯಕ್ಕೆ ಬರ ಪರಿಹಾರ ಒದಗಿಸಬೇಕು. ಒಂದು ವೇಳೆ ಕೊಡದಿದ್ದರೆ ಜನರ ಮುಂದೆ ಹೋಗುತ್ತೇವೆ’ ಎಂದು ಎಚ್ಚರಿಕೆ ನೀಡಿದರು.




