ಕಾಳಗಿ ತಾಲೂಕಿನ ಬೆಣ್ಣೂರ ಬಿ ಗ್ರಾಮಕ್ಕೆ ಸಮರ್ಪಕ ಬಸ್ ಸಂಚಾರವಿಲ್ಲದೆ ಕಳೆದ 5–6 ವರ್ಷಗಳಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಗ್ರಾಮಕ್ಕೆ ಬೆಳಗ್ಗೆ ಮತ್ತು ಸಂಜೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾಲೇಜು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಬೆಣ್ಣೂರ ಬಿ, ಪೇಠಶಿರೂರ, ಬೆಳಗುಂಪಾ, ಇವಣಿ ಹಾಗೂ ಬಾಗೋಡಿ ಗ್ರಾಮಗಳಿಗೆ ಒಂದೇ ಬಸ್ ಸಂಚರಿಸುತ್ತಿದೆ. ಸೂಪರ್ ಮಾರ್ಕೆಟ್‌ನಿಂದ ಬರುವ ಈ ಬಸ್ ಬೆಣ್ಣೂರ ಬಿ ಗ್ರಾಮಕ್ಕೆ ನಿಗದಿತ ಸಮಯಕ್ಕೆ ಬರುತ್ತಿಲ್ಲ. ಐದು ಗ್ರಾಮಗಳ ಪ್ರಯಾಣಿಕರು ಒಂದೇ ಬಸ್ ಅವಲಂಬಿಸಿರುವುದರಿಂದ ಬಸ್ ಕಿಕ್ಕಿರಿದು ತುಂಬುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಬಸ್‌ಗೆ ನೇತಾಡಿಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಸಮಯಕ್ಕೆ ಬಸ್ ಸಿಗದ ಕಾರಣ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಿ ತರಗತಿಗಳಿಗೆ ಹಾಜರಾಗಲು ತೊಂದರೆಯಾಗುತ್ತಿದೆ. ಅಲ್ಲದೆ, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಅಂಗವಿಕಲರಿಗೆ ಬಸ್‌ನಲ್ಲಿ ಕುಳಿತುಕೊಳ್ಳಲು ಸೀಟು ಸಿಗದೆ ಪರದಾಡುವಂತಾಗಿದೆ.

ಸಮಸ್ಯೆ ಕುರಿತು ಬೆಣ್ಣೂರ ಬಿ ಗ್ರಾಮದ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ‘ಬೆಂಕಿ ಹಚ್ಚುತ್ತೇನೆ’ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ: ಮಂಜುನಾಥ ಮೇತ್ರಿ
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬೆಳಗ್ಗೆ ಹಾಗೂ ಸಂಜೆ ಬೆಣ್ಣೂರ ಬಿ ಗ್ರಾಮಕ್ಕೆ ಪ್ರತ್ಯೇಕ ಬಸ್ ಸಂಚಾರ ಆರಂಭಿಸಬೇಕು. ಹಲವು ವರ್ಷಗಳಿಂದ ಬಗೆಹರಿಯದಿರುವ ಸಾರಿಗೆ ಸಮಸ್ಯೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ವಿದ್ಯಾರ್ಥಿನಿ ಮಾಣಿಕಮ್ಮ ಕಟ್ಟಿಮನಿ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.





