ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಸಿಕ್ಕರೂ, ಇಟ್ಟುಕೊಳ್ಳದೇ ಮಾಲೀಕರಿಗೆ ಹಿಂತಿರುಗಿಸಿ ಕೂಲಿ ಕಾರ್ಮಿಕನೊಬ್ಬ ಪ್ರಾಮಾಣಿಕತೆಗೆ ಸಮಾಜಕ್ಕೆ ಮಾದರಿಯಾಗಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ವ್ಯಾಪ್ತಿಯಲ್ಲಿ ನಡೆದಿದೆ.
2026ರ ಎಪ್ರಿಲ್ 22ರಂದು ಹರಪನಹಳ್ಳಿಯ ಶಂಭುನಾಥ ಹನುಮಂತಪ್ಪ ಕಳಂಗನವರ ಎನ್ನುವ ಕೂಲಿ ಕಾರ್ಮಿಕನೊಬ್ಬ ಹರಪನಹಳ್ಳಿಯಿಂದ ದುಗ್ಗಾವತಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್‌ನಲ್ಲಿ ತಮ್ಮ ರೊಟ್ಟಿ ಚೀಲವನ್ನು ಇಟ್ಟಿದ್ದ ಅವರು, ಇಳಿಯುವಾಗ ಅದೇ ರೀತಿಯ ಮತ್ತೊಂದು ಚೀಲ ಅದಲು ಬದಲಾಗಿ ದುಗ್ಗಾವತಿಯಲ್ಲಿ ಇಳಿದಿದ್ದಾರೆ.

ಮನೆಗೆ ತೆರಳಿ ಚೀಲವನ್ನು ತೆರೆಯುವಾಗ, ಅದರಲ್ಲಿ ರೊಟ್ಟಿಯ ಜೊತೆಗೆ ‘ಎಂ.ಡಿ. ಜುವೆಲರ್ಸ್’ ಹರಪನಹಳ್ಳಿಯ ಬ್ಯಾಗ್ ಪತ್ತೆಯಾಗಿದೆ. ಅದರೊಳಗೆ ಸುಮಾರು 55 ಗ್ರಾಂ ಬಂಗಾರ ಮತ್ತು 88 ಗ್ರಾಂ ತೂಕದ ಆಭರಣಗಳಿದ್ದುದನ್ನು ಕಂಡ ಶಂಭುನಾಥ ಅವರು, ಇದು ತಮ್ಮದೇ ಅಲ್ಲವೆಂದು ಅರಿತು ತಕ್ಷಣ ಸ್ನೇಹಿತರ ಗಮನಕ್ಕೆ ತಂದಿದ್ದಾರೆ.
ನಂತರ ಅವರು ಬಂಗಾರದ ಅಂಗಡಿ ಮಾಲೀಕರನ್ನು ಸಂಪರ್ಕಿಸಿ ವಿಷಯ ತಿಳಿಸಿ, ಮಾನವೀಯತೆ ದೃಷ್ಟಿಯಿಂದ ಆಭರಣಗಳನ್ನು ಹರಿಹರ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಆರ್.ಎಫ್. ದೇಸಾಯಿ ಅವರಿಗೆ ಒಪ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಂಚಮಸಾಲಿ ಪೀಠದ ಸಂಘರ್ಷ: ಸಂಘದಿಂದ ಮೂವರು ಟ್ರಸ್ಟಿಗಳ ಉಚ್ಛಾಟನೆ
ಈ ಪ್ರಾಮಾಣಿಕ ಕೆಲಸಕ್ಕೆ ಮೆಚ್ಚಿದ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರುದ್ರಪ್ಪ ಉಜ್ಜನಕೊಪ್ಪ ಅವರು ಶಂಭುನಾಥರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ., ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ ಅವರು ಸಹ ಶಂಭುನಾಥರ ಪ್ರಾಮಾಣಿಕತೆಯನ್ನು ಪ್ರಶಂಸಿಸಿದ್ದಾರೆ.





