ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಕಟ್ಟಡದಲ್ಲಿ ಇಂದು ಸಂಜೆ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
ಕಟ್ಟಡದಲ್ಲಿದ್ದ ಮೊಬೈಲ್ ಅಂಗಡಿಯೊಂದರಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತೆಂದು ತಿಳಿದುಬಂದಿದ್ದು, ಕ್ಷಣಾರ್ಧದಲ್ಲೇ ಅದು ಇತರ ಅಂಗಡಿಗಳಿಗೆ ವ್ಯಾಪಿಸಿದೆ. ಪರಿಣಾಮವಾಗಿ ಮೊಬೈಲ್, ಹಾರ್ಡ್‌ವೇರ್ ಹಾಗೂ ಪ್ಲಾಸ್ಟಿಕ್ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ನಾಶವಾಗಿವೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಮೂರು ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ನಿಯಂತ್ರಣ ಸಾಧಿಸಲು ಕಷ್ಟವಾಯಿತು. ನಂತರ ಟ್ಯಾಂಕರ್ ಮೂಲಕ ನೀರು ತರಿಸಿ ಕಾರ್ಯಾಚರಣೆ ಮುಂದುವರಿಸಲಾಯಿತು. ಸುಮಾರು ಎರಡು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ನಗರದ ಹೃದಯಭಾಗದಲ್ಲೇ ಸಂಭವಿಸಿದ ಈ ದುರಂತವು ವ್ಯಾಪಾರಿಗಳಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಮೊಬೈಲ್ ಅಂಗಡಿಗಳಿಗೆ ಸಂಭವಿಸಿದ ಅಪಾರ ನಷ್ಟದಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದಕ್ಕೂ ಮೀರಿಯಾಗಿ, ಕಿನ್ನಿಮೂಲ್ಕಿಯಲ್ಲಿರುವ ಅಗ್ನಿಶಾಮಕ ದಳದ ಕಚೇರಿಯಿಂದ ಘಟನೆ ಸ್ಥಳವು ಕೇವಲ 1–2 ಕಿ.ಮೀ. ದೂರದಲ್ಲಿದ್ದರೂ, ಸಿಬ್ಬಂದಿ ಸ್ಥಳಕ್ಕೆ ತಲುಪಲು ಸುಮಾರು 40–45 ನಿಮಿಷಗಳ ವಿಳಂಬವಾದದ್ದು ಗಂಭೀರ ನಿರ್ಲಕ್ಷ್ಯವೆಂದು ಸ್ಥಳೀಯರು ಆರೋಪಿಸಿದ್ದಾರೆ. ಈ ವಿಳಂಬವೇ ಅವಘಡದ ತೀವ್ರತೆ ಹೆಚ್ಚಲು ಕಾರಣವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಮೊಬೈಲ್ ರಿಟೈಲ್ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ವಿವೇಕ್ ಜಿ. ಸುವರ್ಣ ಅವರು, “ಅಗ್ನಿಶಾಮಕ ದಳದ ತಡವಾದ ಪ್ರತಿಕ್ರಿಯೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾನಿಗೊಳಗಾದ ವ್ಯಾಪಾರಿಗಳಿಗೆ ತಕ್ಷಣ ಪರಿಹಾರ ನೀಡಬೇಕು ಹಾಗೂ ಅವರ ಜೀವನೋಪಾಯ ಪುನಃ ಸ್ಥಾಪನೆಗೆ ನೆರವಾಗಬೇಕು” ಎಂದು ಆಗ್ರಹಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ತುರ್ತು ಸ್ಪಂದನಾ ವ್ಯವಸ್ಥೆಯನ್ನು ಬಲಪಡಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.







