“ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸದಸ್ಯರಾದ ಚಂದ್ರಶೇಖರ್ ಪೂಜಾರ್ ಮತ್ತು ಜ್ಯೋತಿ ಪ್ರಕಾಶ್ ಸೇರಿದಂತೆ ಮೂವರು ಪ್ರಮುಖ ವ್ಯಕ್ತಿಗಳನ್ನು ಎಪ್ರಿಲ್ 13ರಿಂದ ಜಾರಿಗೆ ಬರುವಂತೆ ಉಚ್ಚಾಟನೆ ಮಾಡಲಾಗಿದೆ” ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ.ಪಾಟೀಲ್ ತಿಳಿಸಿದರು. ಈ ಹಿಂದೆ ಹರಪೀಠದ ವಚನಾನಂದಶ್ರೀಗಳನ್ನು ಪೀಠದಿಂದ ಉಚ್ಚಾಟಿಸಲಾಗಿತ್ತು.
ವಚನಾನಂದಶ್ರೀ ಹಾಗೂ ಪಂಚಮಸಾಲಿ ಪೀಠದ ಟ್ರಸ್ಟ್ ನಡುವೆ ಶ್ರೀಗಳ ಉಚ್ಛಾಟನೆ ಹಾಗೂ ಹಣಕಾಸು ಅವ್ಯವಹಾರ ಪ್ರಕರಣದ ಆರೋಪ ಪ್ರತ್ಯಾರೋಪ ಬಿರುಸುಗೊಂಡಿರುವ ಬೆನ್ನಲ್ಲೇ ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಇವರ ಮೇಲಿರುವ ಅವ್ಯವಹಾರ, ಅಧರ್ಮ ಮತ್ತು ಅಪನಂಬಿಕೆಯ ಆರೋಪಗಳಿರುವುದರಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದೇ ಟ್ರಸ್ಟಿನಿಂದ ಉಚ್ಚಾಟನೆ ಮಾಡಲು ಪ್ರಮುಖ ಕಾರಣವಾಗಿದೆ” ಎಂದು ತಿಳಿಸಿದರು.

“ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಲ್ಲಿ 13600 ಸದಸ್ಯರಿದ್ದಾರೆ. ಆದರೆ ಟ್ರಸ್ಟಿನಲ್ಲಿ ಅಂತಹ ಯಾವುದೇ ಸದಸ್ಯತ್ವ ವ್ಯವಸ್ಥೆ ಇಲ್ಲ. ಹೀಗಾಗಿ ಸಂಘವೇ ಸುಪ್ರೀಂ ಆಗಿದೆ. ಧರ್ಮದರ್ಶಿಗಳು ಮಠದ ವ್ಯವಹಾರದಲ್ಲಿ ಅಕ್ರಮ ನಡೆಸಿದರೆ, ಅಧರ್ಮವಾಗಿ ನಡೆದುಕೊಂಡರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಸಂಘದ ಬೈಲಾದಲ್ಲಿ ಇದೆ. ಈ ನಿಟ್ಟಿನಲ್ಲಿ ಈ ಮೂವರು ಧರ್ಮದರ್ಶಿಗಳನ್ನು ಉಚ್ಚಾಟನೆ ಮಾಡಲಾಗಿದೆ” ಎಂದು ತಿಳಿಸಿದರು.
ಉಚ್ಚಾಟನೆಗೊಳಿಸಿರುವ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಧರ್ಮದರ್ಶಿಗಳಾದ ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್ ಇಂದಿನಿಂದಲೇ ಅವರಿಗೆ ಯಾವುದೇ ಲೆಕ್ಕಪತ್ರ ನಿರ್ವಹಣೆ, ಬ್ಯಾಂಕ್ ವ್ಯವಹಾರ ಅಥವಾ ಸಂಘಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಇರುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
“ಕಳೆದ ಮಾರ್ಚ್ 23ರಂದು ಕೊಪ್ಪಳದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಟ್ರಸ್ಟ್ ಸದಸ್ಯರ ಅವಧಿ ಕೇವಲ 5 ವರ್ಷಗಳಿಗೆ ಸೀಮಿತವಾಗಿರಬೇಕು. ಪ್ರತಿ ಜಿಲ್ಲೆಯಿಂದ ಒಬ್ಬರಿಗೆ ಮಾತ್ರ ಟ್ರಸ್ಟ್ನಲ್ಲಿ ಅವಕಾಶ ನೀಡಬೇಕು (ಸದ್ಯ ಕೆಲವು ಜಿಲ್ಲೆಗಳಿಂದ 3-4 ಜನರಿದ್ದಾರೆ). ಟ್ರಸ್ಟಿಗಳ ನೇಮಕಾತಿ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರ ಮೂಲಕವೇ ನಡೆಯಬೇಕು ಎಂದು ಸಭೆಯ ನಿರ್ಣಯವಾಗಿತ್ತು. ಆದರೆ ಇಲ್ಲಿನ ಧರ್ಮದರ್ಶಿಗಳು ಆ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ” ಎಂದರು.
“ರಾಜ್ಯದ ಸಂಘದ ಮುಖಂಡರು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಲಾಗಿದೆ. ಜೂನ್ ಅಥವಾ ಮೇ ತಿಂಗಳಲ್ಲಿ ಲೆಕ್ಕ ಪರಿಶೋಧನಾ ಸಮಿತಿಯೊಂದಿಗೆ ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು. ಆ ವೇಳೆ 2018ರಿಂದ ಈ ಮಠಕ್ಕೆ ಅಥವಾ ಸಂಘಕ್ಕೆ ಯಾರೆಲ್ಲಾ ಕಾಣಿಕೆ ನೀಡಿದ್ದಾರೋ, ಅವರ ಪಟ್ಟಿಯನ್ನು ಸಿದ್ಧಪಡಿಸಿ ಹಣದ ಬಳಕೆಯ ಬಗ್ಗೆ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ನೀಡಲಾಗುವುದು” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಉತ್ತಮ ಸಮಾಜ: ನ್ಯಾ.ಶ್ರೀಮತಿ ವೇಲಾ
“ಹಣವನ್ನು ಟ್ರಸ್ಟಿಗಳು ಕೇವಲ ಕೊಟ್ಟಿದ್ದಾರೆಯೇ ಹೊರತು, ಅದನ್ನು ಸರಿಯಾಗಿ ಖರ್ಚು ಮಾಡಿಲ್ಲ. ಉಮಾಪತಿಯವರು ಲಿಖಿತ ರೂಪದಲ್ಲಿ ಲೆಕ್ಕ ನೀಡಲು ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ ಅವರು, ಮಠ 80 ಲಕ್ಷ ಜನರ ಆಸ್ತಿ. ಇಲ್ಲಿ ಪಾರದರ್ಶಕತೆ ಇರಲೇಬೇಕು. ಅವ್ಯವಹಾರ ನಡೆದಾಗ ನಾವೆಲ್ಲರೂ ಧ್ವನಿ ಎತ್ತಲೇಬೇಕಾಗಿದೆ” ಎಂದು ತಿಳಿಸಿದರು.
ಹರಿಹರ ಮಾಜಿ ಶಾಸಕ ಶಿವಶಂಕರ್ ಮಾತನಾಡಿ,”ಡಾ. ಮಹಾಂತ ಸ್ವಾಮಿಗಳು ಈ ಹಿಂದೆ ಲೆಕ್ಕ ಕೇಳಿದಾಗ ಅವರಿಗೆ ಅವಮಾನ ಮಾಡಲಾಗಿತ್ತು ಮತ್ತು ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಲಾಗಿತ್ತು. ಈಗ ಶ್ರೀವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಿ ಅಗೌರವದಿಂದ ಅವರನ್ನು ಹೊರ ಕಳುಹಿಸುವ ಕೆಲಸ ನಡೆಯುತ್ತಿದೆ. ಪೂಜ್ಯ ಸ್ವಾಮೀಜಿಗಳಿಗೆ ಗೌರವ ಕೊಡಬೇಕೇ ಹೊರತು ಅಗೌರವ ಮಾಡುವುದಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪಂಚಮಸಾಲಿ ಸಮಾಜದ ಶ್ರೀಪೀಠವು ದಾನಿಗಳ ಆಸ್ತಿಯಾಗಿದ್ದು, ಅಲ್ಲಿನ ಹಣಕಾಸಿನ ವ್ಯವಹಾರಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸಮಾಜದ ಬಡ ಮಕ್ಕಳ ಶಿಕ್ಷಣದ ಕನಸಿನೊಂದಿಗೆ ಸ್ಥಾಪಿತವಾದ ಈ ಪೀಠಕ್ಕೆ ಸಾವಿರಾರು ದಾನಿಗಳು ಹಣ ನೀಡಿದ್ದಾರೆ. ಆದರೆ ಕಳೆದ 18 ವರ್ಷಗಳಿಂದ ಈ ಹಣದ ಲೆಕ್ಕ ಕೇಳಿದರೆ ಟ್ರಸ್ಟಿಗಳು ಉತ್ತರಿಸುತ್ತಿಲ್ಲ. ಇದು ಭಕ್ತರಿಗೆ ಮಾಡುತ್ತಿರುವ ದ್ರೋಹ” ಎಂದು ಅವರು ಕಿಡಿಕಾರಿದರು.
“ಪೀಠವು ಕೇವಲ ಮೂರು ಜಿಲ್ಲೆಗಳ (ದಾವಣಗೆರೆ, ಹಾವೇರಿ, ಚಿತ್ರದುರ್ಗ) ಮುಖಂಡರ ಹಿಡಿತದಲ್ಲಿದೆ. ಇದು ಇಡೀ ರಾಜ್ಯದ ಪಂಚಮಸಾಲಿ ಸಮುದಾಯಕ್ಕೆ ಸೇರಬೇಕಾದ ಆಸ್ತಿ. ಕೂಡಲೇ ಆಡಳಿತ ಮಂಡಳಿಯನ್ನು ಪುನರ್ ರಚಿಸಬೇಕು. ‘ಸಮಾಜದ ಆಸ್ತಿಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸಮಾಜ ಅವರಿಗೆ ತಕ್ಕಪಾಠ ಕಲಿಸಲಿದೆ’’ ಎಂದು ಎಚ್ಚರಿಸಿದರು
ಭಕ್ತರು ಮತ್ತು ಸಾರ್ವಜನಿಕರು ನೀಡಿದ ದೇಣಿಗೆಯನ್ನು ಸರಿಯಾಗಿ ದಾಖಲಿಸಿಲ್ಲ ಮತ್ತು ರಸೀದಿ ನೀಡದೆಯೇ ಹಣವನ್ನು ಪಡೆಯಲಾಗಿದೆ ಎಂಬ ಟ್ರಸ್ಟಿನ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲದಿರುವುದನ್ನು ವಿರೋಧಿಸಿ “ಲೆಕ್ಕ ನೀಡಿ ಚಳುವಳಿ”ಯನ್ನು ಹಮ್ಮಿಕೊಳ್ಳಲಾಗಿದೆ. ಟ್ರಸ್ಟಿನ ಧರ್ಮದರ್ಶಿಗಳು ತಾವು ಭ್ರಷ್ಟರಲ್ಲದಿದ್ದರೆ ಧರ್ಮಸ್ಥಳದ ಮಂಜುನಾಥಸ್ವಾಮಿ ಅಥವಾ ಕೊಟ್ಟೂರೇಶ್ವರಸ್ವಾಮಿ ಅಥವಾ ವೀರಭದ್ರೇಶ್ವರಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಅವರು ನೇರ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೊಳೆಸಿರಿಗೆರೆ ಪರಮೇಶ್ವರಗೌಡ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಅರುಣ್ಕುಮಾರ್ ಪೂಜಾರ್, ರಾಜ್ಯ ಸಂಘದ ಉಪಾಧ್ಯಕ್ಷ ಶಂಕರೇಗೌಡ ಬುರುಪನಹಳ್ಳಿ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಎಚ್.ಬಿ.ಪಾಪಣ್ಣ, ಆಡಳಿತಾಧಿಕಾರಿ ಡಾ.ರಾಜ್ಕುಮಾರ್ ಹೊನ್ನಾಳಿ, ಹಾವೇರಿಯ ಡಾ.ವೀರಾಪುರ, ನಾಗೇಂದ್ರಪ್ಪ ಹಾವೇರಿ, ಸಿದ್ದು ಚಿಕ್ಕಬಿದರಿ, ರಾಜಣ್ಣ ರಾಣೇಬೆನ್ನೂರು, ಮಂಜುನಾಥ್, ರಾಘವೇಂದ್ರ, ಗಂಗಾಧರ ಇನ್ನಿತರರಿದ್ದರು.






