ವಿದ್ಯುತ್ ಮೀಟರ್ ಅಳವಡಿಕೆ, ರೈತ ವಿರೋಧಿ ಕೃಷಿ ಕಾಯ್ದೆ ಕೈಬಿಟ್ಟು, ನೀರಾವರಿ, ಬೆಳೆ ವಿಮೆ, ರಸಗೊಬ್ಬರ ಸೇರಿದಂತೆ ಜಿಲ್ಲೆಯ ರೈತರ ಹಲವು ಸಮಸ್ಯೆಗಳನ್ನು ಪರಿಹರಿಸಲು ದಾವಣಗೆರೆ ಜಿಲ್ಲಾಡಳಿತ ಮುಂದಾಗಬೇಕು ಎಂದು ವಾಸುದೇವ ಮೇಟಿ ಬಣ ರೈತಸಂಘದ ದಾವಣಗೆರೆ ನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಕರೆದಿದ್ದ, ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ “ರಾಜ್ಯದಲ್ಲಿ ತೀವ್ರ ಬಿಸಿಲಿಗೆ ರೈತ ಕಂಗೆಟ್ಟಿದ್ದಾರೆ. ಹಲವೆಡೆ ಕುಡಿಯುವ ನೀರು ಸೇರಿದಂತೆ ಕೃಷಿ ನೀರಿನ ಸಮಸ್ಯೆ ಹೆಚ್ಚಾಗಿದೆ. ರೈತವಿರೋಧಿ ಕೃಷಿ ಕಾಯ್ದೆ ಕೈಬಿಡಬೇಕು. ದಾವಣಗೆರೆ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದು, ರೈತರ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಸುವ ಕ್ರಮವನ್ನು ನಿಲ್ಲಿಸಿ ಉಚಿತ ವಿದ್ಯುತ್ ನೀಡಬೇಕು. ಎಫ್‌ಐಡಿ ವ್ಯವಸ್ಥೆಯನ್ನು ರದ್ದುಪಡಿಸಿ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸಬ್ಸಿಡಿ ರೂಪದಲ್ಲಿ ಒದಗಿಸಬೇಕು. ಜೊತೆಗೆ ಭತ್ತ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ದಾವಣಗೆರೆ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಮಾತನಾಡಿ “ತೆಂಗಿನ ತೋಟಗಳಲ್ಲಿ ಕಾಣಿಸುತ್ತಿರುವ ರೋಗಗಳ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಕ್ರಮ ಕೈಗೊಂಡು ಪರಿಹಾರ ನೀಡಬೇಕು. ಹಲವಾರು ವರ್ಷಗಳಿಂದ ಅರ್ಜಿ ಸಲ್ಲಿಸಿದ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಬೇಕು ಹಾಗೂ ಫಸಲ್ ಭೀಮಾ ಯೋಜನೆಯ ಪ್ರಯೋಜನವನ್ನು ಎಲ್ಲಾ ರೈತರಿಗೆ ತಲುಪಿಸಬೇಕು” ಎಂದು ಆಗ್ರಹಿಸಿದರು.
“ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಜಿಲ್ಲಾಡಳಿತ ತಕ್ಷಣ ಪರಿಹರಿಸಬೇಕು. ರೈತ ಸಂಘ ರೈತರಿಗೆ ಸೇವೆ ಸಲ್ಲಿಸಿಲು ಇರುವ ಸಂಘ. ಯಾರನ್ನೇ ಹಣ ಕೇಳದೇ ನಮ್ಮ ನಮ್ಮ ಖರ್ಚು ನಾವೇ ಭರಿಸಿ ಸೇವೆ ಮಾಡುವ ಮೂಲಕ ಸಮಸ್ಯೆ ವಿರುದ್ಧ ನಾವು ಅನ್ನದಾತರ ಜೊತೆ ನಿಲ್ಲಬೇಕು” ಎಂದು ತಿಳಿಸಿದರು.

ಜಗಳೂರು ತಾಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ ಮಾತನಾಡಿ “ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಸಾರ್ವಜನಿಕರ ಅದರಲ್ಲೂ ಮಹಿಳೆಯರ, ರೈತರ ಸಂಕಷ್ಟ ಜಗಳೂರು ತಾಲೂಕಿನಲ್ಲಿ ಹೆಚ್ಚಾಗಿದೆ. ಬೆಳಿಗ್ಗೆ 6 ಕ್ಕೆ ಮನೆಮುಂದೆ ನಿಲ್ಲುತ್ತಾರೆ. ರಾತ್ರಿ 11 ಗಂಟೆಯವರಗೂ ಮನೆಮುಂದೆ ಸಾಲ ವಸೂಲಿಗೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದರು.
“ಇತ್ತೀಚೆಗೆ ಜಗಳೂರು ತಾಲೂಕಿನಲ್ಲಿ ಸೋಲಾರ್, ವಿಂಡ್ ಮಿಲ್, ಹೈಟೆನ್ಷನ್ ವಿದ್ಯುತ್ ಲೈನ್ ಹಾವಳಿ ಹೆಚ್ಚಾಗಿದ್ದು, 220, 765 ಕೆವಿ ಸೇರಿದಂತೆ ದೊಡ್ಡ ದೊಡ್ಡ ಯೋಜನೆಗಳು ಬರುತ್ತಿವೆ. ಇವು ರೈತರ ಫಲವತ್ತಾದ ಭೂಮಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಭೂಮಿ ಅನುಪಯೋಗವಾಗುತ್ತಿದೆ. ಆದ್ದರಿಂದ ಅರಣ್ಯ ಅಥವಾ ಬರಡು ಭೂಮಿಯಲ್ಲಿ ಬೇರೆ ಮಾರ್ಗ ನಿರ್ಮಾಣ ಮಾಡಬೇಕು. ರೈತರು ಭೂಮಿಯನ್ನು ಕೊಡುವುದಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? http://ಹರಿಹರ | ಜಾತಿ ನಿಂದನೆ ಆರೋಪ: ಬಿಜೆಪಿ ಶಾಸಕ ಬಿ ಪಿ ಹರೀಶ್‌ಗೆ ವಾರೆಂಟ್
ಕಾರ್ಯಕಾರಿ ಸಭೆಯಲ್ಲಿ ಬೆಳಲಗೆರೆ ಸಂತೋಷ್, ಕೆಂಚಮ್ಮನಹಳ್ಳಿ ಹನುಮಂತಪ್ಪ, ಕಿತ್ತೂರು ಹನುಮಂತಪ್ಪ, ಸುನಿಲ್, ಕೋಲ್ಕುಂಟೆ ಹುಚ್ಚಂಗಪ್ಪ, ಕುಮಾರ್ ಡಿ, ಕೃಷ್ಣಪ್ಪ ಚಿಕ್ಕತೊಗಲೇರಿ, ಮಲ್ಲಿಕಾರ್ಜುನ್ ಚಿಕ್ಕತೊಗಲೇರಿ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.





