ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026ರ ಫಲಿತಾಂಶಗಳು ರಾಜ್ಯದ ರಾಜಕೀಯ ಚಿತ್ರಣವನ್ನು ಪೂರ್ಣವಾಗಿ ಬದಲಾಯಿಸಿವೆ. ಅದನ್ನ ಬದಲಾಯಿಸುತ್ತಿರುವವರು ಬಂಗಾಳದ ಸಿಂಹಿಣಿ ಎಂತಲೇ ಹೆಸರುವಾಸಿಯಾದ ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಮಮತಾ ಬ್ಯಾನರ್ಜಿ ಎಂದರೆ ಕೇವಲ ಒಬ್ಬ ಮುಖ್ಯಮಂತ್ರಿಯಲ್ಲ, ಅದೊಂದು ಅಪ್ರತಿಮ ಹೋರಾಟದ ಸಂಕೇತ. ಪ್ರಸ್ತುತ ಚುನಾವಣಾ ಫಲಿತಾಂಶದ ನಂತರ ಅವರು ಕೈಗೊಂಡಿರುವ ನಿರ್ಧಾರಗಳು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. “ನಾನು ಸೋತಿಲ್ಲ, ರಾಜೀನಾಮೆ ನೀಡಲ್ಲ” ಎಂಬ ದೀದಿಯ ಗುಡುಗು ಬಿಜೆಪಿಯ ಚುನಾವಣಾ ತಂತ್ರಗಾರಿಕೆ ಮತ್ತು ಸಂಸ್ಥೆಗಳನ್ನು ಬಳಸಿಕೊಂಡು ಆಡಿರುವ ಆಟಕ್ಕೆ ಪ್ರತಿಭಟನೆಯಂತೆ ಭಾಸವಾಗುತ್ತಿದೆ. ಬಿಜೆಪಿ ಎಸ್‌ಐಆರ್ (SIR – System, Institutions, Resources) ಹೆಸರಿನಲ್ಲಿ ನಡೆಸಿದ ಮತಾಧಿಕಾರ ಹರಣದ ರಾಜಕಾರಣಕ್ಕೆ ಮಮತಾ ಅವರು ಸಂವಿಧಾನದ ಚೌಕಟ್ಟಿನಲ್ಲೇ ಪ್ರತಿಭಟಿಸಲು ಮುಂದಾಗಿದ್ದಾರೆ..
ಜನಾದೇಶದ ಲೂಟಿ ಮತ್ತು ಮಮತಾ ಅವರ ಪ್ರತಿರೋಧ
ಚುನಾವಣಾ ಫಲಿತಾಂಶ ಬಂದ ನಂತರ ಮಮತಾ ಬ್ಯಾನರ್ಜಿ ಅವರು ಹೇಳಿದ ಒಂದು ಮಾತು ಅತ್ಯಂತ ಮಾರ್ಮಿಕವಾಗಿದೆ. “ಇದು ಜನರು ನೀಡಿದ ತೀರ್ಪಲ್ಲ, ಇದು ಲೂಟಿಯ ಫಲಿತಾಂಶ”. ಬಿಜೆಪಿ ಸರ್ಕಾರವು ಕೇಂದ್ರದ ತನಿಖಾ ಸಂಸ್ಥೆಗಳು, ಚುನಾವಣಾ ಆಯೋಗ ಮತ್ತು ಇತರ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು (Institutions) ಬಳಸಿಕೊಂಡು ಬಂಗಾಳದ ಜನಾದೇಶವನ್ನು ಹತ್ತಿಕ್ಕಲು ಪ್ರಯತ್ನಿಸಿದೆ. ಈ “ಲೂಟಿ”ಯ ವಿರುದ್ಧ ಧ್ವನಿ ಎತ್ತದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂಬುದು ಮಮತಾ ಬ್ಯಾನರ್ಜಿ ಅವರ ಆಕ್ರೋಶ. ಹೀಗಾಗಿಯೇ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ತಮ್ಮ ನಿರ್ಗಮನದ ಮೇಲೆಯೂ ಪ್ರತಿಭಟನೆ- ಬಂಡಾಯದ ಮೊಹರು ಒತ್ತುವ ಜನನಾಯಕಿಯ ತಂತ್ರಗಾರಿಕೆಯಿದು. ಮುಖ್ಯ ಚುನಾವಣಾಧಿಕಾರಿ ಗ್ಯಾನೇಶ್ ಕುಮಾರ್ ಮೂಲಕ ಬಿಜೆಪಿ ನಡೆಸಿದ ಮಹಾ ಮತಾಧಿಕಾರ ಹರಣ ಮತ್ತು ಅದರ ಪರಿಣಾಮವಾಗಿ ತಮಗೆ ಉಂಟಾಗಿರುವ ಸೋಲಿನ ಕುರಿತು ಬಂಗಾಳದ ಹೊರಗೆ ಮತ್ತು ಒಳಗೆ ಜನಸಾಮಾನ್ಯರ ಗಮನ ಸೆಳೆಯುವುದು ಆಕೆಯ ಉದ್ದೇಶ. ಅಪ್ಪಟ ಅನ್ಯಾಯದ ವಿರುದ್ಧ ಬಾಯಿ ಹೊಲಿದುಕೊಂಡು ನಿರ್ಗಮಿಸುವ ಜಾಯಮಾನ ತಮ್ಮದಲ್ಲ ಎಂದು ಗರ್ಜಿಸಿ ಹೇಳುವ ರಾಜಕೀಯ ನಡೆಯಿದು. ಫಲಿತಾಂಶಗಳು ಹೊರಬಿದ್ದ ನಂತರವೂ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡೇ ಇರುವ ಇರಾದೆ ದೀದಿಗೆ ಇಲ್ಲ. ಮುಂದಿನ ದಿನಗಳನ್ನು ಇಂಡಿಯಾ ಒಕ್ಕೂಟವನ್ನು ಬಲಪಡಿಸಲು ಮೀಸಲಿರಿಸುವುದಾಗಿ ಈಗಾಗಲೆ ಸಾರಿದ್ದಾರೆ. ಅದರ ಅರ್ಥ ಮುಖ್ಯಮಂತ್ರಿ ಹುದ್ದೆಗೆ ಜಿಗಣಿಯಂತೆ ಅಂಟಿಕೊಳ್ಳುವುದಲ್ಲ, ಬದಲಿಗೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿ ನಿರ್ಗಮಿಸುವುದೇ ಆಗಿದೆ.

ಸಂವಿಧಾನ ಏನು ಹೇಳುತ್ತದೆ?
ಭಾರತದ ಸಂವಿಧಾನವು ರಾಜ್ಯದ ಆಡಳಿತ ಮತ್ತು ಮುಖ್ಯಮಂತ್ರಿಯ ಅಧಿಕಾರಾವಧಿಯ ಬಗ್ಗೆ ಸ್ಪಷ್ಟವಾದ ನಿಯಮಗಳನ್ನು ಹೊಂದಿದೆ.
ಅನುಚ್ಛೇದ 164: ಈ ವಿಧಿಯ ಪ್ರಕಾರ, ಮುಖ್ಯಮಂತ್ರಿಯನ್ನು ರಾಜ್ಯಪಾಲರು ನೇಮಿಸುತ್ತಾರೆ ಮತ್ತು ಇತರ ಸಚಿವರನ್ನು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ನೇಮಿಸಲಾಗುತ್ತದೆ. ಮುಖ್ಯಮಂತ್ರಿಯು ರಾಜ್ಯಪಾಲರ “ಮರ್ಜಿ” (Pleasure) ಇರುವವರೆಗೆ ಅಧಿಕಾರದಲ್ಲಿರುತ್ತಾರೆ. ಆದರೆ, ಈ ‘ಮರ್ಜಿ’ ಎನ್ನುವುದು ವಿಧಾನಸಭೆಯ ಬಹುಮತಕ್ಕೆ ಅನ್ವಯಿಸುತ್ತದೆ.
ಅಧಿಕಾರಾವಧಿ ಮುಕ್ತಾಯ: ವಿಧಾನಸಭೆಯ ಅವಧಿ ಮುಗಿದಾಗ (ಇಲ್ಲಿ ಮೇ 7), ತಾಂತ್ರಿಕವಾಗಿ ಸರ್ಕಾರವು ಅಸ್ತಿತ್ವ ಕಳೆದುಕೊಳ್ಳುತ್ತದೆ. ಸಾಮಾನ್ಯವಾಗಿ, ಹೊಸ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ (Caretaker) ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಸೂಚಿಸುತ್ತಾರೆ. ಆದರೆ, ಮುಖ್ಯಮಂತ್ರಿಯು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಒಂದು ಸಂಸದೀಯ ಸತ್ಸಂಪ್ರದಾಯ.
ಮುಖ್ಯಮಂತ್ರಿ ಹುದ್ದೆಯಿಂದ ವಜಾ ಮತ್ತು ರಾಜ್ಯಪಾಲರ ಪಾತ್ರ
ಮಮತಾ ಬ್ಯಾನರ್ಜಿ ಅವರು ತಾವಾಗಿಯೇ ರಾಜೀನಾಮೆ ನೀಡದಿದ್ದರೆ, ರಾಜ್ಯಪಾಲರಿಗೆ ಕೆಲವು ಸಾಂವಿಧಾನಿಕ ಅಧಿಕಾರಗಳಿವೆ.
ವಜಾ ಮಾಡುವ ಅಧಿಕಾರ: ವಿಧಾನಸಭೆಯ ಅವಧಿ ಮುಗಿದ ಮೇಲೆಯೂ ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದರೆ, ರಾಜ್ಯಪಾಲರು ಮಂತ್ರಿಮಂಡಲವನ್ನು ವಜಾ ಮಾಡಬಹುದು. ಪ್ರಜಾಪ್ರಭುತ್ವದಲ್ಲಿ ಬಹುಮತ ಕಳೆದುಕೊಂಡ ಅಥವಾ ಅವಧಿ ಮುಗಿದ ಸರ್ಕಾರಕ್ಕೆ ಅಧಿಕಾರದಲ್ಲಿರುವ ಹಕ್ಕಿರುವುದಿಲ್ಲ.
ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು: ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂದು ರಾಜ್ಯಪಾಲರು ಭಾವಿಸಿದರೆ, ಸಂವಿಧಾನದ ಅನುಚ್ಛೇದ 356 ರ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಬಹುದು.
ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಸನ್ನಿವೇಶವು ರಾಷ್ಟ್ರಪತಿ ಆಳ್ವಿಕೆಯತ್ತ ಸಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಮಮತಾ ಬ್ಯಾನರ್ಜಿ ಅವರು ವಜಾ ಮಾಡಿಸಿಕೊಳ್ಳಲು ಕಾಯುತ್ತಿದ್ದಾರೆ ಎನ್ನುವುದು ನಿಜವಾದರೆ, ಅದು “ಸಾಂವಿಧಾನಿಕ ಬಿಕ್ಕಟ್ಟು” (Constitutional Crisis) ಎಂಬ ಹಣೆಪಟ್ಟಿಯನ್ನು ಸೃಷ್ಟಿಸುತ್ತದೆ.
ಬಿಜೆಪಿಯ ಆಟಕ್ಕೆ ಮಮತಾ ಸಿದ್ಧಪಡಿಸಿದ ಪಾಠ
ಬಿಜೆಪಿಯು ಸತತವಾಗಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲಾ ರೀತಿಯ ಕಸರತ್ತುಗಳನ್ನು ನಡೆಸುತ್ತಾ ಬಂದಿದೆ. ಹಣಬಲ ಮತ್ತು ತೋಳ್ಬಲದ ಮೂಲಕ ಚುನಾವಣೆ ಗೆಲ್ಲುವ ತಂತ್ರಕ್ಕೆ ಮಮತಾ ಅವರು ಈಗ “ನೈತಿಕತೆಯ” ಅಸ್ತ್ರದ ಮೂಲಕ ತಿರುಗೇಟು ನೀಡುತ್ತಿದ್ದಾರೆ.
ವ್ಯವಸ್ಥಿತ ಹೋರಾಟ: ಬಿಜೆಪಿಯು ವ್ಯವಸ್ಥೆಯನ್ನು (System) ಬಳಸಿಕೊಂಡು ತಮ್ಮನ್ನು ಸೋಲಿಸಲು ಯತ್ನಿಸಿದೆ ಹಾಗಾಗಿ, ತಾವಾಗಿ ರಾಜೀನಾಮೆ ನೀಡದೆ, ಮೋದಿ ಅಮಿತ್ ಶಾ ತಮ್ಮನ್ನು ಕಿತ್ತು ಹಾಕುವ ಅನಿವಾರ್ಯ ಸ್ಥಿತಿಯನ್ನು ಬೇಕೆಂದೇ ಆಹ್ವಾನಿಸುತ್ತಿದ್ದಾರೆ. ಬಿಜೆಪಿಯು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತಿದೆ ಎಂಬ ಆರೋಪದ ನಡುವೆ, ಮಮತಾ ಅವರು ರಾಜ್ಯಪಾಲರ ಹಂತದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಮೂಲಕ ಕೇಂದ್ರ ಸರ್ಕಾರವನ್ನು ತಮ್ಮನ್ನು ಕಿತ್ತು ಹಾಕುವ ಅನಿವಾರ್ಯಕ್ಕೆ ಸಿಲುಕಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ ಅವರು ವಜಾ ಮಾಡಿಸಿಕೊಳ್ಳಲು ಕಾಯುತ್ತಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ಹಿಂದೆ ಬಲವಾದ ತರ್ಕವಿದೆ. ಒಂದು ವೇಳೆ ಕೇಂದ್ರ ಸರ್ಕಾರವು ಅಥವಾ ರಾಜ್ಯಪಾಲರು ಅವರನ್ನು ಪದಚ್ಯುತಗೊಳಿಸಿದರೆ, ಅದು ಬಂಗಾಳದ ಅಸ್ಮಿತೆಯ ಮೇಲೆ ನಡೆದ ದಾಳಿ ಎಂದು ಮಮತಾ ಬಿಂಬಿಸಲಿದ್ದಾರೆ. ಇದು ಬಂಗಾಳದ ಜನರಲ್ಲಿ ಬಿಜೆಪಿ ವಿರೋಧದ ಭಾವನೆ ಮೂಡಿಸಲು ಸಹಕಾರಿಯಾಗಲಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ತಾವು ಈ ಹಠಕ್ಕೆ ಬಿದ್ದಿರುವುದಾಗಿ ಅವರು ತೋರಿಸುತ್ತಿದ್ದಾರೆ. ಬಿಜೆಪಿಯ “ಆಪರೇಷನ್ ಕಮಲ” ಅಥವಾ ಸಂಸ್ಥೆಗಳ ದುರ್ಬಳಕೆಯ ಕುರಿತು ಜನತೆಯ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಬಂಗಾಳದ ವಿಧಾನಸಭೆಯ ಹಾಲಿ ಅವಧಿ ಮೇ 7ಕ್ಕೆ ಮುಕ್ತಾಯವಾಗಬಹುದು. ಆದರೆ, ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಸಂದೇಹವಿರುವಾಗ ಮತ್ತು ಜನಾದೇಶವನ್ನೇ ತಿರುಚಲಾಗಿದೆ ಎಂಬ ಗಂಭೀರ ಆರೋಪವಿರುವಾಗ, ಕೇವಲ ತಾಂತ್ರಿಕ ಕಾರಣಕ್ಕೆ ರಾಜೀನಾಮೆ ನೀಡುವುದು ಜನರಿಗೆ ಮಾಡುವ ದ್ರೋಹ ಎಂಬುದು ಮಮತಾ ಅವರ ನಿಲುವು. ಬಿಜೆಪಿಯು ಸಾಂವಿಧಾನಿಕ ಸಂಸ್ಥೆಗಳನ್ನು (SIR) ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿರುವಾಗ, ಅದೇ ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರು ತೆಗೆದುಕೊಳ್ಳುವ ಪ್ರತಿಯೊಂದು ಕ್ರಮವನ್ನೂ ಪ್ರಶ್ನಿಸಲು ಅವರು ಸಿದ್ಧರಾಗಿದ್ದಾರೆ. ಇದು ಕೇವಲ ಅಧಿಕಾರಕ್ಕಾಗಿ ನಡೆಸುತ್ತಿರುವ ಹಠವಲ್ಲ, ಬದಲಾಗಿ ಕೇಂದ್ರದ ಅಧಿಪತ್ಯದ ವಿರುದ್ಧ ರಾಜ್ಯವೊಂದರ ಧರ್ಮಯುದ್ಧದ ಕಡೆಯ ಹಂತದಂತೆ ಕಾಣುತ್ತಿದೆ.
ಒಂದು ವೇಳೆ ಈ ಸಂಘರ್ಷದ ಅಂತ್ಯವಾಗಿ ಕೇಂದ್ರವು ರಾಷ್ಟ್ರಪತಿ ಆಳ್ವಿಕೆ ಹೇರಿದರೆ, ಮಮತಾ ಬ್ಯಾನರ್ಜಿ ಅವರಿಗೆ ಅದು ದೊಡ್ಡ ರಾಜಕೀಯ ಅಸ್ತ್ರವಾಗಲಿದೆ. “ಬಂಗಾಳದ ಹೆಣ್ಣುಮಗಳ ಮೇಲೆ ಕೇಂದ್ರದ ದಬ್ಬಾಳಿಕೆ” ಎಂಬ ಅಭಿಯಾನವನ್ನು ಅವರು ಬೀದಿಗಿಳಿದು ನಡೆಸಬಹುದು. ಬಿಜೆಪಿಯ ಆಟಕ್ಕೆ ಬಂಗಾಳದ ಮಣ್ಣಿನಲ್ಲಿ ಪಾಠ ಕಲಿಸುವುದು ಹೇಗೆ ಎಂಬುದು ಮಮತಾ ಅವರಿಗೆ ಚೆನ್ನಾಗಿ ತಿಳಿದಿದೆ.
ಆದರೆ, ಈ ರಾಜಕೀಯ ಸಂಘರ್ಷದ ನಡುವೆಯೂ ಪಶ್ಚಿಮ ಬಂಗಾಳದ ವಾಸ್ತವ ಸ್ಥಿತಿಯ ಮತ್ತೊಂದು ಮುಖವನ್ನು ಕಡೆಗಣಿಸುವಂತಿಲ್ಲ. ಮಮತಾ ಬ್ಯಾನರ್ಜಿ ಅವರ ಆಡಳಿತದ ವಿರುದ್ಧ ಜನಸಾಮಾನ್ಯರಲ್ಲಿ ಆಡಳಿತ ವಿರೋಧಿ ಅಲೆ (Anti-incumbency) ಎದ್ದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ತೃಣಮೂಲ ಕಾಂಗ್ರೆಸ್‌ನ (TMC) ಕೆಳಹಂತದ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವುದು, ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ನಡೆಸುವುದು ಮತ್ತು ರಾಜಕೀಯ ದಾದಾಗಿರಿಯ ಬಂಗಾಳಿಗರಲ್ಲಿ ಅಸಮಾಧಾನ ಉಂಟು ಮಾಡಿದ್ದು ಹೌದು…ಈ ಎಲ್ಲ ಅಸಮಾಧಾನಗಳ ನಡುವೆಯೂ ದೀದಿ ಬಿಜೆಪಿಗೆ ಕಠಿಣ ಫೈಟ್ ಕೊಟ್ಟಿದ್ದರು. ಅವರನ್ನು ಮಣಿಸಲು ಬಿಜೆಪಿ ಏಕಕಾಲಕ್ಕೆ ಹಲವು ಅಸ್ತ್ರಗಳನ್ನು ಪ್ರಯೋಗಿಸಬೇಕಾಯಿತು. ಅವುಗಳ ಪೈಕಿ 90 ಲಕ್ಷ ಬಂಗಾಳಿಗರ ಮತಾಧಿಕಾರದ ಹತ್ಯೆ. ಈ ರಕ್ತರಹಿತ ನರಮೇಧ ನಡೆದದ್ದು ಬಿಜೆಪಿಯ ಗೆಲುವಿನ ಮೇಲೆ ದೊಡ್ಡ ಕಳಂಕವನ್ನು ಇರಿಸಿದೆ.
ಮಮತಾ ಬ್ಯಾನರ್ಜಿ ಅವರು ಇಂದು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಪ್ರಜಾಪ್ರಭುತ್ವದಲ್ಲಿ ಒಂದು ಹೊಸ ಮಾದರಿಯ ಪ್ರತಿರೋಧವನ್ನು ಸೃಷ್ಟಿಸಿವೆ. ಅದರ ಹಲವು ಝಲಕ್ ಗಳನ್ನು ಅವರು ಕಳೆದ 15 ವರ್ಷಗಳ ತಮ್ಮ ಆಡಳಿತದಲ್ಲಿ ತೋರಿದ್ದಾರೆ. ಬಿಜೆಪಿಯ ಮಹಾನ್ ಕುತಂತ್ರ ಎಂದೇ ಬಣ್ಣಿಸಲಾದ 90 ಲಕ್ಷ ಮಂದಿಯ ಮತಾಧಿಕಾರ ಹರಣದ ವಿರುದ್ಧ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು. ಖುದ್ದು ತಾವೇ ನ್ಯಾಯಪೀಠದ ಮುಂದೆ ಪ್ರಬಲ ವಾದ ಮಂಡಿಸಿ ನ್ಯಾಯಕ್ಕಾಗಿ ಮೊರೆಯಿಟ್ಟ ಪರಿಯನ್ನು ದೇಶ ಈಗಾಗಲೇ ನೋಡಿದೆ. ಬಿಜೆಪಿಯ ರಾಜಕೀಯ ತಂತ್ರಗಳಿಗೆ ಮಣಿಯದೆ, ಮುಖಾಮುಖಿಯಾಗಿ ನಿಂತು ಸವಾಲು ಹಾಕುವ ಅವರ ಧೈರ್ಯ ಮೆಚ್ಚುವಂತದ್ದು. ಅಧಿಕಾರಕ್ಕಿಂತಲೂ ಹೆಚ್ಚಾಗಿ “ಜನಾದೇಶದ ಪವಿತ್ರತೆ” ಮುಖ್ಯ ಎಂದು ಅವರು ವಾದಿಸುತ್ತಿದ್ದಾರೆ. ಬಿಜೆಪಿಯು ಸಂಸ್ಥೆಗಳನ್ನು ಬಳಸಿಕೊಂಡು ಆಡಿದ ಆಟಕ್ಕೆ, ಮಮತಾ ಪ್ರತ್ಯುತ್ತರ ನೀಡಿಯೇ ನಿರ್ಗಮಿಸುವ ನಿಚ್ಚಳ ಸೂಚನೆ ತೋರಿದ್ದಾರೆ..




