ಜಿಲ್ಲೆಯಲ್ಲಿ ಹಲವೆಡೆ ಮಳೆಯ ಸಿಂಚನವಾಗಿದ್ದು ಬಿರು ಬಿಸಿಲಿನಿಂದ ಕಂಗಟ್ಟಿದ್ದ ದಾವಣಗೆರೆ ಜಿಲ್ಲೆಯ ಜನರಿಗೆ ಹಾಗೂ ರೈತರಿಗೆ ಸ್ವಲ್ಪ ಸಮಾಧಾನ ಹಾಗೂ ಹರ್ಷ ಮೂಡಿಸಿದೆ. ಈ ಮಧ್ಯೆ ಸೋಮವಾರ ಮತ್ತು ಮಂಗಳವಾರ ಸುರಿದಿರುವ ಬಿರುಗಾಳಿ ಸಹಿತ ಮಳೆಗೆ ಹಲವಡೆ ಬಾಳೆ, ಅಡಿಕೆ ಸೇರಿದಂತೆ ಮರ ಗಿಡಗಳು ಉರುಳಿ ಬಿದ್ದು ಬೆಳೆ ಹಾನಿಯಾದ ಘಟನೆಗಳು ವರದಿಯಾಗಿವೆ.

ಸೋಮವಾರ ಸುರಿದ ಭಾರಿ ಗಾಳಿ ಸಮೇತ ಮಳೆಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಯಾಗಳಹಳ್ಳಿ ಗ್ರಾಮ ಸೇರಿದಂತೆ ಹಲವೆಡೆ ಬಾಳೆ, ಅಡಿಕೆ ಗಿಡಗಳು ನೆಲಕ್ಕುರುಳಿದ್ದು, ಬೆಳೆ ಹಾನಿಯಾದ ಬಗ್ಗೆ ಮಾಹಿತಿ ಪಡೆದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ರೈತರ ಜಮೀನುಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಮಳೆ ಸುರಿದಿದೆ.
ಕ್ಷೇತ್ರದ ವ್ಯಾಪ್ತಿಯ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಗ್ರಾಮದ ನಾಗಣ್ಣ ಎಂಬುವರ ತೋಟದಲ್ಲಿ ಬಾಳೆ ಗಿಡಗಳು ಹಾಗೂ ಅಡಿಕೆ ಮರಗಳು ನೆಲಕ್ಕುರುಳಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

“ಆನೆಕಲ್ಲು ಮಳೆ ಸುರಿದ ಸಂದರ್ಭದಲ್ಲಿ ಬಾಳೆ ಗಿಡಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದವು. ಆದರೆ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ತೋಟದಲ್ಲಿ ಹಾಕಿದ್ದ ಎಲ್ಲಾ ಬಾಳೆ ಗಿಡಗಳು ನೆಲಕ್ಕುರುಳಿವೆ. ಸದ್ಯಕ್ಕೆ ಬಾಳೆ ಗಿಡಗಳೇ ಆರ್ಥಿಕ ಮೂಲವಾಗಿದ್ದವು. ಈಗ ಎಲ್ಲಾ ಬಾಳೆ ಗಿಡಗಳು ನೆಲಕ್ಕುರುಳಿರುವುದರಿಂದ ದಿಕ್ಕು ತೋಚದಂತಾಗಿದೆ” ಎಂದು ರೈತ ನಾಗಣ್ಣ, ಶಾಸಕರು ಮತ್ತು ತೋಟಗಾರಿಕೆ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.

“ಮಳೆಯೊಂದಿಗೆ ಬೀಸಿದ ಭಾರೀ ಬಿರುಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿ ಹಾನಿಯಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಿ ಕೂಡಲೇ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು” ಎಂದು ಸ್ಥಳದಲ್ಲೇ ಇದ್ದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಫರ್ವಿನ್ ಅವರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಂಚಕರ ಆನ್‌ಲೈನ್ ಟ್ರೇಡಿಂಗ್ ಆಮಿಷಕ್ಕೆ ಹಣ ಕಳೆದುಕೊಂಡ ಉಪನ್ಯಾಸಕ
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಅರುಣ್ ರಾಜ್, ಗ್ರಾಮ ಲೆಕ್ಕಾಧಿಕಾರಿ ರೇಖಾ, ಕಂದಾಯ ನಿರೀಕ್ಷಕ ಬಸವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಣ್ಣ, ರೈತರಾದ ಹಾಲೇಶ್, ನಾಗಣ್ಣ, ಷಣ್ಮುಖಪ್ಪ, ಗುರುಸಿದ್ದಪ್ಪ, ಡಿ.ಎಚ್.ಕರಿಯಪ್ಪ, ಅಂಜಿನಪ್ಪ, ರಾಜಣ್ಣ, ದುರುಗಪ್ಪ, ಹನುಮಂತಪ್ಪ, ಕುಬೇರಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.





