ಪಂಚಮಸಾಲಿ ಪೀಠ ವಿವಾದವು ಧಾರ್ಮಿಕ ಪೀಠಗಳ ಆಡಳಿತದಲ್ಲಿ ಪಾರದರ್ಶಕತೆ, ಟ್ರಸ್ಟ್-ಸ್ವಾಮೀಜಿ ಸಂಬಂಧ ಮತ್ತು ಸಮುದಾಯದ ಒಗ್ಗಟ್ಟಿನ ಪ್ರಶ್ನೆಗಳನ್ನು ಮುಂದಿಟ್ಟಿದೆ. ಟ್ರಸ್ಟ್ ಪಕ್ಷ ಮತ್ತು ಸ್ವಾಮೀಜಿ ಪಕ್ಷ ಎರಡೂ ತಮ್ಮ ನಿಲುವುಗಳನ್ನು ಬಲವಾಗಿ ರಕ್ಷಿಸುತ್ತಿವೆ. ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಮಾತ್ರ ಇದು ಪರಿಹಾರವಾಗಬಹುದು ಎಂಬುದು ಅನೇಕರ ಅಭಿಪ್ರಾಯವಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠವು ಇತ್ತೀಚಿನ ದಿನಗಳಲ್ಲಿ ತೀವ್ರ ವಿವಾದದ ಕೇಂದ್ರಬಿಂದುವಾಗಿದೆ. ಟ್ರಸ್ಟ್ ಮತ್ತು ಪೀಠಾಧಿಪತಿ ವಚನಾನಂದ ಸ್ವಾಮೀಜಿ ನಡುವಿನ ಸಂಘರ್ಷವು ಲೆಕ್ಕಪತ್ರದ ಪಾರದರ್ಶಕತೆಯ ಕುರಿತು ಆರಂಭವಾಗಿ, ಉಚ್ಚಾಟನೆ, ಪ್ರತಿಭಟನೆ, ಆರೋಪ-ಪ್ರತ್ಯಾರೋಪಗಳು ಮತ್ತು ಕಾನೂನು ಹೋರಾಟದವರೆಗೆ ವಿಸ್ತರಿಸಿದೆ. ಇದು ಕೇವಲ ವೈಯಕ್ತಿಕ ಅಥವಾ ಆಡಳಿತದ ವಿವಾದವಲ್ಲ; ಪಂಚಮಸಾಲಿ ಸಮುದಾಯದ ಒಗ್ಗಟ್ಟು, ಮಠದ ಆಸ್ತಿ-ದೇಣಿಗೆಗಳ ನಿರ್ವಹಣೆ ಮತ್ತು ಧಾರ್ಮಿಕ ನಾಯಕತ್ವದ ಪ್ರಶ್ನೆಗಳನ್ನು ಎತ್ತಿ ಹಿಡಿದಿದೆ.
ಹರಿಹರ ಬಳಿಯ ಮಠದ ಆವರಣದಲ್ಲಿ ಇಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಟ್ರಸ್ಟ್ ಆಯೋಜಿಸಿದ್ದ ಲೆಕ್ಕಪತ್ರ ಮಂಡನೆ ಸಮಾರಂಭಕ್ಕೆ ಭಕ್ತರು ಆಗಮಿಸಿದ್ದಾರೆ. ಸಭೆ ಆರಂಭವಾದ ಕೆಲ ಹೊತ್ತಿನ ಬಳಿಕ ಸಭೆಯಿಂದ ಹೊರ ನಡೆದ ಕೆಲವರು ಲೆಕ್ಕಪತ್ರ ಮಂಡನೆ ಸಭೆಗೆ ಬಹಿಷ್ಕಾರ ಹಾಕಿದರು. ಇದರಿಂದ ಸಭೆಯಲ್ಲಿ ಗೊಂದಲ ಉಂಟಾಗಿದೆ.
ಬಳಿಕ ಸ್ವಾಮೀಜಿ ಪರ ಗುಂಪು ವೇದಿಕೆ ಸಮೀಪ ಧಾವಿಸಿ ಟ್ರಸ್ಟ್ ಸದಸ್ಯ ಎಚ್ ಎಸ್ ನಾಗರಾಜ್ ಅವರ ಭಾಷಣಕ್ಕೆ ಅಡ್ಡಿಪಡಿಸಿತು. ಇದರಿಂದ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು. ವೇದಿಕೆಗೆ ನುಗ್ಗುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಟ್ರಸ್ಟ್ ಪರವಾಗಿರುವವರು ‘ಹರ ಹರ ಮಹಾದೇವ’, ‘ಜೈ ಪಂಚಮಸಾಲಿ’ ಘೋಷಣೆ ಮೊಳಗಿಸಿದರು.
ಮಧ್ಯೆ ಪ್ರವೇಶಿಸಿದ ಪೊಲೀಸರು ಸ್ವಾಮೀಜಿ ಪರ ಬಣದ ಭಕ್ತರನ್ನು ದೇಗುಲದ ಸಮೀಪ ತಡೆದರು. ಗೊಂದಲ ಉಂಟಾಗದಂತೆ ಎಚ್ಚರಿಕೆ ನೀಡಿದರು. ಕೆಲ ಹೊತ್ತಿನ ಬಳಿಕ ಸ್ವಾಮೀಜಿ ಪರ ಭಕ್ತರು ಗುರುಪೀಠದ ಕಟ್ಟಡದ ಕಡೆ ಸಾಗಿದ್ದು, ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ ಸಿ ಉಮಾಪತಿ ಅವರು ಲೆಕ್ಕಪತ್ರ ಮಂಡನೆ ಮಾಡುತ್ತಿದ್ದ ವೇಳೆ ನಿಂದಿಸಿರುವ ಘಟನೆಗಳು ನಡೆದಿವೆ.

ʼಎಲ್ಲರೂ ಕಳ್ಳರು ಕಳ್ಳರುʼ ಘೋಷಣೆ: ಲೆಕ್ಕ ಕೊಡುವ ಅಭಿಯಾನ ಹಿನ್ನೆಲೆಯಲ್ಲಿ ಹರಿಹರದ ಪಂಚಮಸಾಲಿ ಪೀಠದಲ್ಲಿ ಲೆಕ್ಕಕೊಡುವ ಕಾರ್ಯಕ್ರಮ ನಡೆಯಿತು. ಪಂಚಮಸಾಲಿ ಪೀಠದ ಟ್ರಸ್ಟಿ ಹಾಗೂ ಬಿ ಸಿ ಉಮಾಪತಿ ಜೊತೆ ಗುರುತಿಸಿಕೊಂಡಿದ್ದ ಟ್ರಸ್ಟಿ ಹೆಚ್ ಎಸ್ ನಾಗರಾಜ್ ಆಗಮಿಸುತ್ತಿದ್ದಂತೆ ಈ ವೇಳೆ ವಚನಾನಂದ ಶ್ರೀಗಳ ಅಭಿಮಾನಿಗಳು ಧಿಕ್ಕಾರ ಕೂಗಿದರು. ಅಲ್ಲದೆ ಕಳ್ಳ ಕಳ್ಳ ಎಂದು ನಾಗರಾಜ್ ವಿರುದ್ಧ ಘೋಷಣೆ ಹಾಕಿದರು. ಬಿ.ಸಿ ಉಮಾಪತಿ, ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್ ಹೆಚ್.ಎಸ್. ನಾಗರಾಜ್ ಎಲ್ಲರೂ ಕಳ್ಳರು ಎಂದು ಘೋಷಣೆ ಹಾಕಿದರು. ಅಲ್ಲದೆ ಕಳ್ಳ ಲೆಕ್ಕ ಕೊಡುತ್ತಿರುವ ಬಿ ಸಿ ಉಮಾಪತಿ ಎಂದು ನಿಂದಿಸಿದರು.
ಧರ್ಮದರ್ಶಿ ಬಿ ಸಿ ಉಮಾಪತಿಯವರಿಗೆ ಕೇಂದ್ರ ಸಚಿವ ವಿ ಸೋಮಣ್ಣ ಕರೆ: ವೇದಿಕೆ ಮೇಲೆ ಪ್ರಧಾನ ಧರ್ಮದರ್ಶಿ ಬಿ ಸಿ ಉಮಾಪತಿಯವರು ಲೆಕ್ಕ ಕೊಡುತ್ತಿದ್ದ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ದೂರವಾಣಿ ಕರೆ ಮಾಡಿದರು. ಉಮಾಪತಿಯವರು ದೂರವಾಣಿಯಲ್ಲಿ ಕರೆಯಲ್ಲಿ ಉತ್ತರಿಸಿ, “ಇಲ್ಲಿ ತನಕ ನಿಮ್ಮ ಮಾತು ಹಾಗೂ ಮುರುಗೇಶ್ ನಿರಾಣಿಯವರ ಮಾತು ಕೇಳಿ ಏನೂ ಮಾತನಾಡಲಿಲ್ಲ. ನಮ್ಮ ಸಮಾಜದ ಮರ್ಯಾದೆ ಕಳೆದರೆ ಸುಮ್ಮನೆ ಇರಬೇಕಾ? ಸುಮ್ಮನೆ ಇರಲು ನಾನು ಚುನಾವಣೆಯಲ್ಲಿ ಮತ ಪಡೆಯಲು ಕೈ ಮುಗಿಯುತ್ತಿಲ್ಲ. ನಮ್ಮ ನೋವು ನಾವು ಹೇಳಿಕೊಳ್ಳಲಿಲ್ಲ ಎಂದರೆ ನಮ್ಮ ಸಮಾಜಕ್ಕೆ ಹೇಗೆ ಗೊತ್ತಾಗಲಿದೆ. ಏನೂ ಆಗುವುದಿಲ್ಲ, ನಾನು ಯಾವುದಕ್ಕೂ ಹೆದರುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಹಿನ್ನೆಲೆ: ಪೀಠದ ಸ್ಥಾಪನೆ ಮತ್ತು ವಚನಾನಂದ ಸ್ವಾಮೀಜಿಯ ಪಟ್ಟಾಭಿಷೇಕ
ಪಂಚಮಸಾಲಿ ಪೀಠವು ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಗುರುಪೀಠಗಳಲ್ಲಿ ಒಂದು. ಹರಿಹರದಲ್ಲಿರುವ ಈ ಪೀಠವು ಸಮುದಾಯವನ್ನು ಒಗ್ಗೂಡಿಸುವ ಮತ್ತು ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಜವಾಬ್ದಾರಿ ಹೊಂದಿದೆ.
ವಚನಾನಂದ ಸ್ವಾಮೀಜಿ(ಶ್ವಾಸ ಯೋಗ ಪೀಠದ ಹಿನ್ನೆಲೆಯಿಂದ ಬಂದವರು) ಅವರನ್ನು 2018ರ ಏಪ್ರಿಲ್ 20ರಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು/ಪೀಠಾಧಿಪತಿಯಾಗಿ ನೇಮಿಸಲಾಯಿತು. ಪಟ್ಟಾಭಿಷೇಕದ ವೇಳೆ ಸ್ನಾನಾಭಿಷೇಕ, ಪ್ರಮಾಣ ವಚನ ಮತ್ತು ಧಾರ್ಮಿಕ ವಿಧಿಗಳು ನಡೆದವು. ಟ್ರಸ್ಟ್ ನಿರ್ದೇಶಕರು ಅವರನ್ನು ಆಹ್ವಾನಿಸಿ ಪೀಠಕ್ಕೆ ಏರಿಸಿದ್ದರು. ಆಗ ಶ್ವಾಸ ಪೀಠವನ್ನು ತ್ಯಜಿಸುವ ಬಗ್ಗೆ ಚರ್ಚೆಯಾಗಿತ್ತೆಂದು ಟ್ರಸ್ಟ್ ಪಕ್ಷ ಹೇಳುತ್ತದೆ. ಆದರೆ ಸ್ವಾಮೀಜಿ ಪಕ್ಷ ಇದನ್ನು ನಿರಾಕರಿಸುತ್ತಿದೆ.
ವಚನಾನಂದ ಸ್ವಾಮೀಜಿ ನೇಮಕಾತಿಯ ಉದ್ದೇಶವು ಪಂಚಮಸಾಲಿ ಸಮುದಾಯವನ್ನು ಸಂಘಟಿಸುವುದು ಮತ್ತು ಧಾರ್ಮಿಕ-ಸಾಮಾಜಿಕ ಕಾರ್ಯಗಳನ್ನು ವಿಸ್ತರಿಸುವುದಾಗಿತ್ತು. ಮೊದಲ ಕೆಲವು ವರ್ಷಗಳು ಸಾಪೇಕ್ಷವಾಗಿ ಶಾಂತವಾಗಿದ್ದರೂ, ಕ್ರಮೇಣ ಆಡಳಿತ, ದೇಣಿಗೆಗಳ ನಿರ್ವಹಣೆ ಮತ್ತು ಸ್ವಾಮೀಜಿಯ ವರ್ತನೆ/ಆಸಕ್ತಿಯ ಬಗ್ಗೆ ಅಸಮಾಧಾನಗಳು ಉದ್ಭವವಾದವು ಎಂಬುದು ಟ್ರಸ್ಟ್ ಪಕ್ಷದ ಆರೋಪವಾಗಿದೆ.
ವಚನಾನಂದ ಸ್ವಾಮೀಜಿಗೆ ಹರಿಹರ ಮಠದ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಕಡಿಮೆಯಾಗಿದ್ದು, ಭಕ್ತರು ಸ್ವಾಮೀಜಿಯನ್ನು ಭೇಟಿಯಾಗಲೂ ಕಷ್ಟವಾಗುತ್ತಿತ್ತು. ಅವರಿಗೆ ಶ್ವಾಸ ಪೀಠ ಮತ್ತು ಪಂಚಮಸಾಲಿ ಪೀಠ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ 2018ರಿಂದಲೇ ಒತ್ತಾಯಿಸಲಾಗಿತ್ತು. ಆದರೂ ಅವರು ನಿರ್ಧಾರ ತೆಗೆದುಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 24ರವರೆಗೆ ಗಡುವು ನೀಡಲಾಗಿತ್ತು. ಆದರೆ ಅವರು ಯಾವುದೇ ಸಭೆಗೆ ಹಾಜರಾಗಲಿಲ್ಲ ಅಥವಾ ಮಾಹಿತಿಯನ್ನೂ ನೀಡಲಿಲ್ಲ. ಅಲ್ಲದೆ, ಹರಜಾತ್ರೆ ವೇಳೆ ದೇಣಿಗೆಗಳನ್ನು ವೈಯಕ್ತಿಕ ಖಾತೆಗಳಿಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿರುವುದಾಗಿಯೂ ದೂರಿದ್ದಾರೆ.
ಪ್ರಧಾನ ಧರ್ಮದರ್ಶಿ ಬಿ ಸಿ ಉಮಾಪತಿ ಅವರು ದೂರು ದಾಖಲಿಸಿ, ಸ್ವಾಮೀಜಿ ವಿರುದ್ಧ ಹಣದ ಅಪಹರಣ ಆರೋಪ ಮಾಡಿದರು. ಅಲ್ಲದೆ ಟ್ರಸ್ಟ್ ʼಬೈಲಾದ ಪ್ರಕಾರವೇ ಕ್ರಮ ತೆಗೆದುಕೊಳ್ಳಲಾಗಿದೆʼ ಎಂದು ಸ್ಪಷ್ಟಪಡಿಸಿದೆ.
ವಿವಾದದ ಆರಂಭ: ಭಕ್ತರಿಂದ ‘ಲೆಕ್ಕ ಕೊಡಿ’ ಅಭಿಯಾನ
ಹರಿಹರದ ಪಂಚಮಸಾಲಿ ಪೀಠದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ನೀಡಿದ ಅನುದಾನದಲ್ಲಿ 3 ಕೋಟಿಗೂ ಅಧಿಕ ಅವ್ಯವಹಾರ ನಡೆದಿದ್ದು, ಈ ಕುರಿತು ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಚನಾನಂದ ಸ್ವಾಮೀಜಿ ಲೆಕ್ಕಪತ್ರ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಕ್ಕಾಗಿಯೇ ಅವರನ್ನು ಪೀಠದಿಂದ ತೆಗೆಯಲು ಟ್ರಸ್ಟ್ ಪ್ರಯತ್ನಿಸುತ್ತಿದೆ ಎಂದು ಭಕ್ತರು ಆರೋಪಿಸುತ್ತಿದ್ದರು.
ಮಾರ್ಚ್ ಸುಮಾರಿಗೆ ʼಲೆಕ್ಕ ಕೊಡಿʼ ಅಭಿಯಾನ ತೀವ್ರಗೊಂಡಿತು. ಮಠದ ಮುಂದೆ ಭಕ್ತರ ಗುಂಪುಗಳು ಒಟ್ಟುಗೂಡಿ ಪ್ರತಿಭಟನೆ ನಡೆಸಿದವು. ಹಾಗಾಗಿ ಇದಕ್ಕೆ ತಹಶೀಲ್ದಾರ್ ನಿಷೇಧಾಜ್ಞೆ ಹೇರಬೇಕಾಯಿತು; ಪೊಲೀಸ್ ಮತ್ತು ಭಕ್ತರ ನಡುವೆ ಘರ್ಷಣೆಯೂ ನಡೆಯಿತು.
ಉಚ್ಛಾಟನೆಯ ನಿರ್ಧಾರ: ಟ್ರಸ್ಟ್ನ ಮುಖ್ಯ ತಿರುವು
ಏಪ್ರಿಲ್ 13ರಂದು ಈ ವಿವಾದವೂ ತಾರಕಕ್ಕೇರಿದ್ದು, ಟ್ರಸ್ಟ್ನ ಧರ್ಮದರ್ಶಿ/ಟ್ರಸ್ಟಿ ಸಭೆಯಲ್ಲಿ (15 ಟ್ರಸ್ಟಿಗಳ ಪೈಕಿ 13 ಮಂದಿ ಭಾಗವಹಿಸಿದ್ದರು) ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ಉಚ್ಚಾಟನೆ ಮಾಡಲು ಬಹುಮತದ ನಿರ್ಧಾರ ಕೈಗೊಳ್ಳಲಾಯಿತು.
ಈ ಹಿನ್ನೆಲೆಯಲ್ಲಿ ವಚನಾನಂದ ಸ್ವಾಮೀಜಿ, “ಇದು ವ್ಯವಸ್ಥಿತ ಷಡ್ಯಂತ್ರ. 12 ಜನ ಟ್ರಸ್ಟಿಗಳ ನಿರ್ಧಾರ ಮುಖ್ಯವಲ್ಲ, ಅಖಂಡ ಸಮಾಜವೇ ಸುಪ್ರೀಂ” ಎಂದ ಅವರು, ಲಿಂಗಾಯತ/ಪಂಚಮಸಾಲಿ ನಾಯಕರ ಬೆಳವಣಿಗೆಯನ್ನು ತಡೆಯುವ ಪ್ರಯತ್ನ. ಹಾಗಾಗಿ ನಾನು ಪೀಠ ಬಿಡುವುದಿಲ್ಲ, ಕಾನೂನು ಹೋರಾಟಕ್ಕೂ ಸಿದ್ಧವೆಂದು ಹೇಳಿ ಮಠದಲ್ಲೇ ಉಳಿದರು.
ಬಳಿಕ ಭಕ್ತರು ವಚನಾನಂದ ಸ್ವಾಮೀಜಿಯ ಉಚ್ಚಾಟನೆಯನ್ನು ತೀವ್ರವಾಗಿ ವಿರೋಧಿಸಿದರು. ಮಠದ ಮುಂದೆ ಗಲಾಟೆ, ಚಪ್ಪಲಿ ತೋರಿಸುವಂತಹ ಪ್ರತಿಭಟನೆಗಳು ನಡೆದವು. ಮಾಜಿ ಶಾಸಕ ಎಚ್ ಎಸ್ ಶಿವಶಂಕರ್ ಅವರು “ವಚನಾನಂದ ಸ್ವಾಮೀಜಿ ಮುಟ್ಟಿದವರು ಭಸ್ಮವಾಗುತ್ತಾರೆ” ಎಂದೂ ಹೇಳಿದರು. ಜತೆಗೆ ಲೆಕ್ಕಪತ್ರ ಬಹಿರಂಗಪಡಿಸಬೇಕೆಂಬ ಒತ್ತಾಯವನ್ನು ಮುಂದುವರೆಸಿದರು.
ಏಪ್ರಿಲ್ 13ರ ನಂತರ ತೀವ್ರಗೊಂಡ ಘಟನೆಗಳು
ಏಪ್ರಿಲ್ 13ರ ನಂತರ ಏಪ್ರಿಲ್ 23ರ ಒಳಗೆ ಮಠ ಖಾಲಿ ಮಾಡುವಂತೆ ಟ್ರಸ್ಟ್ ಸ್ವಾಮೀಜಿಗೆ ಎಚ್ಚರಿಕೆ ನೀಡಿತ್ತು. ಬಳಿಕ ಟ್ರಸ್ಟಿಗಳು ಮತ್ತು ಉಚ್ಚಾಟಿತ ವಚನಾನಂದ ಶ್ರೀಗಳು ಪರಸ್ಪರರ ವಿರುದ್ಧ ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ಹಾಗೂ ಹರಿಹರದ ಪ್ರಧಾನ ಸಿವಿಲ್ ನ್ಯಾಯಾಲಯಗಳಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ. ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಕೇವಿಯಟ್ಗಳು ದಾಖಲಾಗಿವೆ. ಹಣದ ಅಪಹರಣ, ವಿಶ್ವಾಸದ ದ್ರೋಹ ಆರೋಪಗಳು ಕ್ರಿಮಿನಲ್ ದೂರಿನ ರೂಪ ತಳೆದಿವೆ.
ಟ್ರಸ್ಟ್ ಪರವಾಗಿ ಸಲ್ಲಿಸಿರುವ ಕೇವಿಯಟ್ನಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಬಿ ಸಿ ಉಮಾಪತಿ ಮತ್ತು ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಕೆ ಎಂ ಪಕ್ಷಗಾರರಾಗಿದ್ದಾರೆ.
“ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸದಸ್ಯರಾದ ಚಂದ್ರಶೇಖರ್ ಪೂಜಾರ್ ಮತ್ತು ಜ್ಯೋತಿ ಪ್ರಕಾಶ್ ಸೇರಿದಂತೆ ಮೂವರು ಪ್ರಮುಖ ವ್ಯಕ್ತಿಗಳನ್ನು ಎಪ್ರಿಲ್ 13ರಿಂದ ಜಾರಿಗೆ ಬರುವಂತೆ ಉಚ್ಚಾಟನೆ ಮಾಡಲಾಗಿದೆ” ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ ಪಾಟೀಲ್ ಭಾನುವಾರ ತಿಳಿಸಿದ್ದಾರೆ.
ಸಂಘರ್ಷದ ಬಳಿಕ ಟ್ರಸ್ಟ್ ಲೆಕ್ಕಗಳನ್ನು ಬಹಿರಂಗಪಡಿಸುವುದಾಗಿ ಘೋಷಿಸಿದ್ದು, ಏಪ್ರಿಲ್ 27ರ ಇಂದು ಲೆಕ್ಕಪತ್ರ ಮಂಡನೆ ಸಭೆ ಆಯೋಜಿಸಿಸಲಾಗಿತ್ತು. ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಭಕ್ತರ ವಿರೋಧದಿಂದ ಗೊಂದಲ ಉಂಟಾಗಿದೆ. ಇದರಿಂದಾಗಿ ಸಭೆ ಗೊಂದಲದಲ್ಲಿಯೇ ಕೊನೆಗೊಂಡಿದೆ.
ಇದನ್ನೂ ಓದಿದ್ದೀರಾ? ದಾವಣಗೆರೆ | ಪಂಚಮಸಾಲಿ ಪೀಠದ ಸಂಘರ್ಷ: ಸಂಘದಿಂದ ಮೂವರು ಟ್ರಸ್ಟಿಗಳ ಉಚ್ಛಾಟನೆ
ಟ್ರಸ್ಟ್ ಲೆಕ್ಕಗಳನ್ನು ನೀಡುವುದಾಗಿ ಹೇಳುತ್ತಿದ್ದರೂ, ಸ್ವಾಮೀಜಿ ಮಠವನ್ನು ಬಿಡುವುದಿಲ್ಲ ಎಂಬ ನಿಲುವು ಹಿಡಿದಿದ್ದಾರೆ. ಕಾನೂನು ಹೋರಾಟ ಮುಂದುವರೆದಿದೆ. ಪಂಚಮಸಾಲಿ ರಾಜ್ಯ ಸಂಘವೂ ಇದರಲ್ಲಿ ತೊಡಗಿಸಿಕೊಂಡಿದೆ. ಟ್ರಸ್ಟ್ ʼನಾಳೆ ಲೆಕ್ಕ ಕೊಡುತ್ತೇವೆʼ ಎಂದು ಹೇಳಿದ್ದರೂ, ಭಕ್ತರ ಒತ್ತಾಯ ಮತ್ತು ವಿರೋಧದಿಂದ ಸ್ಥಿತಿ ಉದ್ವಿಗ್ನವಾಗಿದೆ. ಸ್ವಾಮೀಜಿ ಮಠ ಖಾಲಿ ಮಾಡುವಂತೆ ಟ್ರಸ್ಟ್ ತಾಕೀತು ಮುಂದುವರಿಸಿದೆ.
ಪಂಚಮಸಾಲಿ ಪೀಠ ವಿವಾದವು ಧಾರ್ಮಿಕ ಪೀಠಗಳ ಆಡಳಿತದಲ್ಲಿ ಪಾರದರ್ಶಕತೆ, ಟ್ರಸ್ಟ್-ಸ್ವಾಮೀಜಿ ಸಂಬಂಧ ಮತ್ತು ಸಮುದಾಯದ ಒಗ್ಗಟ್ಟಿನ ಪ್ರಶ್ನೆಗಳನ್ನು ಮುಂದಿಟ್ಟಿದೆ. ಟ್ರಸ್ಟ್ ಪಕ್ಷ ಮತ್ತು ಸ್ವಾಮೀಜಿ ಪಕ್ಷ ಎರಡೂ ತಮ್ಮ ನಿಲುವುಗಳನ್ನು ಬಲವಾಗಿ ರಕ್ಷಿಸುತ್ತಿವೆ. ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಮಾತ್ರ ಇದು ಪರಿಹಾರವಾಗಬಹುದು ಎಂಬುದು ಅನೇಕರ ಅಭಿಪ್ರಾಯವಾಗಿದೆ.





