ರೈತರ ಭೂಮಿ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅರಣ್ಯ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬೆಂಗಳೂರಿನ ಕಚೇರಿಯಲ್ಲಿ ಅವರನ್ನು ಶನಿವಾರ ಭೇಟಿ ಮಾಡಿದ ಜಿಲ್ಲೆಯ ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಆರ್. ಶ್ರೀನಿವಾಸನ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.
ಸುಮಾರು 19 ಮತ್ತು 20ನೇ ಶತಮಾನದಲ್ಲಿ ಮೈಸೂರು ಮಹಾರಾಜರು ರೈತರಿಗೆ ನೀಡಿದ್ದ ಭೂಮಿಗೆ ಸಂಬಂಧಿಸಿದ ಪಹಣಿ, ಮ್ಯುಟೇಷನ್, ಸ್ಕೆಚ್, ನಕ್ಷೆ, ಮಂಜೂರಾತಿ ಪತ್ರ, ಕ್ರಯಪತ್ರ, ಆರ್‌ಆರ್ ಟಿಪ್ಪಣಿ ಸೇರಿದಂತೆ ವಿವಿಧ ದಾಖಲೆಗಳು ತಮ್ಮಲ್ಲಿವೆ. ಅವುಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಕೆಲವು ಅರಣ್ಯ ಅಧಿಕಾರಿಗಳು ನಿಯಮಬಾಹಿರವಾಗಿ ಬಡ ರೈತರ ಒಂದರಿಂದ ಮೂರು ಎಕರೆ ಜಮೀನಿನಲ್ಲಿದ್ದ ಬೆಳೆ, ಮರ-ಗಿಡ ಹಾಗೂ ಇತರ ಆಸ್ತಿಪಾಸ್ತಿಯನ್ನು ನಾಶಪಡಿಸಿದ್ದಾರೆ ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಲಾಯಿತು.
ಮನವಿ ಆಲಿಸಿದ ಸಚಿವರು, ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ..?ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ
ಈ ಸಂದರ್ಭದಲ್ಲಿ ಹರಟಿ ಪ್ರಕಾಶ್, ವೆಂಕಟರಣಪ್ಪ, ಬಟ್ರಳ್ಳಿ ಮಂಜುನಾಥ್, ಅರವಿಂದ್ ಕಿಣಿ, ಶ್ರೀನಿವಾಸ್, ಬಿ.ಜಿ. ಆನಂದ್, ಚಲಪತಿ, ವೆಂಕಟ್ ಸ್ವಾಮಿ, ವೆಂಕಟೇಶ್, ನಾರಾಯಣಪ್ಪ, ಶಂಕರಪ್ಪ, ಡಾ. ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.




