ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅವೈಜ್ಞಾನಿಕವಾಗಿದ್ದು, ಮತದಾರರ ಹೆಸರನ್ನು ಅಕ್ರಮವಾಗಿ ಅಳಿಸಿ ಹಾಕಲಾಗುತ್ತಿದೆ. ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇದನ್ನು ಖಂಡಿಸಿ ಅ.5ರ ಸೋಮವಾರ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಐಆರ್ ವಿರುದ್ಧ ರಾಹುಲ್ ಗಾಂಧಿ ಒಂದು ವರ್ಷದಿಂದ ದೇಶದಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಎಸ್‌ಐಆರ್ ನೆಪದಲ್ಲಿ ಜನಸಾಮಾನ್ಯರ ಮತಗಳನ್ನು ಕಸಿಯುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಮತಗಳನ್ನು ಮತಪಟ್ಟಿಯಿಂದ ಕಸಿಯುವ ತಂತ್ರವನ್ನು ರೂಪಿಸಿದೆ. ಇದಕ್ಕಾಗಿಯೇ ಜ್ಞಾನೇಶ್ ಕುಮಾರ್ ಅವರನ್ನು ನೇಮಿಸಿಕೊಂಡಿದೆ. ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿರುವ ಅವರ ಆಯ್ಕೆ ಆಯ್ಕೆ ಪ‍್ರಕ್ರಿಯೆಯೇ ದೋಷಪೂರಿತವಾಗಿದೆ ಎಂದು ದೂರಿದರು.
ಬಿಹಾರ, ಪಶ್ಚಿಮ ಬಂಗಾಳದಲ್ಲಿ ಅರ್ಹ ಮತದಾರರ ಹೆಸರನ್ನು ಅಳಿಸಿ ಹಾಕುವ ಮೂಲಕ ಮತದಾನದ ಹಕ್ಕು ಕಸಿದಿದ್ದಾರೆ. ಈ ವಿಚಾರದಲ್ಲಿ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತದಾರರ ಹೆಸರು ಅಳಿಸಿ ಹಾಕುವ ಕ್ರಮ ಸಮಂಜಸವಾಗಿಲ್ಲ ಎಂಬುದಾಗಿ ಇವರು ಸಲಹೆ ನೀಡಿದ್ದಾರೆ. ಆದರೆ, ಬಿಜೆಪಿ ಏಜೆಂಟ್ ಅಗಿರುವ ಜ್ಞಾನೇಶ್ ಕುಮಾರ್ ಆ ಸಲಹೆಗಳನ್ನು ನಿರ್ಲಕ್ಷಿಸಿದ್ದು, ಈ ಅಧಿಕಾರಿಗಳನ್ನೇ ಎಸ್‌ಐಆರ್‌ನಿಂದ ಹೊರಗಿಟ್ಟಿದ್ದಾರೆ. ಈಗ ಕರ್ನಾಟಕದಲ್ಲೂ ಅದೇ ಕೃತ್ಯ ನಡೆಯುತ್ತಿದೆ ಎಂದು ದೂರಿದರು.
ನಮ್ಮ ರಾಜ್ಯದಲ್ಲಿ ಫಾರಂ 7 ಅನ್ನು ಅವರೇ ಸೃಷ್ಟಿಸಿಕೊಂಡು, ಜನರೇ ಕೊಟ್ಟಂತೆ ಬಿಂಬಿಸಿ ಬೇಕಾದವರ ಮತಗಳನ್ನು ಅಳಿಸಿ ಹಾಕುತ್ತಿದ್ದಾರೆ. ಯಾವುದೇ ದಾಖಲಾತಿ ಇಲ್ಲದೆ ನೀಡಿದರೂ ಅದನ್ನು ಸ್ವೀಕರಿಸುವಂತೆ ಬಿಎಲ್‌ಓಗಳನ್ನು ಅಮಿಷಕ್ಕೆ ಒಳಪಡಿಸಿದ್ದಾರೆ. ಹೀಗಾಗಿ, ಮೊದಲು ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತ ಸ್ಥಾನದಿಂದ ಕಿತ್ತೊಗೆಯಬೇಕು. ಈ ಹಿನ್ನೆಲೆಯಲ್ಲಿ ಶನಿವಾರ ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸಿ ಸಮಿತಿ ರಚಿಸಲಾಗುವುದು. ಸೋಮವಾರ ಬೆಳಿಗ್ಗೆ ಕಾಂಗ್ರೆಸ್ ಕಚೇರಿಯಿಂದ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗಾಂಧಿವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು.
ಎಸ್‌ಟಿ ಘಟಕದ ಅಧ್ಯಕ್ಷ ಅಂಬರೀಷ್ ಮಾತನಾಡಿ, ರಾಹುಲ್ ಗಾಂಧಿ ಎಸ್‌ಐಆರ್ ಕುರಿತು ಮಾತ್ರವಲ್ಲದೇ; ಈ ಹಿಂದೆ ಸಿಎಆರ್ ಬಗ್ಗೆಯು ವಿರೋಧ ವ್ಯಕ್ತ ಪಡೆಸಿದ್ದರು. ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮತದಾನದ ಹಕ್ಕು ಸಿಗಬೇಕು ಎಂಬುದು ಕಾಂಗ್ರೆಸ್‌ನ ಧ್ಯೇಯೋದ್ದೇಶ. ಆದರೆ, ಬಿಜೆಪಿ ತದ್ವಿರುದ್ದವಾಗಿ ಆಡಳಿತ ನಡೆಸುತ್ತಿರುವುದು ದಬ್ಬಾಳಿಕೆಯ ಪರಮಾವಧಿಯಾಗಿದೆ ಎಂದು ಕಿಡಿಕಾರಿದರು.
ಮುಸ್ಲಿಂ ಸಮುದಾಯದ ಕೋಟ್ಯಂತರ ನೈಜ ಮತದಾರರನ್ನು ತೆಗೆದು ಹಾಕಿರುವ ಕ್ರಮವು ಜಾತ್ಯತೀತ ದೇಶಕ್ಕೆ ಮಾಡಿದ ಅಪಮಾನವಾಗಿದೆ. ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡೆಸಿದರು.
ಇದನ್ನು ಓದಿದ್ದೀರಾ..?ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್ ಅಫ್ಸರ್, ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ವೈ.ಶಿವಕುಮಾರ್, ಸಂಗೀತಾ, ಕೆ.ಜಯದೇವ್, ಬೆಳಗಾನಹಳ್ಳಿ ಮುನಿವೆಂಕಟಪ್ಪ ಇದ್ದರು.




