ಪಂಪ ಭಾರತ ಇಡೀ ಕಾವ್ಯವನ್ನು ಸಂಕ್ಷಿಪ್ತವಾಗಿ ಪರಿಚಯಿಸಿ, ಈ ಕಾವ್ಯದ ಬಹು ಮೌಲಿಕ ಸಂಗತಿಗಳನ್ನು ಇಂದಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂಬಂಧಗಳೊಡನೆ ಮುಖಾಮುಖಿಗೊಳಿಸಿ ಪಂಪ ಮಹಾಕವಿಯ ಯೋಚನೆ ಮತ್ತು ಯೋಜನೆಯನ್ನು ಧಾರವಾಡದ ನಿವೃತ್ತ ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಸಭೀಕರ ಎದುರು ತೆರೆದಿಟ್ಟರು.
ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮತ್ತು ಅನುಭಾವ ಮಂಟಪವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿಕವಿ ಪಂಪ ವಿರಚಿತ, ಪಂಪ ಭಾರತದ ಉತ್ಕೃಷ್ಟ ಭಾಗ ಮತ್ತು ಇಡೀ ಕಾವ್ಯಕ್ಕೆ ಮೆರಗನ್ನು ತಂದುಕೊಟ್ಟ ಭಾಗ ‘ಕರ್ಣ ರಸಾಯನಮಲ್ತೆ ಭಾರತಮ್’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
“ಕರ್ಣ ರಸಾಯನಮಲ್ತೆ ಭಾರತಮ್ ಒಳಗಿನ ರಸವತ್ತಾದ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಹೃದಯಂಗಮವಾಗಿ ತೆರೆದಿಟ್ಟರು. ಅಲ್ಲದೆ ಕಾವ್ಯ ಹುಟ್ಟುವ ಬಗೆಯ ಮೇಲೆ ಬೆಳಕು ಚೆಲ್ಲುತ್ತಾ ‘ಕಾವ್ಯ ನಿತ್ಯಂ ಪೊಸತು’ ಎಂಬುದನ್ನು ಪಂಪಭಾರತದ ಪಾತ್ರ, ಸನ್ನಿವೇಶ, ಭಾಷೆ, ಶೈಲಿ, ತಂತ್ರಗಳ್ನು ನಿರೂಪಿಸಿದರು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಿಂತಕರು, ವಿದ್ವಾಂಸರು ಮತ್ತು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಧಾರವಾಡದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಅವರು ಮಾತನಾಡುತ್ತಾ, ಇಂದು ಹಳೆಗನ್ನಡ ಕಾವ್ಯಗಳ ಓದು, ಆಸಕ್ತಿ ವಿದ್ಯಾರ್ಥಿಗಳು, ಯುವಕಲ್ಲಿ ಕುಗ್ಗುತ್ತಿದೆ. ಅದರ ರಸ ಆಸ್ವಾದವು ಪ್ರತಿ ಕನ್ನಡಿಗನಿಗೂ ದಕ್ಕಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾವರ್ಧಕ ಸಂಘ, ಪ್ರತಿಷ್ಠಾನಗಳು, ಬೇರೆ ಬೇರೆ ಸಂಘಗಳು ಕಾರ್ಯಪ್ರವೃತ್ತವಾಗಬೇಕಿದೆ ಎಂದರು. ಅಲ್ಲದೆ ಪಂಪ ಭಾರತವು ಎಲ್ಲಾ ಕಾಲಕ್ಕೂ ಹೊಂದಿಕೊಳ್ಳುವ ಒಂದು ಅಮೂಲ್ಯ ಕೃತಿ. ಅದರಲ್ಲೂ ಕರ್ಣನ ಪಾತ್ರದ ರಚನೆಯ ಹಿಂದೆ ಪಂಪನಿಗಿರುವ ಮಾನವೀಯತೆ ಮತ್ತು ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು ಮತ್ತು ಈ ದೃಷ್ಟಿಯಿಂದ ಪಂಪ ವ್ಯಾಸನಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾನೆ” ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಸಾಹಿತ್ಯ ಮತ್ತು ಅನುಭಾವ ಮಂಟಪದ ಸಂಚಾಲಕ ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಈ ಮಂಟಪದ ಹಿಂದಿನ ಕಾರ್ಯಚಟುವಟಿಕೆಗಳ ಕುರಿತು ಗಮನ ಹರಿಸುತ್ತಾ, ಪ್ರಸ್ತುತ ವರ್ಷ ನಿರ್ವಹಿಸಬೇಕಾದ ಕಾರ್ಯಕ್ರಮಗಳ ಯೋಜನೆಯನ್ನು ತಿಳಿಸಿದರು. ಡಾ. ವೀರಪ್ಪ ಪೂಜಾರ ನಿರೂಪಿಸಿದರು. ಸರಸ್ವತಿ ಭೋಸಲೆ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ. ವೀರಣ್ಣ ಒಡ್ಡೀನ. ಸಲಹಾ ಸಮಿತಿಯ ಸದಸ್ಯ ಡಾ. ಶಶಿಧರ ನರೇಂದ್ರ, ಡಾ. ಬಿ.ಎಂ. ಶರಭೆಂದ್ರಸ್ವಾಮಿ, ಸರಸ್ವತಿ ಭೋಸಲೆ, ಶ್ರೀಶೈಲ ರಾಚಣ್ಣವರ, ಭವಾನಿ ಹಿರೇಮಠ, ಸುನಿತಾ ಮೂರಶಿಳ್ಳಿ, ಈಶ್ವರಗೌಡ ದೇವಲಾಪೂರ. ವೆಂಕಟೇಶ ಮಾಚಕನೂರ, ಡಾ. ಶಾಂತಿನಾಥ ದಿಬ್ಬದ. ಮಾರ್ಕಂಡೇಯ ದೊಡಮನಿ. ಎಂ. ಸುದರ್ಶನರಾಜ ಸೇರಿದಂತೆ ಸಾಹಿತ್ಯಾಸಕ್ತರು, ಹಳೆಗಳನ್ನಡ, ವಿದ್ವಾಂಸರು, ಚಿಂತಕರು ಉಪಸ್ಥಿತರಿದ್ದರು.




