ಧಾರವಾಡದ ಅಳ್ನಾವರ ತಾಲೂಕಿನ ಕುಂಬಾರಗೊಪ್ಪ ಗ್ರಾಮದ ದಲಿತ ವ್ಯಕ್ತಿ ನಿಂಗಪ್ಪ ಮಾದರ ಹತ್ಯೆ ಪ್ರಕರಣವನ್ನು ಪೊಲೀಸರು ಸಹಜ ಸಾವು ಎಂದು ಮುಚ್ಚಿಹಾಕುತ್ತಿದ್ದಾರೆ ಎಂಬ ಆರೋಪದ ನಡುವೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟನೆಗಳು ಹಾಗೂ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಳ್ನಾವರ ತಾಲೂಕಿನ ಕುಂಬಾರಗೊಪ್ಪದಲ್ಲಿ ನಡೆದ ಘಟನೆಯಲ್ಲಿ ಸವರ್ಣೀಯ ವ್ಯಕ್ತಿ ನಿಂಗಪ್ಪ ಮಾದರ ಮೇಲೆ ಹಲ್ಲೆ ನಡೆಸಿ, ಕರೆಂಟ್ ಶಾಕ್ ನೀಡಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅಳ್ನಾವರ ಪೊಲೀಸರು ಇದನ್ನು ಸಹಜ ಸಾವು ಎಂದು ದಾಖಲಿಸಿಕೊಂಡಿದ್ದಾರೆ ಎಂಬ ಆಕ್ಷೇಪವಿದೆ.
ಈ ಹಿನ್ನೆಲೆಯಲ್ಲಿ ದಲಿತ ಸಂಘಟನೆ ಮುಖಂಡರು ಮತ್ತು ಕುಂಬಾರಗೊಪ್ಪ ಗ್ರಾಮಸ್ಥರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಬಾರದ ಕಾರಣ ಪ್ರತಿಭಟನಾಕಾರರು ಕಚೇರಿ ಒಳಾವರಣಕ್ಕೆ ನುಗ್ಗಲು ಮುಂದಾದರು. ಬ್ಯಾರಿಕೇಟ್‌ಗಳನ್ನು ತಳ್ಳಿ ಮುಖ್ಯ ಗೇಟ್ ಮುರಿದು ಡಿಸಿ ಕಚೇರಿಯೊಳಗೆ ನುಗ್ಗಿದರು. ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದಾಗ ಪೊಲೀಸ್ ಸಿಬ್ಬಂದಿ ತಡೆದು ಕೆಲವು ಸಮಯ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಹೊರಗೆ ಕಳುಹಿಸಿದರು.
ದಲಿತ ಸಮುದಾಯ ಹಾಗೂ ಕುಂಬಾರಗೊಪ್ಪ ಗ್ರಾಮಸ್ಥರು ಪೊಲೀಸರ ನಡವಳಿಕೆಯ ವಿರುದ್ಧ ಕಿಡಿಕಾರಿದ್ದಾರೆ. ನಿಂಗಪ್ಪ ಮಾದರ ಹತ್ಯೆ ಪ್ರಕರಣವನ್ನು ಕೊಲೆಯಾಗಿ ದಾಖಲಿಸಿ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.




