ಸ್ವಚ್ಛ ಭಾರತ ಅಭಿಯಾನ ಮತ್ತು ಮಹಿಳಾ ಸಬಲೀಕರಣದ ಮಾತುಗಳು ಕಾರ್ಯರೂಪಕ್ಕೆ ಬರಬೇಕೆಂದರೆ ಕದಾಂಪೂರ ಗ್ರಾಮ ಪಂಚಾಯತಿ, ರಾಮದುರ್ಗ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಆಡಳಿತ ತಕ್ಷಣವೇ ನೀರಿನ ಸಂಪರ್ಕ ಕಲ್ಪಿಸಿ ಶೌಚಾಲಯವನ್ನು ಬಳಕೆಗೆ ತರಬೇಕು. ಇಲ್ಲದಿದ್ದರೆ ಇಂತಹ ಯೋಜನೆಗಳು ಕೇವಲ ಕಾಗದದ ಮೇಲಿನ ಅಂಕಿ-ಅಂಶಗಳಾಗಿ ಉಳಿಯುತ್ತವೆ, ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರವಾಗುವುದಿಲ್ಲ.
ಮಹಿಳೆಯರ ಅನುಕೂಲಕ್ಕಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕದಾಂಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂದನೂರ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸಾರ್ವಜನಿಕ ಶೌಚಾಲಯಕ್ಕೆ ಈವರೆಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಮಹಿಳಾ ಶೌಚಾಲಯ ಬಳಸಲು ಸಾಧ್ಯವಾಗದೆ ಮಹಿಳೆಯರು ಇಂದಿಗೂ ಬಯಲಿನಲ್ಲೇ ಶೌಚಕ್ಕೆ ತೆರಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
“ಮಹಿಳೆಯರಿಗಾಗಿ ನಿರ್ಮಿಸಿರುವ ಶೌಚಾಲಯ ನೀರಿನ ಸಂಪರ್ಕವಿಲ್ಲದೆ ಬಳಕೆಯಾಗದೆ ಬಿದ್ದಿದೆ. ಇದರಿಂದ ಗ್ರಾಮದ ಮಹಿಳೆಯರು ಅನಿವಾರ್ಯವಾಗಿ ಬಯಲಿಗೆ ತೆರಳಬೇಕಾಗಿದೆ. ಅದೇ ಸ್ಥಳವನ್ನು ಪುರುಷರೂ ಬಳಸುತ್ತಿರುವುದರಿಂದ ಮಹಿಳೆಯರಿಗೆ ಮುಜುಗರ ಉಂಟಾಗುತ್ತಿದೆ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ಶೌಚಾಲಯದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ದಟ್ಟವಾಗಿರುವುದರಿಂದ ವಯೋವೃದ್ಧರು ಹಾಗೂ ಮಹಿಳೆಯರು ಅಲ್ಲಿಗೆ ತೆರಳಲು ಪರದಾಡುವಂತಾಗಿದೆ. ಮಹಿಳೆಯರ ಗೌರವ ಮತ್ತು ಸುರಕ್ಷತೆಯ ಪ್ರಶ್ನೆಯೂ ಉದ್ಭವಿಸಿದೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ʼಸಾರ್ವಜನಿಕ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಿ ಬಳಕೆಗೆ ಮುಕ್ತಗೊಳಿಸಬೇಕುʼ ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಈ ದಿನ.ಕಾಮ್ ರಾಮದುರ್ಗ ತಾಲೂಕು ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮಾತನಾಡಿ, “ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು” ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿದಾಗ, “ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಎರಡು ದಿನಗಳೊಳಗೆ ನೀರಿನ ಸಂಪರ್ಕ ಕಲ್ಪಿಸಿ ಸಮಸ್ಯೆ ಸರಿಪಡಿಸಲಾಗುವುದು” ಎಂದು ತಿಳಿಸಿದರು.
ರಾಮದುರ್ಗ ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸಿದಾಗ, ಇದು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ವಿಷಯವಲ್ಲ. ಆದರೂ ಮಾನವೀಯತೆಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ” ಎಂದು ಪ್ರತಿಕ್ರಿಯಿಸಿದರು.
ಮಹಿಳೆಯರಿಗಾಗಿ ನಿರ್ಮಿಸಿದ ಶೌಚಾಲಯಕ್ಕೆ ಮೂರು ವರ್ಷಗಳಾದರೂ ನೀರಿನ ಸಂಪರ್ಕ ಕಲ್ಪಿಸದಿರುವುದು ಏಕೆ? ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಇಷ್ಟು ದಿನ ಗಮನ ಹರಿಸದಿರುವುದೇಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಮಹಿಳೆಯರ ಮೂಲಭೂತ ಸೌಲಭ್ಯವನ್ನು ಕೂಡಲೇ ಕಲ್ಪಿಸಿ, ಶೌಚಾಲಯವನ್ನು ಬಳಕೆಗೆ ಯೋಗ್ಯವಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿದ್ದೀರಾ? ತುಮಕೂರು | ಎಸ್ಐಆರ್ ಗೊಂದಲ: 1.38 ಲಕ್ಷ ಮಂದಿ ಮತದಾರರು ಹೊರಗುಳಿಯುವ ಆತಂಕ
ಮೂರು ವರ್ಷಗಳ ಹಿಂದೆ ಮಹಿಳೆಯರ ಅನುಕೂಲಕ್ಕಾಗಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಕ್ಕೆ ಇನ್ನೂ ನೀರಿನ ಸಂಪರ್ಕ ಕಲ್ಪಿಸದಿರುವುದು ಆಡಳಿತದ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಬೂದನೂರ ಗ್ರಾಮದ ಮಹಿಳೆಯರು ಇಂದಿಗೂ ಬಯಲಿನಲ್ಲಿ ಶೌಚಕ್ಕೆ ತೆರಳಬೇಕಾದ ಪರಿಸ್ಥಿತಿ ಅವರ ಗೌರವ, ಭದ್ರತೆ ಮತ್ತು ಆರೋಗ್ಯಕ್ಕೆ ಧಕ್ಕೆಯುಂಟುಮಾಡುತ್ತಿದೆ. ಸ್ವಚ್ಛ ಭಾರತ ಅಭಿಯಾನ ಮತ್ತು ಮಹಿಳಾ ಸಬಲೀಕರಣದ ಮಾತುಗಳು ಕಾರ್ಯರೂಪಕ್ಕೆ ಬರಬೇಕೆಂದರೆ ಕದಾಂಪೂರ ಗ್ರಾಮ ಪಂಚಾಯತಿ, ರಾಮದುರ್ಗ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಆಡಳಿತ ತಕ್ಷಣವೇ ನೀರಿನ ಸಂಪರ್ಕ ಕಲ್ಪಿಸಿ ಶೌಚಾಲಯವನ್ನು ಬಳಕೆಗೆ ತರಬೇಕು. ಇಲ್ಲದಿದ್ದರೆ ಇಂತಹ ಯೋಜನೆಗಳು ಕೇವಲ ಕಾಗದದ ಮೇಲಿನ ಅಂಕಿ-ಅಂಶಗಳಾಗಿ ಉಳಿಯುತ್ತವೆ, ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರವಾಗುವುದಿಲ್ಲ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



