ಕನಿಷ್ಠ ವೇತನ ಪರಿಷ್ಕರಣೆ ಕುರಿತು ಹೊರಡಿಸಿರುವ ಅಧಿಸೂಚನೆಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಗದಗ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಸಂಘದ ಜಿಲ್ಲಾಧ್ಯಕ್ಷರು ಹುಸೇನಸಾಬ ಕನಕವಾಡ ಮಾತನಾಡಿ, “ಕರ್ನಾಟಕ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೪.೫ ಲಕ್ಷ ಹೊರಗುತ್ತಿಗೆ ನೌಕರರ ಇರುವರು. ಇವರ ಜೀವನಮಟ್ಟ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಪ್ರಸ್ತುತ ಜೀವನ ವೆಚ್ಚವನ್ನು ಪರಿಗಣಿಸಿ ಕನಿಷ್ಠ ವೇತನವನ್ನು ಸಮರ್ಪಕವಾಗಿ ಪರಿಷ್ಕರಿಸುವುದು ಅತ್ಯಂತ ಅಗತ್ಯವಾಗಿದೆ” ಎಂದರು.
“ಈ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಕನಿಷ್ಟ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಆದೇಶ/ ಕರಡು ಅಧಿಸೂಚನೆ ಹೊರಡಿಸಲಾಗಿದೆ. ನೌಕರರ ವೇತನ ವರ್ಗೀಕರಣವೂ ಉಲ್ಲೇಖವಾಗಿದೆ. ಹೊರಗುತ್ತಿಗೆ ನೌಕರರ ಹಿತದೃಷ್ಟಿಯಿಂದ ಕರಡು/ಪ್ರಸ್ತಾವಿತ ಆದೇಶವನ್ನು ವಿಳಂಬ ಮಾಡದೆ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಪಾವತಿಸುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡುವುದು ಅತ್ಯವಶ್ಯವಾಗಿದೆ” ಎಂದು ಒತ್ತಾಯಿಸಿದರು.
“ಸರ್ಕಾರದ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೂ ಅನ್ವಯವಾಗುವಂತೆ ಸ್ಪಷ್ಟ ಆದೇಶ ಹೊರಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ” ಮನವಿ ಸಲ್ಲಿಸಿ ವಿನಂತಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಅಕ್ಕಮಹಾದೇವಿ ದಮ್ಮೂರ, ರಾಜ್ಯ ಸಮಿತಿ ಸದಸ್ಯರು ಕೃಷ್ಣಪ್ಪ ಪೂಜಾರ, ಗದಗ ಜಿಲ್ಲಾ ಉಪಾಧ್ಯಕ್ಷರು ಸಿದ್ದಪ್ಪ ವಾಲಿಕಾರ, ಪ್ರಧಾನ ಕಾರ್ಯಧರ್ಶಿರಾಮಣ್ಣ ದೊಡ್ಡಮನಿ, ಕಾರ್ಯದರ್ಶಿ ಮಲ್ಲಪ್ಪ ಭಾವಿಮನಿ, ಜಾವೇದ ನದಾಫ, ಪ್ರವೀಣ ಶಿಗ್ಲಿಯವರ, ಮಂಜುನಾಥ ಹರ್ತಿ, ಉಮೇಶ ನೂಲ್ವಿ ಸೇರಿದಂತೆ ವಿವಿಧ ಇಲಾಖೆಗಳ ಹೊರಗುತ್ತಿಗೆ, ಗುತ್ತಿಗೆ ನೌಕರರು ಉಪಸ್ಥಿತರಿದ್ದರು.




