“ಸರ್ಕಾರದಿಂದ ಜಾರಿಯಾಗಿರುವ ಪಂಚಗ್ಯಾರಂಟಿ ಯೋಜನೆಗಳ ಸೌಲಭ್ಯವು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿಯೇ ತಲುಪಬೇಕು. ಸೌಲಭ್ಯ ವಿತರಣೆಯಲ್ಲಿ ವಿನಾಕಾರಣ ವಿಳಂಬ ಮಾಡಬಾರದು” ಎಂದು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ಗದಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಪಂಚಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು ಈ ಯೋಜನೆಗಳ ಅನುಷ್ಟಾನವು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದೆ. ಯೋಜನೆಗಳ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿಯೇ ತಲುಪಿಸುವಂತಾಗಬೇಕು. ಪಂಚಗ್ಯಾರಂಟಿ ಯೋಜನೆಗಳ ಅನುಷ್ಟಾನ ಶೇಕಡ ನೂರರಷ್ಟು ಪ್ರಗತಿ ಸಾಧಿಸಬೇಕು” ಎಂದು ಹೇಳಿದರು.
“ಗ್ಯಾರಂಟಿ ಯೋಜನೆಯ ಅನುಷ್ಟಾನದಲ್ಲಿ ಪ್ರಾಮಾಣಿಕತೆ ಇರಬೇಕು. ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದ ಯಾವ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ಅತ್ಯಂತ ಕ್ರಿಯಾಶೀಲರಾಗಿ ಹಾಗೂ ಶಿಸ್ತಿನಿಂದ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು” ಎಂದು ಸೂಚಿಸಿದರು.
ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸದಸ್ಯರು ಕೃಷ್ಣಗೌಡ ಎಚ್ ಪಾಟೀಲ ಮಾತನಾಡಿ, “ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಆರ್ಥಿಕ ಸಬಲೀಕರಣಗೊಳಿಸಲು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಸೌಲಭ್ಯದಿಂದ ಯಾವ ಅರ್ಹ ಫಲಾನುಭವಿಯೂ ವಂಚಿತರಾಗದಂತೆ ನೋಡಿಕೊಳ್ಳಬೇಕು. ಗೃಹಲಕ್ಷ್ಮೀ ಯೋಜನೆಯ ಹಣ ದುರುಪಯೋಗವಾಗದಂತೆ ಕ್ರಮ ವಹಿಸಬೇಕು. ಮರಣ ಹೊಂದಿದವರ ಖಾತೆಗ ಗೃಹಲಕ್ಷ್ಮೀ ಹಣ ಜಮಾ ಆಗುತ್ತಿದ್ದರೆ ಅಂತಹ ಪ್ರಕರಣಗಳಾಗದಂತೆ ತಡೆಯಲು ಕ್ರಮ ವಹಿಸಬೇಕು” ಎಂದು ಸೂಚಿಸಿದರು.
“ಯುವನಿಧಿ ಯೋಜನೆಯ ಸೌಲಭ್ಯದಿಂದ ಯಾವೊಬ್ಬ ಅರ್ಹ ಫಲಾನುಭವಿ ವಂಚಿತರಾಗಬಾರದು. ಅನ್ನಭಾಗ್ಯ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕಳೆದ ಸಾಲಿನ ಸಭೆಯಲ್ಲಿನ ಯೋಜನೆಗಳ ಪ್ರಗತಿಯ ವಿವರಗಳು ಹಾಗೂ ಈಗಿನ ಸಭೆಯಲ್ಲಿನ ಪ್ರಗತಿ ವಿವರಗಳ ಪರಾಮರ್ಶೆ ನಡೆಸಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಅಧಿಕಾರಿಗಳು ಶ್ರಮ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ಕೃಷ್ಣಗೌಡ ಪಾಟೀಲ ತಿಳಿಸಿದರು.
ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ ಜೂನ್ 2026 ರವರೆಗೆ 3112 ಅಭ್ಯರ್ಥಿಗಳು ನೊಂದಣಿಯಾಗಿದ್ದು, 2819 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಹಣ ವರ್ಗಾವಣೆಯಾಗಿರುತ್ತದೆ. ಬಾಕಿ ಉಳಿದ 293 ಅಭ್ಯರ್ಥಿಗಳು ಯುವ ನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ” ಎಂದು ತಿಳಿಸಿದರು.
“ಶಕ್ತಿ ಯೋಜನೆಯಡಿ ಗದಗ ಘಟಕದಲ್ಲಿ ದಿ:11-6-2023 ರಿಂದ 3-8-2026 ರವರೆಗೆ ಮಹಿಳಾ ಪ್ರಯಾಣಿಕರಿಂದ 10625.33 ಲಕ್ಷ ರೂ. ಆದಾಯವಾಗಿರುತ್ತದೆ. ದಿ: 11-6-2023 ರಿಂದ 3-8-2026 ರವರೆಗೆ ಬೆಟಗೇರಿ ಘಟಕದಲ್ಲಿ ಮಹಿಳಾ ಪ್ರಯಾಣಿಕರಿಂದ 6297.67 ಲಕ್ಷ ರೂ. ಆದಾಯವಾಗಿದೆ.
ಗೃಹಲಕ್ಷ್ಮೀ ಯೋಜನೆಯಡಿ ಏಪ್ರಿಲ್ 2026 ರವರೆಗೆ ಗದಗ ತಾಲೂಕಿನಲ್ಲಿ 84037 ಅರ್ಜಿಗಳು ನೋಂದಣಿಯಾಗಿದ್ದು 75133 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿ ಮಾಡಲಾಗಿದೆ. ಮೇ- 2026 ರ ಮಾಹೆಯಲ್ಲಿನ ಗೃಹಲಕ್ಷ್ಮೀ ಹಣವು ಫಲಾನುಭವಿಗಳ ಖಾತೆಗೆ ಇನ್ನೂ ಜಮೆಯಾಗುತ್ತಿದೆ ಎಂದು ಸಭೆಗೆ ವಿವರಿಸಿದರು.
ಅನ್ನಭಾಗ್ಯ ಯೋಜನೆಯಡಿ ಗದಗ ಶಹರದ ಭಾಗದಲ್ಲಿ ಎನ್ ಎಸ್ ಎಫ್ ಎ ಅಕ್ಕಿ ಹಂಚಿಕೆ ( ಕೇಂದ್ರ ಸರ್ಕಾರ) ಜುಲೈ 2026 ಮಾಹೆಯ ಹಂಚಿಕೆಯಡಿ ( ಎಎವೈ + ಬಿಪಿಎಲ್ ) 32699 ಪಡಿತರ ಕಾರ್ಡುದಾರರಿಗೆ 2250.98 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಗದಗ ಗ್ರಾಮೀಣ ಭಾಗದಲ್ಲಿ ಜುಲೈ -2026 ರ ಮಾಹೆಯಲ್ಲಿ ಎನ್‌ಎಸ್‌ಎಫ್‌ಎ ಅಕ್ಕಿ ಹಂಚಿಕೆಯಡಿ (ಎಎವೈ+ ಬಿಪಿಎಲ್) 48483 ಪಡಿತರ ಕಾರ್ಡುದಾರರಿಗೆ 3578.82 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಅಕ್ಕಿ ಹಂಚಿಕೆ ಯೋಜನೆಯಡಿ ಗದಗ ಶಹರದ ಭಾಗದಲ್ಲಿ ( ಎಎವೈ + ಬಿಪಿಎಲ್) 32699 ಕಾರ್ಡುದಾರರಿಗೆ ಒಟ್ಟು 5360.95 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಗದಗ ಗ್ರಾಮೀಣ ಭಾಗದಲ್ಲಿ ( ಎಎವೈ + ಬಿಪಿಎಲ್ ) 48483 ಪಡಿತರ ಕಾರ್ಡುದಾರರಿಗೆ ಒಟ್ಟು 7521.35 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಗೃಹ ಜ್ಯೋತಿ ಯೋಜನೆಯಡಿ 31-7-2026 ರವರೆಗೆ ಗದಗ ಶಹರದಲ್ಲಿ 46484 ಸ್ಥಾವರಗಳು ಅರ್ಹವಿದ್ದು ಆ ಪೈಕಿ 46260 ಸ್ಥಾವರಗಳು ನೊಂದಣಿಯಾಗಿವೆ. ಶೇ 99.52 ಪ್ರಗತಿ ಸಾಧಿಸಲಾಗಿದೆ. ಗದಗ ಗ್ರಾಮೀಣ ಉಪವಿಭಾಗದಲ್ಲಿ ಗೃಹಜ್ಯೋತಿ ಯೋಜನೆಗೆ 53324 ಸ್ಥಾವರಗಳು ಅರ್ಹವಿದ್ದು ಆ ಪೈಕಿ 53110 ಸ್ಥಾವರಗಳು ನೊಂದಣಿಯಾಗಿವೆ. ಶೇ 99.60 ರಷ್ಟು ಪ್ರಗತಿ ಸಾಧಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳನವರ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರುಗಳಾದ ಶ್ರೀಮತಿ ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗು ಕರಕಲಮಟ್ಟಿ, ಎನ್.ಬಿ.ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಶ್ರೀಮತಿ ಸಾವಿತ್ರಿ ಹೂಗಾರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಎಚ್.ಎಸ್.ಜಿನಗ, ಗ್ಯಾರಂಟಿ ಯೋಜನೆಗೆ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.




