“ಕಲಾವಿದರ ಸೃಜನಶೀಲತೆ, ಪ್ರತಿಭೆ, ಸಾಧನೆಗಳನ್ನು ಗುರುತಿಸಿ, ಗೌರವಿಸುವುದರಿಂದ ಕಲಾ ಕ್ಷೇತ್ರದ ಬೆಳವಣಿಗೆಗೆ ಪ್ರೇರಣೆ ದೊರೆಯುತ್ತದೆ” ಎಂದು ಕಲಾವಿದ ಅಶೋಕ್ ಟಿ. ಅಕ್ಕಿ ಹೇಳಿದರು.
ಗದಗ ನಗರದ ಸಂಸ್ಕೃತಿ ಕನ್ವೆನ್ಷನ್ಸ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 53ನೇ ವಾರ್ಷಿಕ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
“ಕಲೆಯು ಕೇವಲ ಅಭಿವ್ಯಕ್ತಿಯ ಮಾಧ್ಯಮವಲ್ಲ, ಅದು ಸಂಸ್ಕೃತಿ, ಪರಂಪರೆ ಹಾಗೂ ಜೀವನಾನುಭವ ಪ್ರತಿಬಿಂಬಿಸುವ ಮಹತ್ವದ ಕ್ಷೇತ್ರವಾಗಿದೆ. ಕಲಾ ಕ್ಷೇತ್ರದಲ್ಲಿ ಸೃಜನಶೀಲತೆ ಜೊತೆಗೆ ವ್ಯವಸ್ಥಿತ ಕಾರ್ಯಶೈಲಿಯೂ ಮುಖ್ಯವಾಗಿದೆ. ಕಲಾವಿದರು ಕಲಾಕೃತಿಗಳ ರಚನೆಗೆ ಮಾತ್ರ ಸೀಮಿತವಾಗದೆ, ಅವುಗಳ ಸಂರಕ್ಷಣೆ, ಪ್ರದರ್ಶನ ಹಾಗೂ ಪ್ರಚಾರಕ್ಕೂ ಆದ್ಯತೆ ನೀಡಬೇಕು” ಎಂದು ಹೇಳಿದರು.
“ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಕಲಾ ಪ್ರಯೋಗಗಳಿಗೂ ಅವಕಾಶ ಕಲ್ಪಿಸಬೇಕು. ಹೊಸ ಕಲಾವಿದರಿಗೆ ಹಿರಿಯ ಕಲಾವಿದರು ಮಾರ್ಗದರ್ಶನ ನೀಡಬೇಕು. ಯುವ ಕಲಾವಿದರ ಕಲಾಕೃತಿಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ, ಅವರನ್ನು ಪ್ರೋತ್ಸಾಹಿಸಬೇಕು. ಇದರಿಂದ ಯುವ ಕಲಾವಿದರು ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ರಿಜಿಸ್ಟ್ರಾರ್ ಎನ್. ನಮ್ರತಾ, ಕಲಾವಿದ ಆರ್.ಡಿ. ಕಡ್ಲಿಕೊಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ಇದ್ದರು.




