ತೋಂಟದಾರ್ಯ ಮಠದ ಆವರಣದಲ್ಲಿ ನಡೆದಿರುವ ಜಾತ್ರೆಯಲ್ಲಿ ಭಾನುವಾರ ಸಂಭವಿಸಿದ ಅವಘಡದಲ್ಲಿ 18 ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.
ಗದಗ ಪಟ್ಟಣದಲ್ಲಿ ಜಾತ್ರೆ ಆವರಣದಲ್ಲಿ ಭಾನುವಾರ ರಾತ್ರಿ 9ರ ಸುಮಾರಿಗೆ ಜಾತ್ರೆಗೆ ಬಂದಿದ್ದ ಜನರು ‘ಡಾನ್ಸಿಂಗ್ ಫ್ಲೈ’ ಹೆಸರಿನ ಆಟ ಆಡುವಾಗ ಮೂರು ಚೇರ್‌ಗಳು ಮೇಲೆದ್ದು ಬಂದು ಈ ದುರ್ಘಟನೆ ನಡೆದಿದೆ.
ಗಾಯಾಳುಗಳನ್ನು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಇಬ್ಬರು ಕೊಪ್ಪಳ ಜಿಲ್ಲೆ, ಒಬ್ಬರು ತುಮಕೂರು ಜಿಲ್ಲೆ, ಉಳಿದವರು ಗದಗ ಜಿಲ್ಲೆಯವರು ಎಂದು ಗೊತ್ತಾಗಿದೆ. ಗಾಯಾಳುಗಳ ವೈಯಕ್ತಿಕ ವಿವರವನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
‘ಘಟನೆಯಲ್ಲಿ 18 ಮಂದಿ ಮಂದಿ ಗಾಯಗೊಂಡಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ತಲೆಗೆ ಗಂಭೀರ ಹೊಡೆತ ಬಿದ್ದಿರುವ ನಾಲ್ಕು ಮಂದಿಯನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಿಕೊಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಪ್ರತಿಭಟನೆ: ಅವಘಡ ನಡೆದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು ತೋಂಟದಾರ್ಯ ಜಾತ್ರಾ ಮಹೋತ್ಸವ ಕಮಿಟಿ ವಿರುದ್ಧ ಘೋಷಣೆ ಕೂಗಿದರು.
‘ಈ ಘಟನೆಗೆ ಸಂಬಂಧಿಸಿದಂತೆ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಮನರಂಜನಾ ಆಟಗಳನ್ನು ಆಡಿಸಲು ಟೆಂಡರ್ ಪಡೆದಿರುವ ಗುತ್ತಿಗೆದಾರ ಹಾಗೂ ಜಾತ್ರಾ ಕಮಿಟಿಯ ಪದಾಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಹಿಂದು ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಮಾತನಾಡಿ, ‘ಅಮಾಯಕ ಜನರ ಜತೆಗೆ ಚೆಲ್ಲಾಟವಾಡುತ್ತಿರುವ ಜಾತ್ರಾ ಕಮಿಟಿ, ನಗರಸಭೆ ಅಧಿಕಾರಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಗದಗ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಸಿದರು.




