“ಇದೇ ತಿಂಗಳು ಏಪ್ರಿಲ್ 10 ರಿಂದ 14ವರೆಗೆ ವಿಜಯಪುರದಲ್ಲಿ ಮೇ ಸಾಹಿತ್ಯ ಮೇಳ ಬಳಗ, ವಿಜಯಪುರ ಹಾಗೂ ದಲಿತ, ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ ಸಹಯೋಗದೊಂದಿಗೆ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತಿಯ ಅಂಗವಾಗಿ ಐದು ದಿನಗಳ ಕಾಲ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ” ಎಂದು ಸಾಹಿತಿ ರಾಮಚಂದ್ರ ಹಂಸನೂರು ತಿಳಿಸಿದರು.
ಗದಗ ಪಟ್ಟಣದ ನಗರಸಭೆ ಆವರಣದಲ್ಲಿರುವ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಪುತ್ಥಳಿ ಮುಂದೆ ಇಂದು ವಿಜಯಪುರದಲ್ಲಿ ನಡೆವ ಪುಸ್ತಕ ಮೇಳದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
“ಬಿಜಾಪುರದಲ್ಲಿ ನಡೆಯುತ್ತಿರುವ ಬುದ್ಧ ಬಸವ ಅಂಬೇಡ್ಕರ್ ಪುಸ್ತಕ ಮೇಳವು ಅಭಿನಂದನೀಯ. ನಮ್ಮ ರಾಜ್ಯ ಹಾಗೂ ದೇಶದಲ್ಲಿ ದೇವರ ಹೆಸರಿನಲ್ಲಿ ಜಾತ್ರೆಯ ಹೆಸರಿನಲ್ಲಿ ಉತ್ಸವದ ಹೆಸರಿನಲ್ಲಿ ಅನೇಕ ಮೌಡ್ಯ ಆಚರಣೆಗಳು ಸಾವಿರಾರು ವರ್ಷಗಳಿಂದ ನಡೆಯುತ್ತವೆ. ಡಾ.ಬಾಬಾ ಸಾಹೇಬರು ‘ದೇವರ ಗುಡಿ ಘಂಟೆಗಳ ಸದ್ದಿಗಿಂತ, ಶಾಲೆಗಳ ಘಂಟೆ ಸದ್ದು; ದೇಶವನ್ನು ಉದ್ದಾರ ಮಾಡಬಲ್ಲದು’ ಎಂದಿದ್ದರು ಎಂದರು.
“ಈ ದೇಶದಲ್ಲಿ ಸಮಾನತೆ ಬರಬೇಕಾದರೆ ಅಂಬೇಡ್ಕರ ಸಂವಿದಾನವೆ ಬರಬೇಕಾಯಿತು. ಯಾವ ದೇವರೂ ಸಮಾನತೆ ತರಲಿಲ್ಲ. ಪುಸ್ತಕಗಳು ಬದಲಾವಣೆ ತರುತ್ತವೆ ಜನರಿಗೆ ಜ್ಞಾನ ತುಂಬುತ್ತವೆ. ಇದರಿಂದ ಜನ ಪ್ರಗತಿ ಪತದತ್ತ ಸಾಗುತ್ತಾರೆ” ಎಂದರು.
“ಪುಸ್ತಕಗಳು ಜ್ಞಾನದ ಮಸ್ತಕಗಳು. ಅವು ಜಗತ್ತನ್ನು ಆಳುತ್ತವೆ ಎನ್ನುತ್ತಾರೆ. ಮೈಮೇಲೆ ಬಟ್ಟೆ ಹರಿದರೂ ಚಿಂತೆಯಿಲ್ಲ ಕಯ್ಯಲ್ಲಿ ಒಂದು ಪುಸ್ತಕ ವಿರಲಿ’ ಎನ್ನುತ್ತಾರೆ ತಿಳಿದವರು. ವಿಜಯಪುರದಲ್ಲಿ ನಡೆಯುತ್ತಿರುವ ಸಮಾನತೆಯ ಹರಿಕಾರರಾದ ಬುದ್ಧ, ಬಸವ, ಅಂಬೇಡ್ಕರರ ಹೆಸರಿನಲ್ಲಿ ಇದು ನಡೆಯುತ್ತಿರುವುದು ತುಂಬಾ ಔಚಿತ್ಯ” ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರು ಆನಂದ ಶಿಂಗಾಡಿ, ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ, ಮಂಜುನಾಥ ಗೊಂದಿಯವರ, ಅನಿಲ ಕಾಳೆ, ರವಿ ಚಲವಾದಿ, ಪರಶು ಕಾಳೆ, ಶಿವಾನಂದ ತಮ್ಮಣ್ಣವರ, ಸುರೇಶ ಕಡ್ಲಿಮಟ್ಟಿ, ಕುಮಾರ ಕಳಸಾಪುರ, ರವಿ ಕಾಳೆ ಉಪಸ್ಥಿತರಿದ್ದರು. ರಮೇಶ ಕೋಳೂರ ಮಾತನಾಡಿ ವಂದಿಸಿದರು.




