ಕೋಮುದ್ವೇಷ ಬಿತ್ತುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ಇದೇ ತಿಂಗಳು 31ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಶರಣ ಪರಂಪರೆ ನಾಶಗೊಳಿಸುವ ಪ್ರಯತ್ನಗಳ ನಡೆಯುತ್ತಿದೆ ಎಂದು ಪ್ರತಿರೋಧ ವ್ಯಕ್ತಪಡಿಸಿದರು.
ಗದಗ ಪಟ್ಟಣದ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ಸಮಾನ ಮನಸ್ಕರು, ಬಸವಾದಿ ಶರಣರು ಮತ್ತು ಸಮಾಜದ ಮುಖಂಡರು ನಗರದಲ್ಲಿ ಹಿಂದೂ ಸಮಾವೇಶ ಮಾಡಿತ್ತಿರುವುದನ್ನು ಖಂಡಿಸಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಅಶೋಕ್ ಬರಗುಂಡಿ ಮಾತನಾಡಿ, “ಸಮತೆಯ ಬಾಳನ್ನು ಬದುಕಲಿಕ್ಕೆ ಶರಣರು ಇಷ್ಟಲಿಂಗದಲ್ಲಿ ಬೆರೆತು, ಎಲ್ಲರೂ ಒಂದೇ ಎನ್ನುವ ಭಾವದಲ್ಲಿ ಬದುಕುತ್ತಾರೆ. ಇದನ್ನು ಸಹಿಸದ ಮನುವಾದಿಗಳು, ವೈದಿಕ ಮನಸ್ಥಿತಿಯವರು ಇದನ್ನು ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಈ ಮನುವಾದಿಗಳು ನಗರದಲ್ಲಿ ಹಿಂದೂ ಸಮಾವೇಶವನ್ನು ಮಾಡುತ್ತಿರುವುದನ್ನು ನಾವೆಲ್ಲರೂ ಖಂಡಿಸಬೇಕು” ಎಂದು ಹೇಳಿದರು.
“ಗದಗಿನಲ್ಲಿನಲ್ಲಿ ಪ್ರತಿರೋಧ ಒಡ್ಡುವುದಿಲ್ಲವೆಂದು ತಿಳಿದು ಆರ್.ಎಸ್.ಎಸ್, ಮನುವಾದಿಗಳು ಹಿಂದೂ ಸಮಾವೇಶ ಮಾಡುತ್ತಿದ್ದು, ಈ ಮೂಲಕ ಬಸವಣ್ಣನವರ ವಿಚಾರಗಳಲ್ಲಿ ಮನುವಾದಿಗಳು ತಲೆದೋರಿಸಿದ್ದಾರೆ. ಗದಗದ ಪರ್ಜಞಾವಂತ ಜನರು ಈ ವಿರುದ್ಧ ದೊಡ್ಡಮಟ್ಟದ ಪ್ರತಿರೋಧ ವ್ಯಕ್ತಪಡಿಸಬೇಕು” ಎಂದು ಹೇಳಿದರು.
ದಲಿತ ಹೋರಾಟಗಾರ ಶರೀಫ್ ಬಿಳಿಯಲಿ ಮಾತನಾಡಿ, “ಒಂದು ವರ್ಷದ ಹಿಂದೆ ಆರ್.ಎಸ್.ಎಸ್ ಹಾಗೂ ಹಿಂದೂ ಸಂಘಟನೆಗಳು ಮಹಾಯಜ್ಞ ಕುಂಭಮೇಳ ಮಾಡಿದರು. ಈಗ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡಲು ಹೊರಟಿದ್ದಾರೆ. ಈ ಮೂಲಕ ಕೇವಲ ಬಸವಣ್ಣನವರ ವಚನಗಳನ್ನು ನಾಶಗೊಳಿಸುವದಷ್ಟೆ ಅಲ್ಲ, ಶೋಷಿತ ವರ್ಗದವರ ಅಸ್ಮಿತೆಯನ್ನು ನಾಶಗೊಳಿಸಲು ಹೊರಟಿದ್ದಾರೆ. ಇಂತಹ ಮೂಲಭೂತವಾದದ ವಿರುದ್ಧ ಎಲ್ಲರೂ ಪ್ರತಿರೋಧ ವ್ಯಕ್ತಪಡಿಸಬೇಕು” ಎಂದು ಕರೆ ನೀಡಿದರು.
“ಆರ್.ಎಸ್.ಎಸ್. ಕನ್ಹೆರಿ ಹೋದೆಡೆಯೆಲ್ಲಾ ಕೋಮುದ್ವೇಷ ಹರಡುತ್ತಿದ್ದಾನೆ. ಈಗ ಗದಗಲ್ಲಿ ಹಿಂದೂ ಸಮಾವೇಶದ ಹೆಸರಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾನೆ. ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಕನ್ಹೇರಿ ಪ್ರವೇಶ ನಿರಾಕರಿಸಿದ್ದರು, ಬಸವಣ್ಣನವರ ವಚನಗಳನ್ನು ಒಪ್ಪಿಕೊಳ್ಳುವರು ಇದನ್ನು ಪ್ರತಿರೋಧಿಸಬೇಕು. ಜಿಲ್ಲೆಗೆ ಬರದಂತೆ ನೋಡಿಕೊಳ್ಳಬೇಕು. ಗದಗದಲ್ಲಿ ವಚನ ದರ್ಶನ ಕಾರ್ಯಕ್ರಮ ಮೂಲಕವೇ ಆರಂಭ ಮಾಡಿದ್ದಾರೆ. ಅಂದು ನಾವು ಪ್ರತಿರೋಧ ಒಡ್ಡಿದ್ದೆವು. ಇಂತಹ ಕೋಮುದ್ವೇಷ ಬಿತ್ತುವವರ ವಿರುದ್ದ ಪ್ರತಿಭಟನೆ ಕೈಗೊಳ್ಳಬೇಕು. ಇಂತಹ ಕೋಮುವಾದಿಗಳಿಗೆ ಜಿಲ್ಲೆಯ ಪ್ರವೇಶ ನಿರಾಕರಿಸಬೇಕು” ಎಂದು ಕರೆಗೊಟ್ಟರು.
ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ, “ನಾವು ಭಾವನಾತ್ಮಕವಾಗಿ, ವೈಚಾರಿಕವಾಗಿ ಬಸವಣ್ಣನವರನ್ನು ಒಪ್ಪಿಕೊಂಡವರು. ಈ ಆಶಯವನ್ನು ಇಟ್ಟುಕೊಂಡು ಸಮಾಜವನ್ನು ನಿರ್ಮಾಣ ಮಾಡುವ ಆಶೆಯುಳ್ಳವರಾಗಿದ್ದೇವೆ. ಆದರೆ ಇಲ್ಲಿರುವ ಮಠಗಳು ಲಿಂಗಾಯತ, ಶರಣತತ್ವವನ್ನು ಅಳವಡಿಸಿ ಬದುಕಲಿಲ್ಲ, ಬದುಕಿದ್ದರೇ ಜಿಲ್ಲೆಯ ವಾತಾವರಣ ಬೇರೆಯಿರುತ್ತಿತ್ತು. ಮಠದ ಜಾತ್ರಾ ಸಮಿತಿಯ ಅಧ್ಯಕ್ಷರು ಹಿಂದೂ ಸಮಾವೇಶಕ್ಕೆ ಹೋಗ್ತಿದ್ದಾರೆ ಎಂದರೆ ಮಠದ ನಿಲುವುಗಳ ಕುರಿತು ಜಿಲ್ಲೆಯ ಜನರು ಸೂಕ್ಷ್ಮವಾಗಿ ಯೋಚಿಸಬೇಕಿದೆ. ಮಠದ ಮೇಲೆ ಬಹಳವೇ ಭರವಸೆ ಇಟ್ಟುಕೊಂಡಿದ್ದೆವು, ಆ ಕಾರಣಕ್ಕಾಗಿಯೇ ಮಠದ ಈ ನಿರ್ಧಾರ ನಮ್ಮ ಒಳಸಂಕಟಕ್ಕೆ ಕಾರಣವಾಗಿದೆ. ಹಿಂದೂ ಸಮಾವೇಶವನ್ನು ನಡೆಯಲು ಆಸ್ಪದ ಕೊಡದೆ ನಾವೆಲ್ಲರೂ ಒಕ್ಕೊರಳಿನಿಂದ ವಿರೋಧಿಸಬೇಕಿದೆ” ಎಂದರು.
ಎಸ್.ಎನ್ ಬಳ್ಳಾರಿ ಅವರು ಮಾತನಾಡಿ, “ನಮ್ಮ ನಮ್ಮವರೇ ಆ ಹಿಂದೂ ಸಮಾವೇಶದಲ್ಲಿ ಭಾಗವಹಿಸುತ್ತದ್ದಾರೆ. ತಿಳಿಯದೇ ಇರುವವರು ಭಾಗವಹಿಸುದು ಒಂದು ಕಡೆ ಇರಲಿ, ತಿಳಿದವರೇ, ಅರಿತುಕೊಂಡವರೇ ಅವರ ಆಶೆ ಆಮೀಶುಗಳಿಗೆ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಇಂತವರನ್ನು ನಾವು ಏನೆಂದು ಹೇಳಬೇಕು. ಹಾಗಾಗಿ ಮನೆ ಮನೆಗೆ, ವಾರ್ಡ್ ವಾರ್ಡ್ ಗಳಿಗೆ ಹೋಗಿ ಜಾಗೃತಿ ಮೂಡಿಸುವ ಮೂಲಕ ಈ ಹಿಂದೂ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಬೇಕು” ಎಂದರು.
ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ತಿರ್ಮಾನ:
“ಮುಂದಿನ ದಿನಗಳಲ್ಲಿ ನಿಜ ಶರಣರ ಸಮಾವೇಶ ಹಮ್ಮಿಕೊಳ್ಳುವುದರ ಮೂಲಕ ವಚನ ಚಳವಳಿಯನ್ನು ಜಿಲ್ಲೆಯ ಪ್ರತಿ ಮನೆ ಮನೆಗೂ ತಲುಪಿಸಬೇಕು. ಕೋಮುದ್ವೇಷ ಬಿತ್ತುವ ಕನ್ಹೇರಿ ಮಠದ ಸ್ವಾಮಿಜಿಯನ್ನು ಗದಗ ಜಿಲ್ಲೆಯ ಪ್ರವೇಶ ನಿರ್ಬಂಧಿಸಿ, ಗದಗ ಜಿಲ್ಲೆಯ ಜನತೆಯಲ್ಲಿ ಕೋಮು ಸೌಹಾರ್ದದ ಕುರಿತು ಅರಿವು ಮೂಡಿಸಬೇಕು” ಎಂದು ತಿರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಎಸ್.ಎನ್ ಬಳ್ಳಾರಿ, ಬಸವರಾಜ ಕಡೆಮನಿ, ಎಚ್.ಎಸ್.ಸೊಂಪೂರು, ಕೊಟ್ರೆಬಸಪ್ಪ ಚಟ್ನಿ, ವಿ.ಕ.ಕರೇಗೌಡ್ರ, ದೀಲಿಪಕುಮಾರ ಹಲವಾಗಲಿ, ಪ್ರಕಾಶ ಅಸುಂಡಿ, ಮಂಜುನಾಥ ಹಗೇದಾಳ, ಎಸ್.ಐ.ಪವಾಡಗೌಡ್ರ, ಆನಂದ ಶಿಂಗಾಡಿ, ನಾಗಭೂಷನ್ ಬಡಗನ್ನವರ, ಸುವರ್ಣ ಗಾಳಪ್ಪನವರ, ಸುಜಾತಾ ವಾರದ, ಮಂಗಳಾ ನಾಲವಾಡ ಸೇರಿದಂತೆ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವದಳ, ಮೇ ಸಾಹಿತ್ಯ ಮೇಳ, ದಲಿತ ಕಲಾ ಮಂಡಳಿ, ದಲಿತ ಸಂಘಟನೆಗಳ ಒಕ್ಕೂಟ, ನಗರದ ಎಲ್ಲ ಪ್ರಗತಿಪರ ಮತ್ತು ಬಸವಾದಿ ಶರಣರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.




