ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿನ ಪಠ್ಯೇತರ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಕಾಲೇಜು ಮಟ್ಟದಿಂದಲೇ ಎಲ್ಲ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ಶಶಿಕುಮಾರ್.ಎಚ್.ಸಿ ತಿಳಿಸಿದರು
ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಸಂಭ್ರಮ 2026’ ಸಾಂಪ್ರದಾಯಿಕ ದಿನ ಮತ್ತು ಜಾನಪದ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಅದ್ಧೂರಿ ಆಯೋಜನೆಗೆ ಕಾರಣೀಭೂತರಾದ ಎಲ್ಲ ಪ್ರಾಧ್ಯಾಪಕ ಬಳಗಕ್ಕೆ ಮತ್ತು ಎಲ್ಲ ಸ್ಪರ್ಧೆಗಳಲ್ಲೂ ಸಕ್ರೀಯವಾಗಿ ಭಾಗವಹಿಸಿದ ವಿದ್ಯಾರ್ಥಿಗಳಿಗೂ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಸ್ಮಿತಾ, ಜನಪದ ಉತ್ಸವ ಎಂಬ ಈ ಸಂಭ್ರಮದ ಕಾರ್ಯಕ್ರಮಕ್ಕೆ ತಮ್ಮನ್ನೂ ಉದ್ಘಾಟಕರಾಗಿ ಆಯ್ಕೆ ಮಾಡಿದ್ದು ಅತ್ಯಂತ ಸಂತಸ ತಂದಿದ್ದು, ಜನಪದರು ಹೆಣ್ಣನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಹಾಡಿ ಹೊಗಳಿದ್ದಾರೆ. ಕಾರ್ಯಕ್ರಮ ಆಯೋಜಕರು ಕೂಡ ಒಬ್ಬ ಹೆಣ್ಣಾದ ಕಾರಣ ಅಂತಹ ಜನಪದ ಉತ್ಸವಕ್ಕೆ ಒಂದು ಹೆಣ್ಣು ಉದ್ಘಾಟಕಳಾಗೋದು ಸೂಕ್ತ ಎಂದೆನಿಸಿರಬಹುದು. ಅಷ್ಟಕ್ಕೂ ಇಂತಹ ವಿಷಯಗಳಲ್ಲಿ ಕಾಲೇಜಿನವರಿಗಿಂತ ಹೊರಗಿನವರು ಉತ್ತಮ ಎಂಬ ಮಾತೇ ಬರುವುದಿಲ್ಲ. ವಿಷಯದೆಡೆಗಿನ ಜ್ಞಾನ ಒಂದಿದರೆ ಸಾಕು ಎಂದು ಜಾನಪದ ಗೀತೆಯೊಂದನ್ನು ಹಾಡಿ ತಮ್ಮ ಉದ್ಘಾಟನಾ ಭಾಷಣ ಮುಗಿಸಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕರಾದ ಸುಭದ್ರಮ್ಮ.ಎಮ್, ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲೆಪ್ಟಿನೆಂಟ್ ಡಾ.ವಿರುಪಾಕ್ಷ.ಜೆ.ಡಿ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಗಪ್ಪ ಛಲವಾದಿ, ಇತಿಹಾಸ ವಿಭಾಗದ ಮುಖ್ಯಸ್ಥ ಶಿವಕುಮಾರ್.ಸಿ.ಜಿ, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




