ಮುಂಗಾರು ಮಳೆ ಆರಂಭಕ್ಕೆ ಇನ್ನೂ ತಿಂಗಳು ಬೇಕು. ಆದರೆ, ರಾಜ್ಯಾದ್ಯಂತ ಈಗಾಗಲೇ ಮಳೆ ಆರಂಭವಾಗಿದೆ. ವಾರದ ಹಿಂದೆ ಹಲವೆಡೆ ಆಲಿಕಲ್ಲು ಮಳೆಯಿಂದ ರೈತರು ಕಂಗೆಟ್ಟು ತತ್ತರಿಸಿದ್ದರು.
ಗದಗ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಗಾಳಿ, ಗುಡುಗು-ಸಿಡಿಲು ಸಹಿತ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಬಿರುಗಾಳಿ ಮಳೆಗೆ ಶೆಡ್‌ಗಳು, ಮನೆಯ ತಗಡಿನ ಶೀಟುಗಳು ಹಾರಿಹೋದ ಪರಿಣಾಮ ಕುಟುಂಬ ಹಾಗೂ ಜನರಲ್ಲಿ ಆತಂಕವುಂಟಾಗಿದೆ.
ದಿಂಡೂರು ಗ್ರಾಮದಲ್ಲಿ ಭಾರಿ ಮಳೆ-ಗಾಳಿಯ ಪರಿಣಾಮ ನಾಲ್ಕಕ್ಕೂ ಹೆಚ್ಚು ತಗಡಿನ ಮನೆಯ ಶೀಟ್‌ಗಳು ಗಾಳಿಗೆ ಹಾರಿ ಹೋಗಿದ್ದು, ಹಲವರಿಗೆ ಗಾಯಗಳಾಗಿವೆ. ಶಿವಪ್ಪ ಲಮಾಣಿ ಅವರಿಗೆ ಕಾಲಿಗೆ ಗಾಯವಾಗಿದ್ದು, ಸೋಮವ್ವ ಲಮಾಣಿ ಅವರ ಕೈ ಮುರಿದಿದೆ. ದೇವಲಪ್ಪ ಲಮಾಣಿ ಅವರಿಗೆ ಮನೆಯ ಚಾವಣಿಯ ತಗಡು ಮೈ ಮೇಲೆ ಬಿದ್ದಿದ್ದರಿಂದ ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ. ಆ ಸಂದರ್ಭದಲ್ಲಿ ಗಾಯಾಳುಗಳು ಹಾಗೂ ಕುಟುಂಬದವರು ತೀವ್ರವಾದ ಆತಂಕಕೊಳಗಾಗಿದ್ದಾರೆ.
ಇನ್ನೊಂದೆಡೆ, ತಹಶೀಲ್ದಾರ, ಗ್ರಾಮ ಲೆಕ್ಕಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈ ಮುರಿದ ಮಹಿಳೆ ಸೋಮವ್ವ ಅವರನ್ನು ಆಸ್ಪತ್ರೆಗೆ ಸಾಗಿಸಲು ಪರದಾಟ ಪಟ್ಟಿದ್ದಾರೆ.
ಇದನ್ನೂ ಓದಿ: ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು
ಭಾರಿ ಗಾಳಿ ಮತ್ತು ಮಳೆಯ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ತಾಂಡಾ ನಿವಾಸಿಗಳು ಕತ್ತಲಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಗಾಳಿಯ ತೀವ್ರತೆಗೆ ಹಲವು ಮರಗಳು ನೆಲಕ್ಕುರುಳಿದ್ದು, ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಸೇರಿದಂತೆ ವಾಹನಗಳು ಹಾನಿಗೀಡಾಗಿವೆ.




