ಗಬ್ಬುನಾತ ಬೀರುವ ಕಸವನ್ನು ಸ್ವಚ್ಛಗೊಳಿಸಿ, ನಗರವನ್ನು ಸುಂದರಗೊಳಿಸುವ ಪೌರಕಾರ್ಮಿಕರು ಕೆಲಸದ ವೇಳೆ ಅವರಿಗೆ ಗೌರವಯುತವಾಗಿ ವಿಶ್ರಾಂತಿ ಪಡೆಯಲು ವಿಶ್ರಾಂತಿ ಗೃಹಗಳ ಅಗತ್ಯವಿದೆ. ಹಾಗಾಗಿ ಈ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಪೌರಕಾರ್ಮಿಕರ ಮೇಲೂ ಗೌರವ, ಕಾಳಜಿ ತೋರುವರೇ ಎಂಬುದನ್ನು ಕಾದು ನೋಡಬೇಕಿದೆ.
ನಗರವನ್ನು ಸುಂದರಗೊಳಿಸುವ, ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ವೇಳೆ ಬೆಳಗಿನ ಉಪಹಾರ, ಚಹಾ, ವಿಶ್ರಾಂತಿ, ಪಡೆಯಲು ನಿಗದಿತ ಸ್ಥಳವಿಲ್ಲ. ಎಲ್ಲೆಂದರಲ್ಲಿ ನಿಂತು ಉಪಹಾರ ಸೇವಿಸುವ ದುಃಸ್ಥಿತಿ ಉಂಟಾಗಿದೆ. ಅವರ ಸಂಕಷ್ಟಗಳನ್ನು ಕಂಡಿರುವ ಪ್ರಜ್ಞಾವಂತ ನಾಗರಿಕರು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಪಡೆಯಲು ʼಭೀಮಾಶ್ರಯʼ ವಿಶ್ರಾಂತಿ ಗೃಹ ನಿರ್ಮಿಸಿದ್ದು, ಅದರಂತೆ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ರಾಜ್ಯಾದ್ಯಂತ ಪೌರಕಾರ್ಮಿಕರಿಗಾಗಿ ವಿಶ್ರಾಂತಿ ಗೃಹಗಳನ್ನು ತೆರೆಯುವ ತುರತು ಅಗತ್ಯವಿದೆ.
ಗದಗ-ಬೆಟಗೇರಿ ಅವಳಿ ನಗರ ಪ್ರದೇಶಗಳಲ್ಲಿ ಸಾರ್ವಜನಿಕರು ಸಂಚರಿಸುವಾಗ ರಸ್ತೆ ಬದಿಯಲ್ಲಿ ಕಸ ಕಂಡರೆ, ಮುಖ ಕಿವುಚಿ, ಮೂಗು ಮುಚ್ಚಿಕೊಂಡು ಬದಿಗೆ ಹೋಗುತ್ತಾರೆ, ಅದೇ ಕಸವನ್ನು ಸ್ವಚ್ಛಗೊಳಿಸಲು ಶ್ರಮಿಸುವ ನಮ್ಮ ಪೌರಕಾರ್ಮಿಕರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸೂಕ್ತ ಜಾಗವಿಲ್ಲ. ಬೀದಿಯಲ್ಲಿನ ಕಸದೊಂದಿಗೆ ಚಹಾ, ಉಪಹಾರ ಸೇವಿಸುವಂಥ ದುಃಸ್ಥಿತಿ ಎದುರಾಗಿದೆ. ಮಹಿಳಾ ಕಾರ್ಮಿಕರ ಸ್ಥಿತಿಯಂತೂ ಹೇಳತೀರದು. ದಣಿವಾರಿಸಿಕೊಳ್ಳಲು ಸೂಕ್ತ ಜಾಗವಿಲ್ಲ. ಸ್ವಚ್ಚಗೊಳಿಸಿದ ಜಾಗದಲ್ಲಿಯೋ, ರಸ್ತೆಬದಿಯಲ್ಲಿಯೋ ಕುಳಿತುಕೊಳ್ಳುವ ಪರಿಸ್ಥಿತಿ ಕಂಡುಬಂದಿದೆ.
ಪೌರಕಾರ್ಮಿಕರೆಂದರೆ ದೂರವೇ ಸರಿಯುವವರ ನಡುವೆ, ಮಾನವೀಯತೆ ಉಳ್ಳವರು ‘ನಮ್ಮ ನಗರವನ್ನು ಸುಂದರಗೊಳಿಸುವ ಪೌರಕಾರ್ಮಿಕರಿಗೆ ವಿಶ್ರಾಂತಿ ಮಾಡಲು ಯಾವುದೇ ವ್ಯವಸ್ಥೆ ಇಲ್ಲದಿರುವುದಕ್ಕೆ, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಶಪಿಸುತ್ತಲೋ, ಬೈಯ್ಯುತ್ತಲೋ, ಮನಸ್ಸಿನಲ್ಲಿಯೇ ಗೋಣಗುವುದು ವಿರಳ..
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‌ಗಳು ಇದ್ದು, ಪುರುಷರು, ಮಹಿಳೆಯರು ಸೇರಿದಂತೆ ಒಟ್ಟು 432 ಮಂದಿ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 132 ಕಾಯಂ ನೌಕರರು, 92 ಹೊರಗುತ್ತಿಗೆ ಪೌರ ಕಾರ್ಮಿಕರು, 54 ಕಸದ ಗಾಡಿ(ಟ್ರ್ಯಾಕ್ಟರ್) ಚಾಲಕ ಪೌರಕಾರ್ಮಿಕರು, 132 ಡೋರ್ ಟು ಡೋರ್ ಪೌರಕಾರ್ಮಿಕರ ಜತೆಗೆ ಇತರೆ ಕಾರ್ಮಿಕರು ಸೇರಿದಂತೆ ಒಟ್ಟು 432 ಮಂದಿ ಪೌರಕಾರ್ಮಿಕರು ನಿತ್ಯವೂ ಕೆಲಸ ಮಾಡುತ್ತಾರೆ. ಈ ಶ್ರಮ ಜೀವಿಗಳು ಒಂದೇ ಒಂದು ದಿನ ಕೆಲಸಕ್ಕೆ ರಜೆ ಹಾಕಿದರೆ ನಗರದ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಸಾರ್ವಜನಿಕರೇ ಊಹಿಸಿಕೊಳ್ಳಬೇಕು.
ಪೌರಕಾರ್ಮಿಕರು ನಿತ್ಯವೂ ಬೆಳಗಿನ ಜಾವ 5ಕ್ಕೆ ಎದ್ದು, ಖಾಕಿ ತೊಟ್ಟು, ನಗರದಲ್ಲಿ ಇರುವ ಎಂಟು ಪಾಯಿಂಟ್‌ಗಳಿಗೆ ತಲುಪಿ 5:30ಯಿಂದ 6:30ತನಕ ತನಕ ಹಾಜರಿ ಹಾಕಿ, ಸಲಕರಣಗಳನ್ನು ಹಿಡಿದು, ತಮಗೆ ಕೆಲಸ ನಿಗದಿಪಡಿಸಿದ ಸ್ಥಳಗಳಿಗೆ ಹೊರಟರೆ, ಮಧ್ಯಾಹ್ನ 2ರವರೆಗೆ ರಸ್ತೆ ಬದಿ ಇರುವ ತ್ಯಾಜ್ಯ, ಗಟಾರಗಳ ಕಸ ಕಡ್ಡಿಗಳ ತೆರವು ಸೇರಿದಂತೆ ಹಲವು ರೀತಿಯ ಸ್ವಚ್ಛತೆ ಕಾರ್ಯಗಳಲ್ಲಿ ತೊಡಗುತ್ತಾರೆ.
ಹೀಗೆ ಪೌರಕಾರ್ಮಿಕರು ಕೆಲಸ ಮಾಡುವಾಗ ಧಣಿವಾರಿಸಿಕೊಳ್ಳಲು, ಯಾವುದಾದರೂ ಮರವೋ, ಕಟ್ಟಡದ ಕೆಳಗೋ, ಸಾರ್ವಜನಿಕ ಉದ್ಯಾನವನಗಳೋ ಆಶ್ರಯವಾಗುತ್ತವೆ. ಕೆಲವು ಕಡೆ ಇವುಗಳೂ ಇರುವುದಿಲ್ಲ. ಸುಡು ಬಿಸಿಲಿನಲ್ಲಿಯೇ ನಿಲ್ಲುವಂತಹ ಪರಿಸ್ಥಿತಿ ಅನಿವಾರ್ಯವಾಗಿದೆ. ಅವರು ಕುಡಿಯುವ ನೀರಿಗಾಗಿ ಅಕ್ಕ ಪಕ್ಕದದಲ್ಲಿರುವ ಮನೆಗಳನ್ನೋ, ಅವರಿವರನ್ನೋ ಹಿಂಜರಿಕೆಯಿಂದ ಕೇಳುವ ಪರಿಸ್ಥಿತಿ ಇದೆ. ಅದರಲ್ಲೂ ಮಹಿಳಾ ಪೌರ ಕಾರ್ಮಿಕರಂತು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಶೌಚಕ್ಕೆ ಹೋಗಬೇಕೆಂದರೆ ಗೋಡೆಯ ಮರೆಯಲ್ಲಿ ಹೋಗುವಂತಾಗಿದೆ. ನಗರ ಸ್ವಚ್ಛತೆಯಲ್ಲಿ ಮುಖ್ಯ ಪಾತ್ರ ವಹಿಸುವ ಪೌರಕಾರ್ಮಿಕರ ಶ್ರಮದಾನ, ಹಾಗೂ ಅವರ ಆರೋಗ್ಯದ ದೃಷ್ಟಿಯಿಂದ ವಿಶ್ರಾಂತಿ ಗೃಹ ಅಗತ್ಯವಾಗಿದೆ.

ಗದಗ-ಬೆಟಗೇರಿಯಲ್ಲಿಯೂ ಹುಬ್ಬಳ್ಳಿ-ಧಾರವಾಡ ಮಾದರಿಯ ʼಭೀಮಾಶ್ರಯʼ ತೆರೆಯಬೇಕು. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲೆಂದು ಇಪ್ಪತ್ತಕ್ಕೂ ಅಧಿಕ ಸುವಿಧಾ ಕ್ಯಾಬಿನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಪುರುಷ ಹಾಗೂ ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ವ್ಯವಸ್ಥೆ ಒಳಗೊಂಡಿದೆ. ಪ್ರತ್ಯೇಕ ಶೌಚಾಲಯ ಇದ್ದು, ಶುಚಿಯಾದ ಕುಡಿಯುವ ನೀರು ಹಾಗೂ ಪೂರಕ ವ್ಯವಸ್ಥೆ ಇರುತ್ತದೆ. ವಿಶ್ರಾಂತಿ ಪಡೆಯಲು ಕೆಲವು ಖುರ್ಚಿಗಳು ಇದ್ದು, ಬೆಳಗಿನ ಉಪಹಾರ ಸೇವಿಸಲು ಬೇಕಾಗುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಈ ಸ್ಥಳಕ್ಕೆ ಬರುವ ಪೌರ ಕಾರ್ಮಿಕರು ಸಮವಸ್ತ್ರ ಧರಿಸುವುದು, ನಂತರ ಕೆಲಸಕ್ಕೆ ಹೋಗಿ ಮರಳಿ ವಸ್ತ್ರಗಳನ್ನು ಧರಿಸಿಕೊಳ್ಳುವರು. ಇದೇ ಮಾದರಿಯಲ್ಲಿಯೇ ಗದಗ-ಬೆಟಗೇರಿ ಅವಳಿ ನಗರದಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದರೆ, ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ವಿಶ್ರಾಂತಿ ಪಡೆಯಲು ಬಹಳ ಅನುಕೂಲವಾಗಲಿದೆ.
ಈ ಕುರಿತು ಈ ದಿನ.ಕಾಮ್ ಜತೆಗೆ ಗದಗ ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯರು ಮುತ್ತು ಬಿಳಿಯಲಿ ಮಾತನಾಡಿ, “ನಗರದ ಪೌರ ಕಾರ್ಮಿಕರಿಗೆ ಹಾಜರಾತಿ ಪಾಯಿಂಟ್‌ಗಳು ಇಲ್ಲ. ಬಯಲು ಅಥವಾ ಬೀದಿಯಲ್ಲಿಯೇ ಹಾಜರಾತಿ ಹಾಕುತ್ತಾರೆ. ಮಳೆಗಾಲದಲ್ಲಿ ಪೌರ ಕಾರ್ಮಿಕರು ಕೆಸರಿನಲ್ಲಿಯೇ ಹಾಜರಿ ಹಾಕುವಂತಹ ಪರಿಸ್ಥಿತಿ ಎದುರಾಗಿದೆ. ಮಹಿಳಾ ಪೌರಕಾರ್ಮಿಕರಂತೂ ಶೌಚಾಲಯಕ್ಕೆ ಹೋಗಲು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಪಡೆಯಲು “ಭಿಮಾಶ್ರಯ” ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ, ಅದೇ ರೀತಿಯಲ್ಲಿ ನಮ್ಮ ಗದಗ ಬೆಟಗೇರಿ ಪೌರ ಕರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.

ಈ ದಿನ.ಕಾಮ್ ಜತೆಗೆ ಹೆಸರು ಹೇಳದ ಮಹಿಳಾ ಪೌರಕಾರ್ಮಿಕರು ಮಾತನಾಡಿ, “ನಾವು ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಸ್ವಚ್ಚತೆ ಕೆಲಸ ಮಾಡ್ತೀವಿ. ಬಿಸಿಲು, ಗಾಳಿ, ಮಳೆ ಬಂದಾಗ ಕಾಂಪೌಂಡ್ ಗೋಡೆಯೋ, ಮರ-ಗಿಡಗಳ ಕೆಳಗೊ, ಆಶ್ರಯ ಪಡೆಯುತ್ತೇವೆ. ರಸ್ತೆ ಬದಿಯಲ್ಲಿಯ ಮನೆಗಳಲ್ಲಿ ಕುಡಿಯಲು ನೀರು ಕೇಳಿದರೆ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ನಗದಲ್ಲಿ ಶೌಚಕ್ಕೆ ಹೋಗಲು ಬಹಳ ಕಷ್ಟ ಆಗುತ್ತದೆ. ಇದೆಲ್ಲವನ್ನೂ ಮನಗಂಡು ಸರ್ಕಾರ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಿದರೆ ಎಷ್ಟೋ ಅನುಕೂಲ ಆಗಲಿದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ‘ಡೀಪ್‌ಸ್ಟೇಟ್'(Deep State) ಭಾರತದಲ್ಲೂ ಇದೆಯೇ? ಇರುವುದಾದರೆ ಅದೇನು?
ನಗರಗಳಲ್ಲಿ ಎಲ್ಲೆಂದರಲ್ಲಿ ಬೇಡವಾದ ಕಸ, ತ್ಯಾಜ್ಯ, ಗಬ್ಬುನಾತ ಬೀರುವ ಗಟಾರಗಗಳನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ಇಲ್ಲದ ದಿನ ನಗರ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳದಷ್ಟು, ಹೊಲಸಾಗಿರುತ್ತದೆ. ಅಂತಹ ಗಬ್ಬುನಾತ ಬೀರುವ ಕಸವನ್ನು ಸ್ವಚ್ಛಗೊಳಿಸಿ, ನಗರವನ್ನು ಸುಂದರಗೊಳಿಸುವ ಪೌರಕಾರ್ಮಿಕರು ಕೆಲಸದ ವೇಳೆ ಅವರಿಗೆ ಗೌರವಯುತವಾಗಿ ವಿಶ್ರಾಂತಿ ಪಡೆಯಲು ವಿಶ್ರಾಂತಿ ಗೃಹಗಳ ಅಗತ್ಯವಿದೆ. ಹಾಗಾಗಿ ಈ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಪೌರಕಾರ್ಮಿಕರ ಮೇಲೂ ಗೌರವ, ಕಾಳಜಿ ತೋರುವರೇ ಎಂಬುದನ್ನು ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



