ಹಳಿಯಾಳ: ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತರಾಗದೆ ಗ್ರಾಮಗಳಿಗೆ ತೆರಳಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಳೆ ಹಾಗೂ ಬೆಳೆ ಪರಿಸ್ಥಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ. ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರನ್ನು ಗೌರವದಿಂದ ನಡೆಸಿಕೊಂಡು ಅವರ ಅಹವಾಲುಗಳನ್ನು ಆಲಿಸಿ, ಕಾನೂನುಬದ್ಧವಾಗಿ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಲಭ್ಯವಿರಬೇಕು. ಗ್ರಾಮಗಳಲ್ಲಿ ಮೂಲಸೌಕರ್ಯ ಸಮಸ್ಯೆ ಎದುರಾದಾಗ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ ? ದಾಂಡೇಲಿ | ರೀಲ್ಸ್ಗಾಗಿ ಅಪಾಯಕಾರಿ ವಾಹನ ಚಾಲನೆ; ತೂಫಾನ್ ಕ್ರೂಸರ್ ಚಾಲಕನ ವಿರುದ್ಧ ಪ್ರಕರಣ ದಾಖಲು
ಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ತಾಲ್ಲೂಕಿನಲ್ಲಿ ಈವರೆಗೆ 605 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 310 ಮಿ.ಮೀ. ಮಳೆಯಾಗಿದೆ. ಇದರಿಂದ ಸುಮಾರು ಶೇ.49ರಷ್ಟು ಮಳೆಯ ಕೊರತೆ ದಾಖಲಾಗಿದೆ. ಕಬ್ಬು ಬೆಳೆಯ ಸುಮಾರು 12,100 ಹೆಕ್ಟೇರ್ ಪ್ರದೇಶದಲ್ಲಿ ಮಳೆ ಕೊರತೆಯ ಪರಿಣಾಮ ಕಂಡುಬಂದಿದೆ. ಕೆಲವೆಡೆ ರಸ ಹೀರುವ ಕೀಟಗಳ ಹಾವಳಿ ಕಂಡುಬಂದಿದ್ದು, ಅವುಗಳ ನಿಯಂತ್ರಣಕ್ಕಾಗಿ 35ರಿಂದ 40 ಎಕರೆ ಪ್ರದೇಶದಲ್ಲಿ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ನಡೆಸಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಪಿ.ಐ. ಮಾನೆ ಮಾಹಿತಿ ನೀಡಿದರು.
ಬೆಳೆ ವಿಮೆಗೆ ಸಂಬಂಧಿಸಿದಂತೆ ಗೋಂಜಾಳ ಬೆಳೆಗೆ ಪ್ರೀಮಿಯಂ ಪಾವತಿಸಲು ಜುಲೈ 31 ಕೊನೆಯ ದಿನವಾಗಿದ್ದು, ಭತ್ತ ಬೆಳೆಗೆ ಆಗಸ್ಟ್ 14 ಅಂತಿಮ ದಿನಾಂಕವಾಗಿದೆ ಎಂದು ತಿಳಿಸಲಾಯಿತು. ಮಳೆ ಹಾಗೂ ಗಾಳಿಯಿಂದ ತಾಲ್ಲೂಕಿನ ವಿವಿಧೆಡೆ ಸುಮಾರು 165 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಅವುಗಳ ದುರಸ್ತಿ ಹಾಗೂ ಮರುಸ್ಥಾಪನೆ ಕಾರ್ಯ ಪೂರ್ಣಗೊಳಿಸಲಾಗಿದೆ. ಶಾಲೆಗಳು ಹಾಗೂ ಅಂಗನವಾಡಿಗಳ ಸಮೀಪ ಅಪಾಯಕಾರಿಯಾಗಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯ ವೇಳೆ ಅರಣ್ಯದಂಚಿನ ನಿವಾಸಿಯೊಬ್ಬರ ಮನೆ ಸಮೀಪದ ಮರ ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಲಂಚ ಕೇಳಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ, ಸಂಬಂಧಿತ ಅಧಿಕಾರಿಯನ್ನು ಶಾಸಕ ದೇಶಪಾಂಡೆ ತರಾಟೆಗೆ ತೆಗೆದುಕೊಂಡರು. ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳಿಂದ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟೆ, ದಾಂಡೇಲಿಯ ಶೈಲೇಶ್ ಪರಮಾನಂದ, ಜೋಯಿಡಾದ ಬಸವರಾಜ ಮುನವಳ್ಳಿ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.





