ಸಕಲೇಶಪುರ: ಆತ್ಮಹತ್ಯೆಗೆ ಯತ್ನಿಸಿ ಹೇಮಾವತಿ ಸೇತುವೆಯಿಂದ ನದಿಗೆ ಹಾರಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ತಾಲೂಕು ಆಡಳಿತ ಹಾಗೂ ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಜೀವಂತವಾಗಿ ರಕ್ಷಿಸಿರುವ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಹಾಸನ ಮೂಲದ ಚಿರಂತ್ (38) ಎಂಬುವರು ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಳಲಿ ಬೈಪಾಸ್ ಸಮೀಪದ ಹೇಮಾವತಿ ಸೇತುವೆಯಿಂದ ಇಂದು ಸಂಜೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ನದಿಯ ಮಧ್ಯಭಾಗದಲ್ಲಿ ಸಿಲುಕಿದ್ದ ಚಿರಂತ್ ಅವರನ್ನು ಗುರುತಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಓಬಿಎಂ (Outboard Motor) ಬೋಟ್ ಹಾಗೂ ಅಗತ್ಯ ರಕ್ಷಣಾ ಉಪಕರಣಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ, ಅವರನ್ನು ಸುರಕ್ಷಿತವಾಗಿ ಜೀವಂತವಾಗಿ ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದರು.
ಘಟನೆ ವೇಳೆ ತಾಲೂಕು ಆಡಳಿತದ ಅಧಿಕಾರಿಗಳೂ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡಿದರು.
ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿದ್ದೀರಾ?ಬಾಬಾ ಬುಡನ್‌ಗಿರಿ | ಸಂಘಪರಿವಾರ ಇತಿಹಾಸ ತಿರುಚುವ ಪ್ರಯತ್ನ : ಸೈಯದ್ ಫಕ್ರುದ್ದೀನ್ ಶಾ ಖಾದ್ರಿ
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಶಫೀಕ್ ತಹಶೀಲ್ದಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಮದ್ ಇಸಾಕ್, ರಾಜೇಶ್, ನವೀನ್ ಕುಮಾರ್, ಶಿವಕುಮಾರ್, ಪ್ರೀತಂ ಹಾಗೂ ಸಿದ್ದುಲಿಂಗ ಭಾಗವಹಿಸಿದ್ದರು.




