ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) 36ನೇ ರಾಷ್ಟ್ರ ಸಮ್ಮೇಳನವು ತೆಲಂಗಾಣ ರಾಜ್ಯದ ನಲ್ಗೊಂಡಾದಲ್ಲಿ 2026 ನವೆಂಬರ್ 15 ರಿಂದ 18 ರವರೆಗೆ ನಡೆಯಲಿದೆ. ರಾಜ್ಯದಿಂದ 28 ರೈತ ಮುಖಂಡರು ಪ್ರತಿನಿಧಿಗಳಾಗಿ ಭಾಗವಹಿಸುತ್ತಿದ್ದಾರೆ. ಹಾಸನ ಜಿಲ್ಲೆಯಿಂದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಹಣಕಾಸು ಕಾರ್ಯದರ್ಶಿ ಮತ್ತು ಹಾಸನ ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್.ಆರ್. ನವೀನ್‌ಕುಮಾರ್ ಭಾಗವಹಿಸುತ್ತಿದ್ದಾರೆ.
ಎಐಕೆಎಸ್ ಸ್ಥಾಪನೆಯಾಗಿ 90 ವರ್ಷ ಪೂರ್ಣವಾಗುತ್ತಿರುವ ಹಾಗೂ ಐತಿಹಾಸಿಕ ತೆಲಂಗಾಣ ಸಶಸ್ತç ರೈತ ಹೋರಾಟಕ್ಕೆ 80 ವರ್ಷ ಪೂರೈಸಿದ ಸಂದರ್ಭದಲ್ಲೇ, ತೆಲಂಗಾಣ ಸಶಸ್ತç ರೈತ ಹೋರಾಟದ ಕೇಂದ್ರವಾಗಿದ್ದ ನಲ್ಗೊಂಡಾದಲ್ಲಿ ಅಖಿಲ ಭಾರತ ಸಮ್ಮೇಳನವನ್ನು ಸಂಘಟಿಸಲಾಗಿದೆ. ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ರಾಜ್ಯಾಧ್ಯಕ್ಷ ಯು ಬಸವರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ, ರಾಜ್ಯ ಹಣಕಾಸು ಕಾರ್ಯದರ್ಶಿ ಹೆಚ್.ಆರ್.ನವೀನ್‌ಕುಮಾರ್ ಸೇರಿದಂತೆ ಇಪ್ಪತ್ತು ನಾಲ್ಕು ಪ್ರತಿನಿಧಿಗಳು ಹಾಗೂ ನಾಲ್ಕು ವೀಕ್ಷಕರು ಕರ್ನಾಟಕ ರಾಜ್ಯವನ್ನು ಅಖಿಲ ಭಾರತ ಸಮ್ಮೇಳನದಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಕೋಲಾರ, ತುಮಕೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅರಣ್ಯ ಇಂಡೀಕರಣದ ಮೂಲಕ ಹಿಡುವಳಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ದೌರ್ಜನ್ಯಗಳು, ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ನಡೆಸಿರುವ ಮೂವರು ರೈತರ ಸರ್ಕಾರಿ ಹತ್ಯೆ, ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಜಾರಿ ಮಾಡದೇ ರೈತರ ಮೇಲೆ ನಡೆಸುತ್ತಿರುವ ನೈಸ್ ಕಂಪನಿಯ ಪೈಶಾಚಿಕ ದೌರ್ಜನ್ಯ, ಬಿಡದಿ ಟೌನ್ ಶಿಪ್‌ಗಾಗಿ ನೀರಾವರಿ ಬಹುವಾರ್ಷಿಕ ಬೆಳೆಗಳ ಭೂಮಿಯನ್ನು ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ, ಬಗರ್ ಹುಕಂ ಸಾಗುವಳಿ ರೈತರ ಸಕ್ರಮ ಕೋರಿರುವ ಸಹಸ್ರಾರು ಅರ್ಜಿಗಳನ್ನು ದರಖಾಸ್ ಕಮಿಟಿ ಮುಂದೆ ತರದೇ ಜಿಲ್ಲಾಧಿಕಾರಿಗಳ ಹಂತದಲ್ಲೇ ಕಾನೂನುಬಾಹಿರವಾಗಿ ವಜಾ ಮಾಡಿರುವುದು, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ನಿರಾಕರಣೆ, ರಾಜ್ಯದ ಸಹಕಾರಿ ಹೈನುಗಾರಿಕೆ ಮಾರುಕಟ್ಟೆಗೆ ಬಂದಿರುವ ಆಪಾಯ, ಕೇಂದ್ರ ಸರ್ಕಾರದ ಆಮೇರಿಕಾ ಮುಂತಾದ ದೇಶಗಳ ಜೊತೆಗಿನ ಮುಕ್ತ ಆಮದು ಒಪ್ಪಂದಗಳಿಂದಾಗಿ ರಾಜ್ಯದಲ್ಲಿ ಉಂಟಾಗುವ ದುಷ್ಪರಿಣಾಮಗಳು, ಕಸ್ತೂರಿ ರಂಗನ್ ವರದಿ ಜಾರಿಯ ಪರಿಣಾಮ ಮುಂತಾದವುಗಳು ಸೇರಿದಂತೆ ರಾಜ್ಯದ ಕೃಷಿ ಹಾಗೂ ರೈತರ ಪರಿಸ್ಥಿತಿಯನ್ನು ಚರ್ಚಿಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ತಿಳಿಸುತ್ತದೆ.
ನವೆಂಬರ್ 15 ರಂದು ನಲ್ಗೊಂಡಾದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ ನಲ್ಗೊಂಡಾ ಕಾಲೇಜು ಮೈದಾನದಲ್ಲಿ ನಡೆಯಲಿದ್ದು ಹಿರಿಯ ಕಮ್ಯುನಿಸ್ಟ್ ನಾಯಕಿ ಬೃಂದಾ ಕಾರಟ್, ಎಐಕೆಎಸ್ ಅಧ್ಯಕ್ಷ ಡಾ.ಅಶೋಕ್ ಧವಳೆ, ಪ್ರಧಾನ ಕಾರ್ಯದರ್ಶಿ ಡಾ.ವಿಜು ಕೃಷ್ಣನ್ ಸೇರಿದಂತೆ ಹಲವಾರು ರಾಷ್ಟ್ರೀಯ ರೈತ ನಾಯಕರು ಬಹಿರಂಗ ಸಭೆಯಲ್ಲಿ ಮಾತಾನಾಡಲಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ನ.16ರಂದು ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ
ನವೆಂಬರ್ 16 ರಿಂದ 18 ರವರೆಗೆ ದೇಶದಾದ್ಯಂತ ಆಗಮಿಸುವ ಸುಮಾರು 800 ಕ್ಕೂ ಹೆಚ್ಚು ರೈತ ಮುಖಂಡರು ದೇಶದ ಕಾರ್ಷಿಕ ಪರಿಸ್ಥಿತಿ, ನವ ಉದಾರೀಕರಣ ನೀತಿಗಳಿಂದಾಗಿ ಉಂಟಾಗಿರುವ ರೈತರ ಬದುಕಿನ ಸಮಸ್ಯೆ ಹಾಗೂ ಸವಾಲುಗಳು, ಕಳೆದ ನಾಲ್ಕು ವರ್ಷಗಳ ಹೋರಾಟ ಹಾಗೂ ಚಳವಳಿಗಳು, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆಯ ಸವಾಲುಗಳು, ಪ್ಯಾಸಿಸಂನ ಆಪಾಯವನ್ನು ಎದುರಿಸುವ ಕುರಿತು ವಿವರವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಮಾರ್ಗಗಳನ್ನು ರೂಪಿಸಿಕೊಳ್ಳುವ ಮಹತ್ವದ ಸಮ್ಮೇಳನವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.



