ಗುಡಿಸಲುಗಳ ಸುತ್ತ ಕಣ್ಣಾಡಿಸಿದರೆ, ಹರಿದು ಹೋದ ಸೀರೆ, ಪ್ಲಾಸ್ಟಿಕ್ ಹಾಳೆ ಹೊದಿಕೆಯ ಛಾವಣಿ, ಪಕ್ಕದಲ್ಲಿ ಕೊಳಚೆ ನೀರು, ವಿಷಪೂರಿತ ಹುಳ ಹುಪ್ಪಡಿ, ತೂತು ಬಿದ್ದ ಪಾತ್ರೆ, ಹರಿದು ಹೋದ ಬಟ್ಟೆ, ಮಾರಾಟಕ್ಕೆ ತಂದ ಪ್ಲ್ಯಾಸ್ಟಿಕ್‌ನಲ್ಲಿ ತುಂಬಿದ ಬಾಟಲಿಗಳು, ಗುಡಿಸಲುಗಳ ಬಾಗಿಲು ಇಣುಕಿದರೆ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಜೀವಗಳು, ಅಂಗಳದಲ್ಲಿ ಸಣ್ಣ ಮಕ್ಕಳ ಕೆದರಿದ ಕೂದಲು, ಮೈಯಲ್ಲಿ ಬಟ್ಟೆ ಇಲ್ಲದೆ, ಮಣ್ಣ ಮೆತ್ತಿಕೊಂಡು, ಅವ್ವನ ಅಪ್ಪನ ಬರುವಿಕೆಯನ್ನೇ ನೋಡುತ್ತ, ಅಳುತ್ತ, ದುಃಖದ ಮಡುವಿನಲ್ಲಿ ಕಾಯುತ್ತಿರುವ ದೃಶ್ಯ ಅವರ ಬದುಕಿನ ಚಿತ್ರಣದ ತಲ್ಲಣಗಳು ಒಂದೊಂದು ಎಳೆ ಎಳೆಯಾಗಿ ಬಿಚ್ಚುಕೊಳ್ಳುತ್ತವೆ.
ಹಾವೇರಿ ಜಿಲ್ಲೆಯ ನಾಗೇಂದ್ರಮಟ್ಟಿ ಹತ್ತಿರದ ಶಾಂತಿ ನಗರದ ಬಯಲು ಜಾಗದಲ್ಲಿ ಗುಡಿಸಲು ಶೆಡ್ ನಿರ್ಮಿಸಿಕೊಂಡು ಬದುಕುತ್ತಿರುವ ಸುಡುಗಾಡು ಸಿದ್ದರ ಬದುಕಿನ ವ್ಯಥೆಯ ಕಥೆಯಿದು. ಇಷ್ಟೆಲ್ಲದರ ನಡುವೆಯೂ ಬದುಕು ಕಟ್ಟಿಕೊಳ್ಳಲು ಒಂದು ಸೂರು ಇಲ್ಲ.
ಈ ಸುಡುಗಾಡು ಸಿದ್ದರ 33 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದಾಗಿ ಹೇಳಿ ಈ ಜಾಗದಲ್ಲಿ ಜಿ+1 ಮನೆಗಳನ್ನು ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿ, ಮೂರು ವರ್ಷಗಳ ಹಿಂದೆಯೇ ಗುಡಿಸಲುಗಳನ್ನು ತೆರವುಗೊಳಿಸಲಾಗಿತ್ತು. ಖಾಸಗಿ ಮಾಲೀಕರ ಬಯಲು ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು, ಮುಂದೊಂದು ದಿನ ಸ್ವಂತ ಸೂರು ಸಿಗಬಹುದೆಂಬ ಆಸೆಗಣ್ಣಿನಲ್ಲಿ ಕಾಯುತ್ತಿದ್ದಾರೆ.
ಶಾಂತಿನಗರದಲ್ಲಿ ರಾಜೀವಗಾಂಧಿ ವಸತಿ ನಿಗಮದಿಂದ ಜಿ+1 ಮಾದರಿಯಲ್ಲಿ 480 ಮನೆಗಳನ್ನು ನಿರ್ಮಿಸಲು ಉದ್ದೇಶಿಸಿ ಕಾಮಗಾರಿ ಆರಂಭಿಸಲಾದೆ. ಇವುಗಳಲ್ಲೇ ಸುಡಗಾಡು ಸಿದ್ದರ 33 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಈವರೆಗೂ ಕಾಮಗಾರಿ ಮುಗಿದಿಲ್ಲ. ನಾನಾ ಕಾರಣಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.
ಕಾಮಗಾರಿ ಸ್ಥಳದಲ್ಲಿ ಸಾಲಾಗಿ ಜಿ+1 ಮನೆಗಳನ್ನು ನಿರ್ಮಿಸಲಾಗಿದ್ದು, ಸಿಮೆಂಟ್ ಕಾರ್ಯ ನಡೆದಿದೆ. ಕೆಲವು ಮನೆಗಳ ಸಿಮೆಂಟ್ ಕೆಲಸ ನಡೆದಿದೆ. ಇನ್ನೂ ಕೆಲ ಮನೆಗಳ ಸಿಮೆಂಟ್ ಕೆಲಸ ಮುಗಿದಿದ್ದು, ಬಣ್ಣ ಹಚ್ಚಲಾಗುತ್ತದೆ. ಆದರೆ ಸ್ಥಳೀಯ ಅಧಿಕಾರಿಗಳ ಇಚ್ಚಾಸಕ್ತಿ ಕೊರತೆಯಿಂದ ಇನ್ನೂ ಸುಡುಗಾಡು ಸಿದ್ದರ ಕುಟುಂಬಗಳು ಹರಿದ ಸೀರೆ, ಪ್ಲ್ಯಾಸ್ಟಿಕ್ ಹೊದಿಕೆ, ಹರಕು ಮುರುಕು ಗುಡಿಸಲುಗಳಲ್ಲಿಯೇ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.

ಫಲಾನುಭವಿಗಳು ತುಂಬಬೇಕಾದ ಹಣ ನಿಗಮ ಭರಿಸಿತು; ಬಯಲು ಪ್ರದೇಶದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಸುಮಾರು ವರ್ಷಗಳಿಂದ ವಾಸವಿದ್ದ ಸುಡುಗಾಡು ಸಿದ್ದರ 33 ಫಲಾನುಭವಿ ಕುಟುಂಬಗಳಿಗೆ ಜಿ+1 ಮನೆಗಳನ್ನು ಹಸ್ತಾಂತರಿಸಲು ತಲಾ ಒಂದೊಂದು ಕುಟುಂಬದಿಂದ ₹ 1 ಲಕ್ಷ ನಗದು ಹಾಗೂ ಬ್ಯಾಂಕ್ ಸಾಲದಿಂದ ₹ 2.20 ಲಕ್ಷ ಸಂಗ್ರಹಿಸಲು ತಿರ್ಮಾನಿಸಲಾಗಿತ್ತು. ಆದರೆ ₹1 ಲಕ್ಷ ಕಟ್ಟಲು ಆಗದ ಸ್ಥಿತಿಯಲ್ಲಿದ್ದ ಫಲಾನುಭವಿಗಳಿಗೆ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ದಿ ನಿಗಮ, ಫಲಾನುಭವಿಗಳ ಪರವಾಗಿ ₹33 ಲಕ್ಷ ಹಣ ಈಗಾಗಲೇ ಕೊಡಲಾಗಿದೆ.
ಈ ದಿನ.ಕಾಮ್ ಜತೆಗೆ ಸುಡುಗಾಡು ಸಿದ್ದರು ಸಮುದಾಯದ ರಮೇಶ ಬಾದಗಿ ಮಾತನಾಡಿ, “ನಾವು ಸುಡುಗಾಡು ಸಿದ್ದರು, ಮೂವತ್ತು ವರ್ಷಗಳಿಂದ ಹಾವೇರಿಯಲ್ಲಿಯೇ ಇದ್ದಿದ್ದು. ದಾನೇಶ್ವರ ನಗರದಲ್ಲಿ ಗುಡಿಸಲು ಹಾಕ್ಕೊಂಡು ಇದ್ವಿ, ಬಿಜೆಪಿ ಸರ್ಕಾರದಿಂದ ಇಂದಿನವರೆಗೂ ಹೋರಾಟ ಮಾಡ್ಕಂಡು ಬಂದಿದ್ದೀವಿ ಇವತ್ತಿಗೂ ಏನೂ ಸಿಕ್ಕಿಲ್ಲ. ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಎಲ್ಲ ಅಧಿಕಾರಿಗಳಿಗೂ ಮನವಿ ಕೊಟ್ಟಿದ್ದೀವಿ. ಆದರೆ ಮನೆಗಳನ್ನು ಇನ್ನೂ ಕೊಟ್ಟಿಲ್ಲ. ಆರು ವರ್ಷಗಳ ಹಿಂದೆ ಈ ಶಾಂತಿನಗರದ ಇದೇ ಜಾಗದಲ್ಲಿ ಇದ್ವಿ. ಇಲ್ಲಿಗೆ ಜಿಲ್ಲಾಧಿಕಾರಿಗಳು, ಎಂಎಲ್ಎ ಅವರು ಬಂದು ಈ ಜಾಗದಾಗ ನಿಮಗ ಮನಿ ಕಟ್ಟಿಸಿ ಕೊಡ್ತಿವಿ, ಇಲ್ಲಿಂದ ಜಾಗ ಖಾಲಿ ಮಾಡಿ ಅಂದ್ರು. ಅವಾಗ ಜಾಗ ಖಾಲಿ ಮಾಡಿ ಖಾಸಗಿ ಮಾಲೀಕರ ಜಾಗದಾಗ ಗುಡಿಸಲು ಹಾಕ್ಕೊಂಡು ಬದಕ್ತಿದ್ದೀವಿ. ನಮ್ಮವರು ಎಷ್ಟೋ ಮಂದಿ ಗಾಳಿ ಮಳೆಗೆ, ಹಾವು, ಹುಳ ಕಡಿದು ಸತ್ರೂ ಕೂಡ ಯಾರೂ ಕೇಳ್ಳಿಲ್ಲ” ಎಂದು ತಮ್ಮ ಅಳಲನ್ನು ತೊಡಿಕೊಂಡರು.
“ಒಂದು ವರ್ಷದಿಂದ 33 ಮನೆಗಳು ಸಾಂಕ್ಷನ್ ಆಗ್ಯಾವ. ಒಬ್ಬೊಬ್ಬರು ಒಂದೊಂದು ಲಕ್ಷ ಕಟ್ರಿ, ಮೇ ಅನ್ನವುದರೊಳಗೆ ಮನೆಯೊಳಗೆ ನಿಮ್ಮನ್ನೆಲ್ಲ ಸೇರಿಸ್ತಿವಿ ಅಂತ ಜಿಲ್ಲಾಧಿಕಾರಿಗಳು ಹೇಳಿದ್ದರು. ನಮಗೆ ಹಣ ಕಟ್ಟೋಕೆ ಆಗದ ಪರಿಸ್ಥಿತಿಯಲ್ಲಿ ಇದ್ದಾಗ, ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ದಿ ನಿಗಮದಿಂದ ಒಬ್ಬೊಬ್ಬರಿಗೆ ಒಂದೊಂದು ಲಕ್ಷ ರೂಪಾಯಿಯಂತೆ ₹33 ಲಕ್ಷ ಕಟ್ಟಿ ಒಂದು ವರ್ಷ ಆದ್ರೂ ನಮ್ಗ ಮನಿ ಕೊಟ್ಟಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಹ್ವಾದ ವರ್ಷ ಮಳೆ ಗಾಳಿಗೆ ತಾಡಪಲ್ ಕೊಟ್ಟಿದ್ರು. ಈ ತಾಡಪಲ್‌ನಲ್ಲೇ ಮಳಿ, ಗಾಳ್ಯಾಗ ಜೀವನ ಸಾಗಿಸ್ತಿದ್ದೀವಿ. ದುಡಿಯಾಕಂತ ಊರೂರು ತಿರುಗ್ತಿವಿ. ಸಣ್ಣ ಸಣ್ಣ ಮಕ್ಳು ಗುಡಿಸ್ಲಾಗ ಇರ್ತಾವ. ಮಳಿ ಗಾಳಿ ಬಂದ್ರ ನಮ್ಮ ಮಕ್ಳುಮರಿ ಹ್ಯಾಂಗದರ ಅಂತ ಭಯ ಆಗುತ್ತೆ ರೀ.. ಅವರನ್ನ ನೋಡೋರಿಲ್ಲ.. ಈಗ ಮನಿ ಕಟ್ಟಡ ಆಗ್ಯಾವರೀ ಕೊಡ್ತೀವಿ ಅಂತ ಹೇಳ್ತಾರ ಇನ್ನೂಮಟ ಕೊಟ್ಟಿಲ್ಲ. ಇನ್ನೂ ಇಪ್ಪತ್ತು ಸಾವಿರ ಕಟ್ಟ್ರಿ ಅಂದಾರ. ಲೋನ್ ಮಾಡಿಸಿ ಕೊಟ್ರ, ದುಡಿದು… ತಿಂಗಳ ತಿಂಗಳ ಅದನ್ನು ಕಟ್ಗೊಂಡು ಹೋಗ್ತಿವಿ. ನಮಗ ಲಗೂನ ಮನಿ ಕೊಟ್ರ ಹೆಂಡ್ರು, ಮಕ್ಳು ಮನೇಲಿ ಇರ್ತಿವಿ” ಎಂದು ರಮೇಶ ಬಾದಗಿ ತಮ್ಮ ನೋವನ್ನು ಹಂಚಿಕೊಂಡರು.

ಅಲೆಮಾರಿ ಸಮುದಾಯದ ಜಿಲ್ಲಾಧ್ಯಕ್ಷ ಈ ದಿನ.ಕಾಮ್ ಜತೆಗೆ ಮಾತನಾಡಿ, “ಸುಡುಗಾಡು ಸಿದ್ದರ 33 ಕುಟುಂಬಗಳಿಗೆ ನಿವೇಶನಗಳು ಆಗಿದ್ದು, ದುಡಿದು ತಿನ್ನುವುದೇ ಕಷ್ಟ ಆಗಿರುವಾಗ ಒಂದು ಲಕ್ಷ ಎಲ್ಲಿಂದ ತಂದು ಕಟ್ಟೋಕಾಗುತ್ತೆ. ನಮಗೆ ಆಗದಿದ್ದಾಗ ಅಲೆಮಾರಿ ಅಭಿವೃದ್ದಿ ನಿಗಮಕ್ಕೆ ಮನವಿ ಮಾಡಿದಾಗ ಒಂದೊಂದು ಕುಟುಂಬಕ್ಕೆ, ಒಂದೊಂದು ಲಕ್ಷದಂತೆ ಮೂವತ್ಮೂರು ಲಕ್ಷ ರೂಪಾಯಿ ನಿಗಮ ಕಟ್ಟಿತು. ಆದರೆ ಈವರೆಗೂ ಮನೆ ಕೊಟ್ಟಿಲ್ಲ.ಈ ಮನೆ ಕಟ್ಟಡ ಕಾಮಗಾರಿ ಕೆಲವು ಮುಗಿದಿವೆ. ಮನೆಗಳು ಸಿಗುವ ಆಶಾಭಾವ ಹೊಂದಿದ್ದೇವೆ. ಆದರೆ ಯಾವಾಗ ಸಿಗುತ್ತವೆ ಎಂಬುದು ಗೊತ್ತಿಲ್ಲ. ಗಾಳಿ ಮಳೆ ಚಾಲು ಆಗಿದೆ. ನಮ್ಮ ಪರಿಸ್ಥಿತಿಯನ್ನು ಅಧಿಕಾರಿಗಳು ಅರ್ಥಮಾಡಿಕೊಂಡು ಆದಷ್ಟು ಬೇಗ ಮನೆಗಳನ್ನು ನಮ್ಮ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಹಸ್ತಾಂತರಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿದ್ದೀರಾ? ಮೈಸೂರು | ಕನ್ನಡ ಶಾಲೆಗಳ ಉಳಿವಿಗೆ ಉದ್ಯೋಗ ಮೀಸಲಾತಿ ಅಗತ್ಯ: ಕೊಟ್ರೇಶ್ ಎಸ್. ಉಪ್ಪಾರ್
ಬದುಕು ಎಂಬುದು ಕೇವಲ ಗುಡಿಸಲಲ್ಲಿ ಕಳೆಯುವುದಾಗದೆ, ಎಲ್ಲರಿಗೂ ಸಮಾನವಾದ ಅವಕಾಶಗಳ ಆಕಾಶವಾಗಬೇಕು. ಆ ಆಕಾಶದ ಕೆಳಗೆ, ಈ ಗುಡಿಸಲುಗಳ ನೆರಳು ಕರಗುವಂತಾಗಬೇಕು. ಅಲ್ಲಿಯ ಮಕ್ಕಳ ಕಣ್ಣುಗಳಲ್ಲಿ ಹಸಿವಿನ ಬದಲು ಕನಸುಗಳು, ಹಿರಿಯರ ಮೊಗದಲ್ಲಿ ನೋವಿನ ಬದಲು ನೆಮ್ಮದಿಯ ನಿಟ್ಟುಸಿರು ಕಾಣುವಂತಾಗಬೇಕು….

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



