ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಒಂದೆ
ಒಂದೆ ಹೂ
ಒಂದೆ ಅಗ್ಘವಣೆ
ಒಂದೆ ಓಗರ
ಒಂದೆ ಪ್ರಸಾದ
ಒಂದೆ ಮನ
ಒಂದೆ ಲಿಂಗ!
ನಂದಾದೀವಿಗೆ ಕುಂದದ ಬೆಳಗು
ಸ್ವತಂತ್ರ ಪೂಜೆ ಒಂದೆ!
ಶರಣಸ್ಥಲ ಅನಾಹತವೆರೆಡಾಗಿ ಬರುಮುಖರಾಗಿ ಕೆಟ್ಟುಹೋದರು
ಗುಹೇಶ್ವರಾ
ಪದಾರ್ಥ:
ಅಗ್ಘವಣೆ = ಅಭಿಷೇಕದ ಜಲ
ಓಗರ = ಅರ್ಪಿಸುವಂತದ್ದು
ಅನಾಹತವು = ಅಖಂಡವಾದ ಭಾವ
ಬರುಮುಖರಾಗಿ= ಅಪ್ರಯೋಜಕರಾಗಿ
ವಚನಾರ್ಥ:
ಒಂದೆ ಹೂ, ಒಂದೆ ಜಲ, ಒಂದೆ ನೈವೇದ್ಯ, ಒಂದೆ ಪ್ರಸಾದ, ಒಂದೆ ಮನಸ್ಸು, ಒಂದೆ ದೈವ! ನಂದಾ ದೀಪದ ಬೆಳಗು ಕೂಡಾ ಒಂದೆ. ಇಂಥ ಸನ್ನಿವೇಶದಲ್ಲಿ ಪೂಜೆಗೆ ಕುಳಿತ ಶರಣನಲ್ಲೂ ಏಕೋಭಾವ. ತಾನು ಮತ್ತು ದೈವ ಭಿನ್ನವಲ್ಲ ಎಂಬ ಅನನ್ಯ ಅಚಲ ಒಂದೆ ಭಾವ. ಇದುವೇ ಅದ್ವೈತ. ಪೂಜಾ ಪರಿಕರಗಳು ಒಂದೇ ಅವುಗಳ ಉದ್ದೇಶ ಒಂದೇ. ಪೂಜಿಸುವ ಮನ ಒಂದೆ. ಆದ್ದರಿಂದ ಶರಣ ಬದುಕು ಸಾರ್ಥಕ ಬದುಕು. ಆದರೆ ಶರಣನಲ್ಲದ ಲೌಕಿಕರ ಚಿಂತನೆಯೇ ಬೇರೆ. ಅವರ ದೃಷ್ಟಿಯಲ್ಲಿ ಒಂದು ಎರಡಾಗುತ್ತದೆ. ಎರಡು ಹಲವು ಕವಲುಗಳಾಗುತ್ತವೆ. ಏಕೋಭಾವವಳಿದು ಅನ್ಯಭಾವ ತಲೆದೋರುತ್ತದೆ. ಪೂಜೆಗೊಳ್ಳುವ ದೇವನಿಂದ ಅವರು ಸದಾ ಭಿನ್ನರಾಗಿಯೇ ಉಳಿಯುತ್ತಾರೆ. ಅಖಂಡವಾದ ಭಾವ ಖಂಡ ತುಂಡವಾಗಿ ಬರುಮುಖರಾಗಿ ಅಂದರೆ ಅಪ್ರಯೋಜಕರಾಗಿ ದೈವಕ್ಕೆ ದೂರಾಗುತ್ತಾರೆ. ಅದ್ವೈತವಳಿದು ದ್ವಂದ್ವವುಳಿದು ಭವಬಂಧನಕ್ಕೆ ಕಾರಣವಾಗುತ್ತದೆ.
ಪದಪ್ರಯೋಗಾರ್ಥ:
ಒಂದೆ ಎಂಬ ಸಂಖ್ಯಾ ಸೂಚಕ ಪದ ಈ ವಚನದಲ್ಲಿ ಏಳು ಬಾರಿ ಬಳಕೆಯಾಗಿದೆ ಎನ್ನುವುದೇ ಇಲ್ಲಿನ ವಿಶೇಷ. ಒಂದು ಎಂಬ ಪದಸಂಖ್ಯೆಯನ್ನು ಏಕತೆಯನ್ನು, ಎರಡು ಎಂಬ ಪದಸಂಖ್ಯೆಯನ್ನು ವಿಭಜನೆಯನ್ನು ಗುರುತಿಸಲು ಬಳಸುವುದು ರೂಢಿ. ಒಂದು ಎಂಬುದನ್ನು ಒಂದೆ ಎಂದು ಮಾರ್ಪಡಿಸಿ ಬಳಸಿದರೆ ಆ ಪದದಲ್ಲಿರುವ ಅರ್ಥದ ತೀವ್ರತೆ ಹೆಚ್ಚಾಗಿ ಕಂಡುಬರುತ್ತದೆ. ಅದು ಒಂದೆ, ಎಂದೆಂದಿಗೂ ಒಂದೆ ಎಂದು ದೃಢವಾಗಿ ಅಂದಂತೆ. ಅಂತಹ ಪದಪ್ರಯೋಗ ಅಲ್ಲಮನ ಈ ವಚನದಲ್ಲಿದೆ. ಬೇಂದ್ರೆಯವರು ಕನ್ನಡ, ಕರ್ನಾಟಕ ಕುರಿತಾಗಿ ಬರೆದಿರುವ ಕವನದಲ್ಲಿ ಇಂತದೇ ಪದಪ್ರಯೋಗ ಮಾಡಿದ್ದಾರೆ.
“ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
ಹಿಂದೆ ಮುಂದೆ ಎಂದೇ ಕರ್ನಾಟಕ ಒಂದೇ
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ.
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ ಒಂದೇ
ಜಗವು ಮನವು ಕನ್ನಡಿಗರು ಎಂದೆ ಕುಲವೊಂದೇ ಚಲವೊಂದೇ
ನೀತಿಯ ನೆಲೆಯೊಂದೇ ಹೀಗೆನ್ನದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ”
ವಚನದ ಕೊನೆಯಲ್ಲಿ ಬರುಮುಖರಾಗಿ ಕೆಟ್ಟುಹೋದರು ಗುಹೇಶ್ವರಾ ಎಂದು ಅಲ್ಲಮ ಹೇಳುವಲ್ಲಿ ಮತ್ತು ಕವನದ ಕೊನೆ ಸಾಲಿನಲ್ಲಿ ಹೀಗೆನ್ನದ ಹೆರವರು ಅವರಿದ್ದರು ಒಂದೇ ಇರದಿದ್ದರೂ ಒಂದೇ ಎಂದು ಬೇಂದ್ರೆ ಹೇಳುವಲ್ಲಿ ಇರುವ ಧ್ವನಿಯಲ್ಲಿ ಸಾಮ್ಯತೆಯಿದೆ. ಅದು ಒಂದೆ!
ಬೇಂದ್ರೆಯವರ “ಒಂದೇ ಒಂದೇ ಒಂದೇ ಕರ್ನಾಟಕ ಒಂದೇ” ಕವನವನ್ನು ಭೀಮಸೇನ ಜೋಶಿಯವರು ತಮ್ಮದೇ ಅನನ್ಯ ಧಾಟಿಯಲ್ಲಿ ಹಾಡಿದ್ದಾರೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



