ಬೆಂಗಳೂರಿನಿಂದ ಗದಗ ನಗರಕ್ಕೆ ಬರುತ್ತಿದ್ದ ಪಲ್ಲಕ್ಕಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಮಂಗಳವಾರ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ದೇವರಗುಡ್ಡದ ಸಮೀಪ ನಡೆದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಆಕಸ್ಮಿಕವಾಗಿ ಸಂಭವಿಸಿದ ಈ ದುರಂತದಲ್ಲಿ ಚಾಲಕನ ಸಮಯೋಚಿತದಿಂದ ದೊಡ್ಡ ಪ್ರಮಾಣದ ದುರ್ಘಟನೆ ತಪ್ಪಿದ್ದು, ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ (KA-57-F6680) ಸಂಖ್ಯೆಯ ಪಲ್ಲಕ್ಕಿ ಬಸ್‌ನಲ್ಲಿ ಸುಮಾರು 17 ಪ್ರಯಾಣಿಕರು ಗದಗ ಕಡೆಗೆ ಪ್ರಯಾಣಿಸುತ್ತಿದ್ದರು. ಬಸ್ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬ್ರೇಕ್ ಲೈನ್‌ನಲ್ಲಿ ಕಿಡಿ ಹೊತ್ತಿಕೊಂಡಿದ್ದು, ಅದು ಕ್ಷಣಕ್ಷಣಕ್ಕೂ ಬೆಂಕಿಯಾಗಿ ವ್ಯಾಪಿಸತೊಡಗಿತು.
ಆರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಬಸ್‌ನ ಹಿಂಭಾಗವನ್ನು ಆವರಿಸಿದ್ದರಿಮದ. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಚಾಲಕ ಫಕ್ಕೀರಪ್ಪ ತಕ್ಷಣ ಬಸ್ ನಿಲ್ಲಿಸಿ, ಯಾವುದೇ ಗಾಬರಿಯಾಗದೆ ಪ್ರಯಾಣಿಕರನ್ನು ಹೊರಗೆ ಬಿಡಲು ಮುಂದಾದರು. ಬಸ್ ಬಾಗಿಲು ಮೂಲಕ ಎಲ್ಲರನ್ನು ಇಳಿಸಲು ಸಮಯ ಸಾಲದ ಕಾರಣ, ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆ ವೇಳೆ ಒಟ್ಟು 17 ಮಂದಿ ಪ್ರಯಾಣಿಕರು ಪಾರಾಗಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇನ್ನೂ ಕೆಲ ನಿಮಿಷ ತಡವಾದರೂ ಬೆಂಕಿ ಸಂಪೂರ್ಣ ಬಸ್ ಅನ್ನು ಆವರಿಸಿ ಭೀಕರ ದುರಂತಕ್ಕೆ ಕಾರಣವಾಗಬಹುದಿತ್ತು. “ಚಾಲಕನ ಧೈರ್ಯ ಮತ್ತು ಸಮಯ್ರಜ್ಞೆ ಹಾಗೂ ಚಾತುರ್ಯದಿಂದಲೇ ನಾವು ಬದುಕಿದ್ದೇವೆ” ಎಂದು ಗದಗ ಪ್ರಯಾಣಿಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.




