ಬಡತನವೆಂಬುದು ಸಾಧನೆಗೆ ಅಡ್ಡಿಯಲ್ಲ, ಬದಲಿಗೆ ಅದೊಂದು ಛಲದ ಕಿಚ್ಚು ಎಂಬುದನ್ನು ಹಾವೇರಿ ಜಿಲ್ಲೆಯ ಈ ಪ್ರತಿಭಾವಂತ ವಿದ್ಯಾರ್ಥಿ ಇಡೀ ರಾಜ್ಯಕ್ಕೆ ಸಾರಿದ್ದಾನೆ. ತಾಯಿಯ ಕಷ್ಟವನ್ನು ಕಣ್ಣಾರೆ ಕಂಡಿದ್ದ ಮಗ, ಇಂದು ದ್ವಿತೀಯ ಪಿಯುಸಿಯಲ್ಲಿ ಅಸಾಮಾನ್ಯ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆ ಎತ್ತಿ ಹಿಡಿದಿದ್ದಾನೆ. ಕೂಲಿ ಕೆಲಸ ಮಾಡುವ ತಾಯಿಯ ಮಗ ಶಿವಕುಮಾರ ಕಮ್ಮಾರ 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 97.83 ಪಡೆದು ಹಾವೇರಿ ಜಿಲ್ಲೆಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಧೂಳಿಕೊಪ್ಪ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಕಲಾ ವಿಭಾಗದ ವಿದ್ಯಾರ್ಥಿಯಾದ ಶಿವಕುಮಾರ ಕಮ್ಮಾರ 600ಕ್ಕೆ 587 ಅಂಕಗಳನ್ನು (ಶೇ. 97.83) ಪಡೆಯುವ ಮೂಲಕ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಇತಿಹಾಸ, ರಾಜ್ಯಶಾಸ್ತ್ರದಂತಹ ವಿಷಯಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆಯುವ ಮೂಲಕ ತನ್ನ ಬೌದ್ಧಿಕ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾನೆ.

ಶಿವಕುಮಾರನ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಆತ ಕೇವಲ ಮೂರು ವರ್ಷದ ಹಸುಳೆಯಾಗಿದ್ದಾಗಲೇ ತಂದೆ ಅಕಾಲಿಕ ಮರಣ ಹೊಂದುತ್ತಾರೆ. ಸಂಸಾರದ ನೊಗ ಹೊತ್ತಿದ್ದ ತಂದೆಯ ನಿಧನದಿಂದ ಕುಟುಂಬ ಕಡು ಬಡತನದ ಕೂಪಕ್ಕೆ ತಳ್ಳಲ್ಪಟ್ಟಿತು. ಆ ಪುಟ್ಟ ಮಗುವನ್ನು ಎತ್ತಿಕೊಂಡು ತಾಯಿ ರೇಖಾ ಅವರ ಮುಂದೆ ಅಂದು ಬೆಟ್ಟದಷ್ಟು ಸವಾಲುಗಳಿದ್ದವು. ಆದರೆ, ರೇಖಾ ಅವರು ಸೋಲೊಪ್ಪಿಕೊಳ್ಳಲಿಲ್ಲ; ತನ್ನ ಮಗನ ಭವಿಷ್ಯವನ್ನು ಕತ್ತಲೆಯಲ್ಲಿ ಬಿಡಬಾರದೆಂದು ನಿರ್ಧರಿಸಿದರು.
ಶಿವಕುಮಾರ ಕಮ್ಮಾರನ ಪ್ರಾಥಮಿಕ ಶಿಕ್ಷಣ ಸ್ವ ಗ್ರಾಮದಲ್ಲೇ ಮುಗಿಯಿತು. ನಂತರ ಬ್ಯಾಡಗಿ ತಾಲೂಕಿನ ಮತ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದು ಮುಂದುವರೆಯಿತು. ಅಲ್ಲಿಯೂ ಈತ 10ನೇ ತರಗತಿಯಲ್ಲಿ ಶೇಕಡಾ 92 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದನು. ಪದವಿ ಪೂರ್ವ (ಪಿಯುಸಿ) ಹಂತದಲ್ಲಿದ್ದಾಗ ಆರ್ಥಿಕ ಸಂಕಷ್ಟ ಎದುರಿಸುವಂತಾಯಿತು. ರಾಣಿಬೆನ್ನೂರು ಪಟ್ಟಣದ ಸಂಜೀವಿನಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರು, ಈ ವಿದ್ಯಾರ್ಥಿಯ ಪ್ರತಿಭೆ ಗುರುತಿಸಿ ಉಚಿತ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟರು..
ಕಾಲೇಜಿನಲ್ಲಿ ಶಿವಕುಮಾರ ಎಲ್ಲರ ಗಮನ ಸೆಳೆದಿದ್ದು ತನ್ನ ಶಿಸ್ತು ಮತ್ತು ಮುಗ್ಧ ಸ್ವಭಾವದಿಂದ. ಅಧ್ಯಾಪಕರು ಪಾಠ ಮಾಡುವಾಗ ಅತ್ಯಂತ ಶಾಂತಚಿತ್ತದಿಂದ ಕೇಳಿಸಿಕೊಳ್ಳುತ್ತಿದ್ದ ಈತ, ತನಗೆ ಬರುವ ಸಣ್ಣ ಸಂದೇಹಗಳನ್ನೂ ಉಪನ್ಯಾಸಕರ ಜೊತೆ ಚರ್ಚಿಸಿ ಅಲ್ಲೇ ಪರಿಹರಿಸಿಕೊಳ್ಳುತ್ತಿದ್ದನು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ತನ್ನ ಬಹುಮುಖ ಪ್ರತಿಭೆಯನ್ನು ತೋರುತ್ತಿದ್ದನು.
“ಶಿವಕುಮಾರ ಅತ್ಯಂತ ಮುಗ್ಧ ಸ್ವಭಾವದ ಹುಡುಗ. ಹೊಸತನ್ನು ಕಲಿಯಬೇಕು ಎನ್ನುವ ತವಕ ಮತ್ತು ಏನಾದರೂ ಸಾಧನೆ ಮಾಡಲೇಬೇಕು ಎನ್ನುವ ಛಲ ಆತನಲ್ಲಿದೆ. ಆತ ಜಿಲ್ಲೆಗೆ ಪ್ರಥಮ ಸ್ಥಾನ ತಂದಿರುವುದು ನಮ್ಮ ಕಾಲೇಜಿಗೆ ಅತ್ಯಂತ ಹೆಮ್ಮೆಯ ಸಂಗತಿ” ಎಂದು ಹರ್ಷ ವ್ಯಕ್ತಪಡಿಸಿದರು ಕಾಲೇಜು ಉಪನ್ಯಾಸಕ ರಮೇಶ ತಳವಾರ.
“ನಾನು ಓದಿನ ನಡುವೆ ಸಿಗುವ ಬಿಡುವಿನ ವೇಳೆಯಲ್ಲಿ ಕೆಲಸವನ್ನೂ ಮಾಡಿದ್ದೇನೆ. ಶ್ರದ್ಧೆ ಮತ್ತು ಆಸಕ್ತಿಯಿಂದ ಪಾಠಗಳನ್ನು ಓದುತ್ತಿದ್ದೆ. ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದು ನನಗೂ ಮತ್ತು ನನ್ನ ಅವ್ವನಿಗೂ ಅತೀವ ಸಂತೋಷ ತಂದಿದೆ. ಮುಂದೆ ಕೆಎಎಸ್ (KAS) ಅಥವಾ ಐಎಎಸ್ (IAS) ಅಧಿಕಾರಿ ಆಗಬೇಕೆಂಬ ಕನಸಿದೆ” ಎನ್ನುತ್ತಾನೆ ಶಿವಕುಮಾರ.
ಇದನ್ನೂ ಓದಿ: ಹಾವೇರಿ | ರಾಜ್ಯಪಾಲರ ಪತ್ರ: ಹಿಂದಿ ಹೇರಿಕೆ ಹುನ್ನಾರ ಕರವೇ ಆಕ್ರೋಶ
ಇಂದಿನ ಕಾಲದಲ್ಲಿ ಸಕಲ ಸೌಲಭ್ಯಗಳಿದ್ದರೂ ದಾರಿ ತಪ್ಪುವ ಹದಿಹರೆಯದವರ ನಡುವೆ, ಬಡತನ ಮತ್ತು ಅನಾಥ ಪ್ರಜ್ಞೆಯನ್ನು ಮೆಟ್ಟಿ ನಿಂತು ಸಾಧನೆಯ ಶಿಖರವೇರಿದ ಶಿವಕುಮಾರ ಕಮ್ಮಾರ ಅಪ್ಪಟ ಚಿನ್ನದಂತೆ ಕಂಗೊಳಿಸುತ್ತಿದ್ದಾನೆ. ಈತನ ಐಎಎಸ್ ಕನಸು ನನಸಾಗಲಿ, ಹಾವೇರಿಯ ಈ ಪ್ರತಿಭೆ ನಾಡಿನ ಹೆಮ್ಮೆಯ ಅಧಿಕಾರಿಯಾಗಲಿ ಎಂಬುದು ಎಲ್ಲರ ಆಶಯ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



