“ಸಮಾಜದ ಧ್ವನಿಯಾಗಬೇಕಾದ ಮಾಧ್ಯಮಗಳು, ಸಮಾಜವನ್ನು ಅಂಧಕಾರದ ಅಂಚಿಗೆ ತಳ್ಳುತ್ತಿವೆ. ಮಾಧ್ಯಮಗಳಲ್ಲಿ ಇಂದು ನೈತಿಕ ಮೌಲ್ಯ ಮಾಯವಾಗಿದೆ” ಪತ್ರಕರ್ತ, ಚಿಂತಕ ಮಂಜುನಾಥ ಕರ್ಜಗಿ ಕಳವಳ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡ, ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
“ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬರುವ ವಿಷಯಗಳು ಯಾವುದು ಸತ್ಯಕ್ಕೆ ಹತ್ತಿರವಾದ ಅಂಶ ಇರುವುದಿಲ್ಲ. ಬರೀ ಕಪೋಲಕಲ್ಪಿತ ವಿಚಾರಗಳನ್ನು ಸತ್ಯ ಎನ್ನುವಂತೆ ಬಿತ್ತರಿಸುತ್ತಿರುವುದು ಮಾಧ್ಯಮಗಳ ನೈತಿಕತೆಯ ಪತನ, ಸತ್ಯವೇ ಆದರೂ ಸಾವಿರ ಬಾರಿ ಖಚಿತ ಪಡಿಸಿ ಬಿತ್ತರಿಸುವುದು ಮಾಧ್ಯಮಗಳ ಮೊದಲ ಕೆಲಸವಾಗಬೇಕು. ಅಂದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ” ಎಂದು ಹೇಳಿದರು.
“ಮಾಧ್ಯಮಗಳು ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಅಭಿಪ್ರಾಯ ರೂಪಿಸಬೇಕು, ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡಬೇಕು” ಎಂದರು.
ಹಾವೇರಿ ಜಿಲ್ಲೆಯ ಜಾನಪದ ದೊಡ್ಡಾಟ ಕಲೆ ಬಗ್ಗೆ ಉಪನ್ಯಾಸ ನೀಡಿದ ಡಾ. ಮಂಜುನಾಥ ಚಲವಾದಿ, “ಹಾವೇರಿ ಜಿಲ್ಲೆಯ ಜಾನಪದ ಕಲೆಗಳ ತವರೂರು ಇಲ್ಲಿ ಅನೇಕ ಜನರ ಬವಣೆ ಮತ್ತು ಜೀವನ ರೂಪಿಸಿದ ಕಥೆಗಳೇ ದೊಡ್ಡಾಟದ ಕಥಾ ವಸ್ತುವಾಗಿ ಜನರ ಮುಂದೆ ವ್ಯಕ್ತವಾಗಿದೆ” ಎಂದರು.
“ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದೊಡ್ಡಾಟಕ್ಕೆ ಹೆಸರು ಮಾಡಿರುವ ಕಲಾವಿದರು ನಮ್ಮಲ್ಲಿ ಇದ್ದು, ಇದು ನಮ್ಮ ನಾಡಿನ ಪುಣ್ಯ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಡಾ. ಗಂಗರಾಜು ಅವರು ಮಾತನಾಡಿ, “ನಾಡಿಗೆ ಜಾನಪದ ಮತ್ತು ಮಾಧ್ಯಮಗಳ ಮಹತ್ವ ಬಹು ಮುಖ್ಯ” ಎಂದು ಹೇಳಿದರು.
ಉಪನ್ಯಾಸಕ ಪ್ರಭಾಕರ ಇಂಗಳಗುಂದಿ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಸುನೀತಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಂ ಪಂ ಮಾಜಿ ಅಧ್ಯಕ್ಷರಾದ ರಾಜೇಶ್ವರಿ ಬಂಡಿಮನಿ, ಸುಜಾತಾ ಬಸಲೀಹಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.




