ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ಅಗತ್ಯವಿದೆ ಅದಕ್ಕಾಗಿ ತನ್ನ ಕಡೆಯಿಂದ ಸಾಧ್ಯವಾದಷ್ಟು ಸಹಕಾರ ಇರಲಿದೆ ಎಂದು ಎಲ್.ಜಿ. ಫೌಂಡೇಶನ್ ಸಂಸ್ಥಾಪಕ ಎಲ್.ಜಿ. ಲಕ್ಷ್ಮಣಗೌಡ ತಿಳಿಸಿದರು
ತಾಲೂಕಿನ ಅಮ್ಮನಲ್ಲೂರು ಚೌಡೇಶ್ವರಿ ಪ್ರೌಢಶಾಲೆಯ ಅಭಿವೃದ್ಧಿ ಕುರಿತು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶಾಲೆಯ ಆಡಳಿತ ಮಂಡಳಿ ಸಲ್ಲಿಸಿರುವ ಮೂಲಭೂತ ಸೌಲಭ್ಯಗಳ ಬೇಡಿಕೆಗಳನ್ನು ಪರಿಶೀಲಿಸಿ, ಸಾಧ್ಯವಾಗುವ ಕೆಲಸಗಳಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಶಾಲೆಯ ಅಭಿವೃದ್ಧಿ ಸರ್ಕಾರ ಅಥವಾ ಆಡಳಿತ ಮಂಡಳಿಯೊಂದರ ಜವಾಬ್ದಾರಿಯಾಗಿರದೆ, ಈ ಶಾಲೆಯಲ್ಲಿ ಕಲಿತು ಬೆಳೆದ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೂ ಕೈಜೋಡಿಸಬೇಕು. ಹಳೆ ವಿದ್ಯಾರ್ಥಿಗಳು ತಮ್ಮ ಶಾಲೆಯೊಂದಿಗಿನ ಬಾಂಧವ್ಯವನ್ನು ಮುಂದುವರಿಸಿ, ಶಾಲೆಯ ಅಭಿವೃದ್ಧಿಗೆ ತನು, ಮನ, ಧನದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಲೆಯ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳ ಒಕ್ಕೂಟ ರಚಿಸುವುದು ಉತ್ತಮ ಆಲೋಚನೆಯಾಗಿದ್ದು, ಇದಕ್ಕೆ ಪೂರಕವಾಗಿ ಮತ್ತೊಮ್ಮೆ ಸ್ನೇಹಿತರ ಪುನರ್ಮಿಲನ ಕಾರ್ಯಕ್ರಮ ಆಯೋಜಿಸಿ, ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವಂತೆ ಸಲಹೆ ನೀಡಿದರು. ಒಕ್ಕೂಟದ ಮೂಲಕ ಶಾಲೆಯ ಅಗತ್ಯಗಳನ್ನು ಗುರುತಿಸಿ ಹಂತ ಹಂತವಾಗಿ ಪರಿಹರಿಸಲು ಸಾಧ್ಯವಾಗಲಿದೆ ಎಂದರು.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯಗಳು ಹಾಗೂ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಆರ್‌ಟಿಒ ಕಚೇರಿಗಳಲ್ಲಿ ಬೋಗಸ್ ವಾಹನ ನೋಂದಣಿ ಮತ್ತು ಡಿಎಲ್ ಅಕ್ರಮ: ಸೈಯದ್ ಮಾಲಿಕ್ ಆರೋಪ
ಸಭೆಯಲ್ಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣಾಪುರ ಶ್ರೀನಿವಾಸ, ಸದಸ್ಯ ಅಮ್ಮನಲ್ಲೂರು ದೊಡ್ಡೇಗೌಡ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ. ಮುನೇಗೌಡ, ಕೆ. ಮುನೇಗೌಡ, ಮೋಹನ್, ಆಡಳಿತಾಧಿಕಾರಿ ಸಂಪಗಿ, ಮುಖ್ಯ ಶಿಕ್ಷಕ ಮುನಿವೆಂಕಟಸ್ವಾಮಿ, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.




