ಹೊನ್ನಾವರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಅಪ್ಸರಕೊಂಡ ಕಡಲತೀರದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಮೀನುಗಾರರೊಬ್ಬರು ಮೃತಪಟ್ಟಿದ್ದು, ಪ್ರವಾಸಿಗರು ಗಾಯಗೊಂಡ ಘಟನೆ ನಡೆದಿದೆ.
ಅಪ್ಸರಕೊಂಡ ಖಾರ್ವಿಕೇರಿ ನಿವಾಸಿ ವಿನಾಯಕ ಗಣೇಶ ಖಾರ್ವಿ (35) ಮೃತಪಟ್ಟ ಮೀನುಗಾರರಾಗಿದ್ದಾರೆ. ಶನಿವಾರ (ಮೇ 16) ಸಂಜೆ ಇತರ ಮೀನುಗಾರರೊಂದಿಗೆ ಪಾತಿ ದೋಣಿಯಲ್ಲಿ ಅರಬ್ಬಿ ಸಮುದ್ರಕ್ಕೆ ತೆರಳಿದ್ದ ಅವರು, ರಾತ್ರಿ ಮೀನುಗಾರಿಕೆ ಮುಗಿಸಿ ದಡಕ್ಕೆ ಮರಳಿದ್ದರು.
ದೋಣಿಯನ್ನು ದಡಕ್ಕೆ ಎಳೆಯುತ್ತಿದ್ದ ವೇಳೆ ರಾತ್ರಿ ಸುಮಾರು 7:45ರ ಸುಮಾರಿಗೆ ಸಿಡಿಲು ಬಡಿದು, ಅವರ ಬಲಗೈ ಹಾಗೂ ಬಲಗಾಲಿಗೆ ತಗುಲಿತ್ತು. ಗಂಭೀರವಾಗಿ ಗಾಯಗೊಂಡ ವಿನಾಯಕ ಅವರನ್ನು ತಕ್ಷಣವೇ ಹೊನ್ನಾವರದ ಶ್ರೀದೇವಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಜೋಯಿಡಾ | ಹಾವು ಕಡಿದು ಗೋವಾ ಕಾಂಗ್ರೆಸ್ ಉಪಚುನಾವಣಾ ಅಭ್ಯರ್ಥಿ ಡಾ. ಕೇತನ್ ಭಾಟಿಕರ್ ದುರ್ಮರಣ
ಇದೇ ವೇಳೆ ಕಡಲತೀರಕ್ಕೆ ಬಂದಿದ್ದ ಕೆಲ ಪ್ರವಾಸಿಗರ ಮೇಲೂ ಸಿಡಿಲು ಬಡಿದು ಅವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಕುಮಾರ ಸಿ. ಕಾಂಬ್ಳೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಂದೇ ದಿನ ಕಡಲತೀರದಲ್ಲಿ ಸಿಡಿಲು ಬಡಿದ ಪರಿಣಾಮ ಮೀನುಗಾರರೊಬ್ಬರು ಮೃತಪಟ್ಟಿದ್ದು, ಪ್ರವಾಸಿಗರು ಗಾಯಗೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.




