ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ವಿವಿಧ ಗ್ರಾಮಗಳಿಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಕೆಂಚಯ್ಯನದೊಡ್ಡಿ, ಎಂ.ಜಿ.ದೊಡ್ಡಿ, ಕುರಟ್ಟಿಹೊಸೂರು, ಹೊಸದೊಡ್ಡಿ, ಕೆಂಪಯ್ಯನಹಟ್ಟಿ ಸೇರಿದಂತೆ ಹಲವು ಗ್ರಾಮಗಳಿಗೆ ಶಾಸಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ಕುಡಿಯುವ ನೀರಿನ ಸಮಸ್ಯೆಯ ಕುರಿತು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಗ್ರಾಮಸ್ಥರು ಮಾತನಾಡಿ, ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗಿದ್ದು, ಹೊಸದಾಗಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ಇನ್ನಷ್ಟು ಟ್ಯಾಂಕರ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಜೊತೆಗೆ ನೂತನ ತಂತ್ರಜ್ಞಾನ ಬಳಸಿ ಬೋರ್‌ವೆಲ್ ಕೊರೆಸಬೇಕು ಹಾಗೂ ಜಾನುವಾರುಗಳಿಗೆ ಸಹ ಸಮರ್ಪಕ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.
ಕೌದಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗೆ ಅರಣ್ಯ ಇಲಾಖೆ ತಕರಾರು ಮಾಡುತ್ತಿರುವುದಾಗಿ ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು ಸ್ಥಳದಲ್ಲಿಯೇ ಅರಣ್ಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರವೇ ಮೊದಲ ಆದ್ಯತೆ ಎಂದು ತಿಳಿಸಿದರು. ಬೇಸಿಗೆಯ ಸಂದರ್ಭದಲ್ಲಿ ಜನರಿಗೆ ನೀರು ಪೂರೈಕೆಗೆ ಯಾವುದೇ ಅಡಚಣೆ ಮಾಡಬಾರದು ಎಂದು ಸೂಚಿಸಿ, ಪೈಪ್‌ಲೈನ್ ಕಾಮಗಾರಿಗೆ ಕೂಡಲೇ ಅನುಮತಿ ನೀಡುವಂತೆ ಸೂಚಿಸಿದರು.
ಕೆಲ ಗ್ರಾಮಗಳಲ್ಲಿ ಈಗಾಗಲೇ ಕೊಳವೆಬಾವಿ ಕೊರೆಯಲಾಗಿದ್ದರೂ ಮೋಟಾರ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ನೀರು ಸರಬರಾಜು ಮಾಡುವಂತೆ ಸೂಚನೆ ನೀಡಿದರು. ಇತರ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು.

ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿರುವ ನೀರು ಸಾಲದ ಪ್ರದೇಶಗಳಲ್ಲಿ ಹೆಚ್ಚುವರಿ ಪ್ರಮಾಣದಲ್ಲಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸಚಿವರು ಗ್ರಾಮಸ್ಥರ ಸಮ್ಮುಖದಲ್ಲೇ ನಿರ್ದೇಶನ ನೀಡಿದರು. ಮನೆ ಬಳಕೆ ಮತ್ತು ಕುಡಿಯಲು ಯಾವುದೇ ಕೊರತೆಯಾಗದಂತೆ ಪರ್ಯಾಯ ವ್ಯವಸ್ಥೆಗಳ ಮೂಲಕ ನೀರು ಸರಬರಾಜು ಮಾಡಬೇಕು ಎಂದರು.
ಈ ವೇಳೆ ಶಾಸಕರಾದ ಎಂ.ಆರ್. ಮಂಜುನಾಥ್ ಮಾತನಾಡಿ, ಮಳೆಯ ಅಭಾವದಿಂದ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಜನರ ಅಗತ್ಯಕ್ಕೆ ಅನುಗುಣವಾಗಿ ತುರ್ತಾಗಿ ಸಮರ್ಪಕ ನೀರು ಪೂರೈಸಲು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಸಚಿವರ ಭೇಟಿಯ ಸಂದರ್ಭದಲ್ಲಿ ಎಂ.ಜಿ.ದೊಡ್ಡಿ ಗ್ರಾಮಸ್ಥರು ರಸ್ತೆ ಡಾಂಬರೀಕರಣ, ಗ್ರಾಮಕ್ಕೆ ಸಮೀಪ ಬಸ್ ನಿಲುಗಡೆ ಹಾಗೂ ಬೀದಿ ದೀಪ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಕುರಟ್ಟಿಹೊಸೂರಿನಲ್ಲಿ ಅರಣ್ಯ ಕಾಯ್ದೆಯಡಿ ಮಂಜೂರಾದ ಭೂಮಿಗೆ ದಾಖಲೆಗಳನ್ನು ಒದಗಿಸಬೇಕು ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಕೋರಿದರು.
ಕೆಂಪಯ್ಯನಹಟ್ಟಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಂ.ಆರ್. ಮಂಜುನಾಥ್, ಗ್ರಾಮದಲ್ಲಿನ ಸಣ್ಣ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರದ ಬಡಾವಣೆಗಳಿಗೆ ಸಚಿವ ಕೆ. ವೆಂಕಟೇಶ್ ಭೇಟಿ : ಕುಡಿಯುವ ನೀರಿನ ಅಹವಾಲು ಆಲಿಕೆ
ವಿದ್ಯಾರ್ಥಿಗಳಿಗೆ ಶಾಲೆ ಹಾಗೂ ಕಾಲೇಜಿಗೆ ಹೋಗಿಬರಲು ಬೆಳಗಿನ ವೇಳೆಯಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಮಾಡಬೇಕು ಮತ್ತು ಈ ಭಾಗದಲ್ಲೇ ಪದವಿ ಪೂರ್ವ ಕಾಲೇಜು ಆರಂಭಿಸಬೇಕು ಎಂದು ಸ್ಥಳೀಯರು ಮನವಿ ಸಲ್ಲಿಸಿದರು. ಸಚಿವರು ಕೂಡಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಬಸ್ ನಿಲುಗಡೆ ವ್ಯವಸ್ಥೆ ಮಾಡಲು ಸೂಚಿಸಿದರು. ಜೊತೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಆಶಾ ಕಾರ್ಯಕರ್ತೆಯರಿಗೆ ₹264.14 ಕೋಟಿ ಬಾಕಿ ಪ್ರೋತ್ಸಾಹ ಧನ ಬಿಡುಗಡೆ: ಬಗೆಹರಿಯದ ʼಆಶಾ ಸಾಫ್ಟ್ʼ ತಾಂತ್ರಿಕ ದೋಷ
ಭೇಟಿ ವೇಳೆ ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.




