ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಕಾನೂನಿನ ಅರಿವು ಅತ್ಯಗತ್ಯ ಎಂದು ವಕೀಲ ಹಾಗೂ ಅಂಬೇಡ್ಕರ್ ಯುವ ಸೇನೆಯ ಸೇಡಂ ಅಧ್ಯಕ್ಷ ಗೋಪಾಲ ಎಲ್. ನಾಟೆಕಾರ್ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989ರ ಕುರಿತು ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕಾಯ್ದೆಯ ಮಹತ್ವ, ಸಂತ್ರಸ್ತರಿಗೆ ದೊರೆಯುವ ಕಾನೂನು ರಕ್ಷಣೆ, ಪರಿಹಾರ ಸೌಲಭ್ಯಗಳು ಹಾಗೂ ನ್ಯಾಯ ಪಡೆಯುವ ವಿಧಾನಗಳ ಕುರಿತು ವಿವರಿಸಿದರು.
ಜಾತಿ ಆಧಾರಿತ ತಾರತಮ್ಯ ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದವರು ಭಯಪಡದೆ ದೂರು ದಾಖಲಿಸಿ ಕಾನೂನುಬದ್ಧವಾಗಿ ನ್ಯಾಯ ಪಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಪೊಲೀಸ್ ಇಲಾಖೆ, ನ್ಯಾಯಾಂಗ ವ್ಯವಸ್ಥೆ ಹಾಗೂ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.
ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ, ಸ್ವಾಭಿಮಾನ ಮತ್ತು ಗೌರವಯುತ ಜೀವನದ ಹಕ್ಕನ್ನು ನೀಡಿದೆ. ಈ ಹಕ್ಕುಗಳ ರಕ್ಷಣೆಗೆ ಯುವಜನರು ಕಾನೂನು ಅರಿವು ಬೆಳೆಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಇದನ್ನು ಓದಿದ್ದೀರಾ? ಸಮುದಾಯ ಶೌಚಾಲಯ | ಕೋಟಿ ಹಣ ಖರ್ಚಾದರೂ ಮುಗಿಯದ ಕಾಮಗಾರಿ, ತೆರೆಯದ ಬಾಗಿಲು!
ಈ ಸಂದರ್ಭದಲ್ಲಿ ಯುವ ನಾಯಕ ಸಿದ್ದು ದೊರೆ, ಮುಧೋಳ ವಲಯ ಅಧ್ಯಕ್ಷ ಕೈಲಾಸ ಮೌರ್ಯ, ಭೀಮು ಮಲ್ಕಪಲ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





